ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಪ್ರಮುಖ ವೇಗದ ಬೌಲರ್ ಜೋಫ್ರಾ ಆರ್ಚರ್ ಮತ್ತು ಆಲ್‌ರೌಂಡರ್ ಜೇಕಬ್ ಬೆಥೆಲ್ ತಂಡಕ್ಕೆ ಮರಳಿದ್ದಾರೆ. ಆದರೆ, ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ.
ಈ ವಾರದ ಆರಂಭದಲ್ಲಿ ಬಟ್ಲರ್ ಮಂಡಿರಜ್ಜು ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಮೊಣಕಾಲಿನ ಗಾಯದಿಂದಾಗಿ ವೇಗದ ಬೌಲರ್ ಸಾಕಿಬ್ ಮಹಮೂದ್ ಕೂಡ ಸರಣಿಯಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಲಿರುವ ಮುಂಬರುವ ತ್ರಿಕೋನ ಸರಣಿಗೆ ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಜುಲೈನಲ್ಲಿ ಭಾರತ ವಿರುದ್ಧದ ಏಕದಿನ ಸರಣಿಯ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ಬೆಥೆಲ್ ಇದೀಗ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.
ಇಂಗ್ಲೆಂಡ್ ತಂಡದ ರಾಷ್ಟ್ರೀಯ ಆಯ್ಕೆಗಾರ ಮಾರ್ಕಸ್ ನಾರ್ತ್ ಮಾತನಾಡಿ, ಪ್ರಮುಖ ಆಟಗಾರರು ಬಹುತೇಕ ಲಭ್ಯವಿರುವುದರಿಂದ ಏಕದಿನ ಸರಣಿಯು ತಂಡಕ್ಕೆ ಉತ್ತಮ ತಯಾರಿ ನಡೆಸಲು ಅವಕಾಶ ನೀಡಲಿದೆ ಎಂದಿದ್ದಾರೆ.
IND vs WI 4th T20I: ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
“ಏಕದಿನ ಸರಣಿಗೆ ಜೇಕಬ್ ಬೆಥೆಲ್ ಮತ್ತು ಜೋಫ್ರಾ ಆರ್ಚರ್ ಮರಳಿರುವುದರಿಂದ, ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಸಿದ್ಧತೆ ಹೆಚ್ಚಿಸುವ ಸಂದರ್ಭದಲ್ಲಿ ನಮ್ಮ ತಂಡ ಬಹುತೇಕ ಪೂರ್ಣ ಸಾಮರ್ಥ್ಯದಲ್ಲಿರಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ನಾಲ್ವರು ವೇಗದ ಬೌಲರ್‌ಗಳು ದಕ್ಷಿಣ ಆಫ್ರಿಕಾ ಟೆಸ್ಟ್ ಪ್ರವಾಸಕ್ಕೆ ಮುನ್ನ ತಮ್ಮ ದೈಹಿಕ ಸಾಮರ್ಥ್ಯವನ್ನು ನಿರ್ವಹಿಸುವ ಉದ್ದೇಶದಿಂದ ತಂಡದಿಂದ ಹೊರಗುಳಿಯಲಿದ್ದಾರೆ” ಎಂದು ನಾರ್ತ್ ತಿಳಿಸಿದ್ದಾರೆ.
ಟಿ20 ಸರಣಿಗೆ ನಾಲ್ವರು ವೇಗದ ಬೌಲರ್‌ಗಳಿಗೆ ವಿಶ್ರಾಂತಿ
ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಭಿನ್ನ ಕಾರ್ಯತಂತ್ರ ಅನುಸರಿಸಲಿದೆ. ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸೋನಿ ಬೇಕರ್ ಮತ್ತು ಜೋಶ್ ಟಂಗ್ ಅವರನ್ನು ಟಿ20 ತಂಡದಿಂದ ಹೊರಗಿಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಈ ವೇಗದ ಬೌಲರ್‌ಗಳ ಕೆಲಸದ ಒತ್ತಡವನ್ನು ನಿರ್ವಹಿಸಲು ವಿಶ್ರಾಂತಿ ನೀಡಲಾಗಿದೆ.
ಈ ಆಟಗಾರರ ಅನುಪಸ್ಥಿತಿಯಲ್ಲಿ ಟಿ20 ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ಪದಾರ್ಪಣೆ ಮಾಡದ ನಾಲ್ವರು ಆಟಗಾರರಿಗೆ ಅವಕಾಶ ನೀಡಲಾಗಿದೆ. ಅವರಲ್ಲಿ 18 ವರ್ಷದ ಥಾಮಸ್ ರ್ಯೂ ಮತ್ತು ಎಡ್ಡಿ ಜಾಕ್ ಕೂಡ ಸೇರಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಇಂಗ್ಲೆಂಡ್‌ನ ಹಿರಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಂಡ ಪ್ರಕಟಣೆಗೆ ಒಂದು ದಿನ ಮುನ್ನವೇ ಥಾಮಸ್ ರ್ಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಕೇಂದ್ರ ಗುತ್ತಿಗೆಯನ್ನು ಪಡೆದಿದ್ದರು. ಫೆಬ್ರವರಿಯಲ್ಲಿ ನಡೆದ ಐಸಿಸಿ ಪುರುಷರ ಅಂಡರ್-19 ವಿಶ್ವಕಪ್‌ನಲ್ಲಿ ಅವರು ಇಂಗ್ಲೆಂಡ್ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದರು. ಈ ಇಬ್ಬರು ಯುವ ಆಟಗಾರರು ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಲಯನ್ಸ್ ತಂಡದಲ್ಲೂ ಭಾಗವಾಗಿದ್ದರು.
PAK vs SL: ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡ ಪ್ರಕಟ, ಕುಸಾಲ್ ಮೆಂಡಿಸ್ ನಾಯಕ!
ಟಿ20 ತಂಡಕ್ಕೆ ಫಿಲ್ ಸಾಲ್ಟ್ ವಾಪಸ್
ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ತೊಡೆಯ ಸ್ನಾಯು ಗಾಯದಿಂದ ಚೇತರಿಸಿಕೊಂಡು ಟಿ20 ತಂಡಕ್ಕೆ ಮರಳಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 3-0 ಅಂತರದಲ್ಲಿ ಟಿ20 ಸರಣಿ ಗೆದ್ದಾಗ ಸಾಲ್ಟ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಆ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅನ್ಯೂರಿನ್ ಡೊನಾಲ್ಡ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವೇಗದ ಬೌಲರ್ ಲ್ಯೂಕ್ ವುಡ್ ಕೂಡ ತಂಡಕ್ಕೆ ಮರಳಿದ್ದಾರೆ.
“ನಾಯಕ ಹ್ಯಾರಿ ಬ್ರೂಕ್ ನೇತೃತ್ವದಲ್ಲಿ ನಮ್ಮ ಟಿ20 ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಬಲಿಷ್ಠ ತಂಡವೊಂದರ ವಿರುದ್ಧ ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ” ಎಂದು ಮಾರ್ಕಸ್ ನಾರ್ತ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯು ಮುಂದಿನ ವರ್ಷದ ವಿಶ್ವಕಪ್‌ಗೆ ಇಂಗ್ಲೆಂಡ್ ತಂಡದ ಸಿದ್ಧತೆಯ ಪ್ರಮುಖ ಭಾಗವಾಗಲಿದ್ದು, ಟಿ20 ಸರಣಿಯಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ಪಡೆಯಲಿದ್ದಾರೆ.
IND vs WI: ರೊವ್ಮನ್ ಪೊವೆಲ್, ಶೆರ್ಫೆನ್ ಋದರ್‌ಫೋರ್ಡ್‌ಗೆ ಡೀಮೆರಿಟ್ ಪಾಯಿಂಟ್ ನೀಡಿದ ಐಸಿಸಿ!
ಇಂಗ್ಲೆಂಡ್ ಟಿ20ಐ ತಂಡ: ಹ್ಯಾರಿ ಬ್ರೂಕ್ (ನಾಯಕ), ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್,ಜೋರ್ಡನ್ ಕಾಕ್ಸ್, ಹೆನ್ರಿ ಕ್ರೊಕಾಂಬೊ, ಸ್ಯಾಮ್ ಕರನ್, ಲಿಯಾನ್ ಡಾಸನ್, ಅನೆರುನ್ ಡೊನಾಲ್ಡ್, ಇಡ್ಡಿ ಜ್ಯಾಕ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಥಾಮಸ್ ರೀ, ಫಿಲ್ ಸಾಲ್ಟ್, ಲ್ಯೂಕ್ ವುಡ್
ಇಂಗ್ಲೆಂಡ್ ಒಡಿಐ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸನ್ನಿ ಬಾಕರ್, ಟಾಮ್ ಬ್ಯಂಟನ್, ಜೇಕಬ್ ಬೆಥೆಲ್, ಜೋರ್ಡನ್ ಕಾಕ್ಸ್, ಹೆನ್ರಿ ಕೊಬಾಂಬೊ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಜೋ ರೂಟ್, ಜಾಶ್ ಟಾಂಗ್