ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ (Aquib Nabi) ಕರ್ನಾಟಕ ವಿರುದ್ಧದ ತಮ್ಮ ಮೊದಲ ರಣಜಿ ಟ್ರೋಫಿ ಫೈನಲ್ (Ranji Trophy 2025-26) ಪಂದ್ಯದಲ್ಲಿ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಆ ಮೂಲಕ ತಮ್ಮ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ತಮ್ಮ ಈ ಅದ್ಭುತ ಸ್ಪೆಲ್‌ನಿಂದ ಆಕಿಬ್ ದೇಶಿ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಪ್ರದರ್ಶನದ ನಂತರ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಆಯ್ಕೆ ಸಮಿತಿಗೆ ಆಕಿಬ್ ನಬಿಯನ್ನು ಇಂಗ್ಲೆಂಡ್ ಪ್ರವಾಸಕ್ಕಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಲು ಇದು ಅತ್ಯುತ್ತಮ ವೇದಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ 584 ರನ್‌ಗಳ ಭಾರೀ ಮೊತ್ತ ಕಲೆಹಾಕಿದ ನಂತರ, ಕರ್ನಾಟಕವನ್ನು 293 ರನ್‌ಗಳಿಗೆ ಆಲ್‌ಔಟ್ ಮಾಡಿ 291 ರನ್‌ಗಳ ಭರ್ಜರಿ ಮುನ್ನಡೆ ಪಡೆಯಿತು. ಉತ್ತಮ ಲಯದಲ್ಲಿದ್ದ ಕರ್ನಾಟಕ ಬ್ಯಾಟಿಂಗ್ ಘಟಕದ ವಿರುದ್ಧ ಆಕಿಬ್ ನಬಿ ಐದು ವಿಕೆಟ್‌ಗಳನ್ನು ಪಡೆದರು. ತಮ್ಮ ಸೋಶಿಯಲ್ ಮೀಡಿಯಾದ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನು ಟ್ಯಾಗ್ ಮಾಡಿ, ನಬಿಗೆ ಭಾರತ ತಂಡದ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ರಣಜಿ ಫೈನಲ್; 293 ರನ್‌ಗೆ ಕರ್ನಾಟಕ ಆಲೌಟ್, 302 ರನ್ ಲೀಡ್ ಪಡೆದ ಜಮ್ಮು-ಕಾಶ್ಮೀರ
"ಜಮ್ಮು ಮತ್ತು ಕಾಶ್ಮೀರ ತಂಡ ತನ್ನ ಪರಿಶ್ರಮ ಹಾಗೂ ಉದ್ದೇಶದಿಂದ ಏನು ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿದೆ. ಆ ತಂಡದ ಆಟಗಾರರು ಕಣಿವೆ ರಾಜ್ಯದ ಜನತೆಯನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಕಠಿಣ ಪರಿಸ್ಥಿತಿಗಳು ಕಠಿಣ ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ಆಕಿಬ್ ನಬಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಬೇಸಿಗೆಯಲ್ಲಿ ಇಂಗ್ಲೆಂಡ್ ಪ್ರವಾಸವೇ ಅವರ ಆರಂಭವಾಗಲಿ,” ಎಂದು ಗಂಗೂಲಿ ಬರೆದಿದ್ದಾರೆ.
ಪಾಕಿಸ್ತಾನದ ಶೋಯೆಬ್ ಮಲಿಕ್ ದಾಖಲೆ ಮುರಿದ ಪಾಂಡ್ಯ
ಜಮ್ಮು ಮತ್ತು ಕಾಶ್ಮೀರ ತಂಡದ ಫೈನಲ್ ಪ್ರವೇಶದ ಅಚ್ಚರಿ ಪ್ರಯಾಣಕ್ಕೆ ನಬಿಯ ಸ್ಥಿರ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. ಈ ಟೂರ್ನಿಯಲ್ಲಿ ಆಕಿಬ್ ನಬಿ 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಅವರು ಈ ಟೂರ್ನಿಯ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಏಕೈಕ ಆವೃತ್ತಿಯಲ್ಲಿ 60 ವಿಕೆಟ್‌ಗಳ ಗಡಿ ದಾಟಿದ ಮೂರನೇ ವೇಗದ ಬೌಲರ್ ಎಂಬ ಸಾಧನೆಯನ್ನು ಕೂಡ ಅವರು ಬರೆದಿದ್ದಾರೆ.
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಕಿಬ್ ನಬಿ 23 ಓವರ್‌ಗಳಲ್ಲಿ 54 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಅವರ ಬೌಲಿಂಗ್‌ನಲ್ಲಿ ಏಳು ಮೇಡನ್ ಓವರ್‌ಗಳೂ ಸೇರಿವೆ. ತಮ್ಮ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನದ ಮೂಲಕ ಕರ್ನಾಟಕದ ಬಲಿಷ್ಠ ಬ್ಯಾಟಿಂಗ್ ಕ್ರಮವನ್ನು ನೆಲಕ್ಕೆ ಉರುಳಿಸಿದರು. ಜಮ್ಮು ಮತ್ತು ಕಾಶ್ಮೀರ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸುವಲ್ಲಿ ಆಕಿಬ್ ನಬಿ ಪ್ರಮುಖ ಪಾತ್ರವನ್ನು ವಹಿಸಿದರು.
ಕೆ ಎಲ್ ರಾಹುಲ್, ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ ಅವರ ಪ್ರಮುಖ ವಿಕೆಟ್‌ಗಳನ್ನು ಕಿತ್ತ ನಬಿ ಕರ್ನಾಟಕವನ್ನು 57ಕ್ಕೆ 4 ವಿಕೆಟ್‌ಗಳ ಸ್ಥಿತಿಗೆ ತಳ್ಳಿದರು. ಬಳಿಕ ಶಿಖರ್ ಶೆಟ್ಟಿಯನ್ನು ಕ್ಲೀನ್ ಬೌಲ್ಡ್ ಮಾಡಿ ಐದು ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಿದರು. ಇದರ ಫಲವಾಗಿ ಜಮ್ಮು ಮತ್ತು ಕಾಶ್ಮೀರದ 584 ರನ್‌ಗಳಿಗೆ ಪ್ರತಿಕ್ರಿಯೆ ಕರ್ನಾಟಕ 293 ರನ್‌ಗಳಿಗೆ ಆಲ್‌ಔಟ್ ಆಯಿತು.