KAR vs SAU: ಕರ್ನಾಟಕ ತಂಡಕ್ಕೆ ಕರುಣ್, ಪಡಿಕ್ಕಲ್ ಅರ್ಧಶತಕಗಳ ಬಲ!
2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯು ಬುಧವಾರ ಆರಂಭವಾಗಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ, ಸೌರಾಷ್ಟ್ರ ವಿರುದ್ದ ಕಾದಾಟ ನಡೆಸುತ್ತಿದೆ. ಪಂದ್ಯದ ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ, 90 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 295 ರನ್ ಗಳಿಸಿ ಉತ್ತಮ ಆರಂಭ ಪಡೆದಿದೆ.

ಕರ್ನಾಟಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲಿಯೇ ಕರುಣ್ ನಾಯರ್ ಅರ್ಧಶತಕ. -

ರಾಜ್‌ಕೋಟ್: ದೇವದತ್ ಪಡಿಕ್ಕಲ್, ಕರುಣ್ ನಾಯರ್ (Karun Nair) ಹಾಗೂ ಆರ್ ಸ್ಮರಣ್ (R Smaran) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ (Karnataka), ಸೌರಾಷ್ಟ್ರ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26_ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡದಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 295 ರನ್‌ಗಳನ್ನು ಕಲೆ ಹಾಕಿದೆ.
ಇಲ್ಲಿನ ನಿರಂಜನ್ ಶಾ ಮೈದಾನದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡದ ಪರ ಇನಿಂಗ್ಸ್ ಆರಂಭಿಸಿದ ನಿಕಿನ್ ಜೋಸ್ (12) ಹಾಗೂ ನಾಯಕ ಮಯಾಂಕ್ ಅಗರ್ವಾಲ್ (2) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಇಬ್ಬರೂ ಓಪನಿಂಗ್ ಬ್ಯಾಟ್ಸ್‌ಮನ್‌ಗಳನ್ನು ಧರ್ಮೇಂದ್ರ ಸಿನ್ಹ್ ಜಡೇಜಾ ಔಟ್ ಮಾಡಿದರು. ಆ ಮೂಲಕ ಕರ್ನಾಟಕ 26 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
ಮಹಾರಾಷ್ಟ್ರ ಪರ ಆಡಿದ ಮೊದಲನೇ ರಣಜಿ ಪಂದ್ಯದಲ್ಲಿಯೇ ಪೃಥ್ವಿ ಶಾ ಡಕ್‌ಔಟ್! ವಿಡಿಯೊ
ಕರುಣ್-ಪಡಿಕ್ಕಲ್ ಜುಗಲ್‌ಬಂದಿ
ಮೂರನೇ ವಿಕೆಟ್‌ಗೆ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಸೌರಾಷ್ಟ್ರ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ 146 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡವನ್ನು ಮೇಲೆತ್ತಿದರು.
ತವರು ತಂಡಕ್ಕೆ ಕರುಣ್ ಭರ್ಜರಿ ಕಮ್‌ಬ್ಯಾಕ್
ವಿದರ್ಭ ತಂಡದಿಂದ ತವರು ತಂಡಕ್ಕೆ ಮರಳಿದ ಕರುಣ್ ನಾಯರ್, ತಮ್ಮ ಕಮ್‌ಬ್ಯಾಕ್ ಪಂದ್ಯದಲ್ಲಿಯೇ ಮಿಂಚಿದರು. ಅವರು ಆಡಿದ 126 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 73 ರನ್ ಗಳಿಸಿದರು. ಆ ಮೂಲಕ ಶತಕ ಸಿಡಿಸುವ ಹಾದಿಯಲ್ಲಿ ಕರುಣ್ ನಾಯರ್ ಅವರನ್ನು ಧರ್ಮೇಂದ್ರ ಸಿನ್ಹ ಜಡೇಜಾ ಔಟ್ ಮಾಡಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ ಸೂರ್ಯಕುಮಾರ್ ಯಾದವ್!
ಮಿಂಚಿದ ದೇವದತ್ ಪಡಿಕ್ಕಲ್
ಕರುಣ್ ನಾಯರ್ ಅವರ ಜೊತೆ ದೊಡ್ಡ ಜೊತೆಯಾಟವನ್ನು ಆಡಿದ್ದ ದೇವದತ್ ಪಡಿಕ್ಕಲ್, ಅದ್ಭುತ ಇನಿಂಗ್ಸ್ ಆಡಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸೊಗಸಾಗಿ ಬ್ಯಾಟ್ ಮಾಡುತ್ತಿದ್ದರು. ಅವರು ಆಡಿದ 141 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 96 ರನ್ ಗಳಿಸಿ ಪ್ರಸಕ್ತ ಸಾಲಿನಲ್ಲಿ ಮೊದಲನೇ ಶತಕವನ್ನು ಬಾರಿಸುವ ಹಾದಿಯಲ್ಲಿದ್ದರು. ಆದರೆ, ಅವರನ್ನು ಕೂಡ ಧರ್ಮೇಂದ್ರ ಸಿನ್ಹ ಜಡೇಜಾ ಔಟ್ ಮಾಡಿದರು. ಆ ಮೂಲಕ ಕೇವಲ 4 ರನ್ ಅಂತರದಲ್ಲಿ ಪಡಿಕ್ಕಲ್ ಶತಕ ವಂಚಿತರಾದರು.
ದೊಡ್ಡ ಮೊತ್ತದತ್ತ ಕರ್ನಾಟಕ
ಆರನೇ ವಿಕೆಟ್‌ಗೆ ಜೊತೆಯಾದ ಆರ್ ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಚೆಂಡು ಹಳೆಯದಾದ ಬಳಿಕ ಹೆಚ್ಚಿನ ತಿರುವು ಪಡೆಯುತ್ತಿದ್ದರೂ ಅದನ್ನು ಈ ಜೋಡಿ ಸಮರ್ಥವಾಗಿ ನಿರ್ವಹಿಸಿರು. ವಿಶೇಷವಾಗಿ ಆರ್ ಸ್ಮರಣ್, ಅದ್ಭುತ ಇನಿಂಗ್ಸ್ ಆಡಿದರು. ಅವರು ಆಡಿದ 120 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 66 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಜೊತೆ ಶತಕದ ಜೊತೆಯಾಟವನ್ನು ಆಡಿದ ಶ್ರೇಯಸ್ ಗೋಪಾಲ್ ಅವರು ಕೂಡ 69 ಎಸೆತಗಳಲ್ಲಿ ಅಜೇಯ 38 ರನ್‌ಗಳನ್ನು ಬಾರಿಸಿದ್ದಾರೆ. ಕರ್ನಾಟಕ ಈಗಾಗಲೇ 295 ರನ್ ಗಳಿಸಿದ್ದು, ಎರಡನೇ ದಿನ ದೊಡ್ಡ ಮೊತ್ತವನ್ನು ಕಲೆ ಹಾಕಬಹದು.