ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs JK: 5 ವಿಕೆಟ್‌ ಕಳೆದುಕೊಂಡ ಕರ್ನಾಟಕಕ್ಕೆ ಮಯಾಂಕ್‌ ಅಗರ್ವಾಲ್‌ ಶತಕದ ಆಸರೆ!

KAR vs JK, Ranji Trophy 2025-26 Final Day 3 Highlights: ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಮೂರನೇ ದಿನವೂ ಜಮ್ಮು ಮತ್ತು ಕಾಶ್ಮೀರ ಎದುರು ಕರ್ನಾಟಕ ತಂಡದ ಹಿನ್ನಡೆಯನ್ನು ಅನುಭವಿಸಿದೆ. ಜಮ್ಮು ಮತ್ತು ಕಾಶ್ಮೀರ 584 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 220 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಹಿನ್ನಡೆಯ ಭೀತಿಗೆ ಒಳಗಾಗಿದೆ.

ಜಮ್ಮು ಮತ್ತು ಕಾಶ್ಮೀರ ಎದುರು ಹಿನ್ನಡೆಯ ಭೀತಿಯಲ್ಲಿ ಕರ್ನಾಟಕ!

ಜಮ್ಮು ಮತ್ತು ಕಾಶ್ಮೀರ ಎದುರು ರಣಜಿ ಫೈನಲ್‌ನಲ್ಲಿ ಮಯಾಂಕ್‌ ಶತಕ. -

Profile
Ramesh Kote Feb 26, 2026 6:31 PM

ಹುಬ್ಬಳ್ಳಿ: ಮಯಾಂಕ್‌ ಅಗರ್ವಾಲ್‌ (Mayanka Agarwal) ಶತಕದ ಹೊರತಾಗಿಯೂ ಕರ್ನಾಟಕ ತಂಡ, ಆಕಿಬ್‌ ಅಲಿ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಫೈನಲ್‌ ಪಂದ್ಯದ ಮೂರನೇ ದಿನವೂ ಕರ್ನಾಟಕ (Karnataka) ತಂಡ ಹಿನ್ನಡೆಯನ್ನು ಅನುಭವಿಸಿದೆ. ಜಮ್ಮು ಮತ್ತು ಕಾಶ್ಮೀರ 584 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 220 ರನ್‌ಗಳನ್ನು ಗಳಿಸಿದೆ. ಆ ಮೂಲಕ ಇನ್ನೂ 364 ರನ್‌ಗಳ ಹಿನ್ನಡೆಯಲ್ಲಿದ್ದು, ಸಂಕಷ್ಟಕ್ಕೆ ಸಿಲುಕಿದೆ.

ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 6 ವಿಕೆಟ್‌ ಕಳೆದುಕೊಂಡು 527 ರನ್‌ಗಳಿಂದ ಮೂರನೇ ದಿನದಾಟವನ್ನು ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ತಂಡ, ಮೊದಲನೇ ಸೇಷನಲ್ಲಿಯೇ 173.1 ಓವರ್‌ಗಳಿಗೆ 584 ರನ್‌ಗಳಿಗೆ ಆಲ್‌ಔಟ್‌ ಆಯಿತು. ಎರಡನೇ ದಿನ ಅರ್ಧಶತಕ ಗಳಿಸಿದ್ದ ಸಾಹಿಲ್‌ ಲೋಥ್ರಾ ಮೂರನೇ ದಿನ 72 ರನ್‌ ಗಳಿಸಿದ ಬಳಿಕ ಔಟ್‌ ಆದರು. ಅಬಿಬ್‌ ಮುಷ್ತಾಕ್‌ ಹಾಗೂ ಯಧುವೀರ್‌ ಸಿಂಗ್‌ ಚರಕ್‌ ಕ್ರಮವಾಗಿ 28 ರನ್‌ ಹಾಗೂ 30 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ರಣಜಿ ಟ್ರೋಫಿ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ ಏನಾಗುತ್ತದೆ?

ಕರ್ನಾಟಕ ತಂಡದ ಪರ ಪ್ರಸಿಧ್‌ ಕೃಷ್ಣ 98 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರೆ, ವಿದ್ಯಾದರ್‌ ಪಾಟೀಲ್‌, ವೈಶಾಖ್‌ ವಿಜಯ್‌ಕುಮಾರ್‌, ಶ್ರೀಕರ್‌ ಶೆಟ್ಟಿ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಕರ್ನಾಟಕಕ್ಕೆ ಆರಂಭಿಕ ಆಘಾತ ನೀಡಿದ ಆಕಿಬ್‌ ನಬಿ

ಬಳಿಕ ಪ್ರಥಮ ಇನಿಂಗ್ಸ್‌ ಅನ್ನು ಆರಂಭಿಸಿದ ಕರ್ನಾಟಕ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಮಯಾಂಕ್‌ ಅಗರ್ವಾಲ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಿ ಕೆಎಲ್‌ ರಾಹುಲ್‌ ಆಡಿದ 39 ಎಸೆತಗಳಲ್ಲಿ ಕೇವಲ 13 ರನ್‌ಗೆ ಆಕಿಬ್‌ ನಬಿಗೆ ವಿಕೆಟ್‌ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ದೇವದತ್‌ ಪಡಿಕ್ಕಲ್‌ (11 ರನ್‌) ಅವರನ್ನು ಸುನೀಲ್‌ ಕುಮಾರ್‌ ಔಟ್‌ ಮಾಡಿದರು. ನಂತರ ಆಕಿಬ್‌ ನಬಿ ತಮ್ಮ ಮಾರಕ ಬೌಲಿಂಗ್‌ ಮುಂದುವರಿಸಿ ಹಿರಿಯ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಹಾಗೂ ಸ್ಮರಣ್‌ ರವಿಚಂದ್ರನ್‌ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ ಕರ್ನಾಟಕ ತಂಡ, 57 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.

KAR vs JK: ಎರಡನೇ ದಿನವೂ ಕರ್ನಾಟಕಕ್ಕೆ ಹಿನ್ನಡೆ, 500 ರನ್‌ ಗಡಿ ದಾಟಿದ ಜಮ್ಮು ಮತ್ತು ಕಾಶ್ಮೀರ!

ಮಯಾಂಕ್‌-ಶ್ರೇಯಸ್‌ ಗೋಪಾಲ್‌ ಶತಕದ ಜೊತೆಯಾಟ

ಐದನೇ ವಿಕೆಟ್‌ಗೆ ಜೊತೆಯಾದ ಮಾಯಂಕ್‌ ಅಗರ್ವಾಲ್‌ ಹಾಗೂ ಶ್ರೇಯಸ್‌ ಗೋಪಾಲ್‌ ದೀರ್ಘಾವಧಿ ಬ್ಯಾಟ್‌ ಮಾಡಿದರು. ಈ ಜೋಡಿ ಐದನೇ ವಿಕೆಟ್‌ಗೆ 105 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ಆತಿಥೇಯ ತಂಡವನ್ನು ಅಪಾಯದಿಂದ ಪಾರು ಮಾಡಿತು. 83 ಎಸೆತಗಳಲ್ಲಿ 27 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ಶ್ರೇಯಸ್‌ ಗೋಪಾಲ್‌ ಯಧುವೀರ್‌ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು.



ಕರ್ನಾಟಕ ತಂಡಕ್ಕೆ ಮಯಾಂಕ್‌ ಅಗರ್ವಾಲ್‌ ಶತಕದ ಆಸರೆ

ಕೆಎಲ್‌ ರಾಹುಲ್‌, ಕರುಣ್‌ ನಾಯರ್‌ ಸೇರಿದಂತೆ ಪ್ರಮುಖ ಐವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ಕರ್ನಾಟಕ ತಂಡಕ್ಕೆ ಮಯಾಂಕ್‌ ಅಗರ್ವಾಲ್‌ ಆಸರೆಯಾಗಿದ್ದಾರೆ. ಅವರು ಇನಿಂಗ್ಸ್‌ ಆರಂಭಿಸಿದ ಬಳಿಕ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. ಅವರು ಆಡಿದ 207 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ ಅಜೇಯ 130 ರನ್‌ ಗಳಿಸಿದ್ದಾರೆ. ಆ ಮೂಲಕ ನಿರ್ಣಾಯಕ ಸಮಯದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಶತಕ ಕರ್ನಾಟಕ ತಂಡಕ್ಕೆ ಶ್ರೀರಕ್ಷೆಯಾಗಿದೆ. ಮತ್ತೊಂದು ತುದಿಯಲ್ಲಿ 75 ಎಸೆತಗಳಲ್ಲಿ ಅಜೇಯ 27 ರನ್‌ ಗಳಿಸಿರುವ ಕೃತಿಕ್‌ ಕೃಷ್ಣ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 69 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 220 ರನ್‌ ಕಲೆ ಹಾಕಿದೆ ಹಾಗೂ ಇನ್ನೂ 364 ರನ್‌ ಹಿನ್ನಡೆಯಲ್ಲಿದೆ.

KAR vs JK: ಕೆವಿ ಅನೀಶ್‌ಗೆ ತಲೆಯಿಂದ ಗುದ್ದಿದ ಜಮ್ಮು-ಕಾಶ್ಮೀರ ನಾಯಕ ಪರಾಸ್‌ ದೋಗ್ರಾ!

ಹಿನ್ನಡೆಯ ಭೀತಿಯಲ್ಲಿ ಕನ್ನಡಿಗರು

ಕರ್ನಾಟಕ ತಂಡ ಈಗಾಗಲೇ ಪ್ರಮುಖ ಐವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿದೆ. ಇದೀಗ ಉಳಿದಿರುವುದು ಮಯಾಂಕ್‌ ಹಾಗೂ ಕೃಷ್ಣ ಮಾತ್ರ. ಅಲ್ಲದೆ ಆತಿಥೇಯರು ಮುನ್ನಡೆ ಸಾಧಿಸಬೇಕಾದರೆ ಇನ್ನೂ 364 ರನ್‌ ಅಗತ್ಯವಿದೆ. ಹಾಗಾಗಿ ಪಡಿಕ್ಕಲ್‌ ಬಳಗಕ್ಕೆ ಮಯಾಂಕ್‌ ಹಾಗೂ ಕೃಷ್ಣ ಅವರಿಂದ ದೊಡ್ಡ ಜೊತೆಯಾಟದ ಅಗತ್ಯವಿದೆ. ಒಂದು ವೇಳೆ ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೆ, ಜಮ್ಮು ಮತ್ತು ಕಾಶ್ಮೀರ ಚೊಚ್ಚಲ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ.