ನವದೆಹಲಿ: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Mini Auction) ಟೂರ್ನಿಯ ಮಿನಿ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿವೆ. ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದ್ದು, ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರನ್ನು ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ನವೆಂಬರ್ 15 ರಂದು ಕೊನೆಯ ದಿನಾಂಕವಾಗಿದೆ. ಅದರಂತೆ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ, ತನ್ನಲ್ಲಿರುವ ಅತ್ಯಂತ ದುಬಾರಿ ಆಟಗಾರನಾದ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಮಿನಿ ಹರಾಜಿಗೆ ಬಿಡುಗಡೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್ ತಂಡ ಆಡಿದ್ದ 14 ಪಂದ್ಯಗಳಿಂದ 5 ರಲ್ಲಿ ಗೆಲುವು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿತ್ತು ಹಾಗೂ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಕಳೆದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ 23.75 ಕೋಟಿ ರು. ಗಳಿಗೆ ಖರೀದಿಸಿತ್ತು. ಆ ಮೂಲಕ ಐಪಿಎಲ್ ಟೂರ್ನಿಯ ಕೆಕೆಆರ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಮಿಚೆಲ್ ಸ್ಟಾರ್ಕ್ ಅವರು ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಕೆಕೆಆರ್ 24.75 ಕೋಟಿ ರು. ಗಳಿಗೆ ಖರೀದಿಸಿತ್ತು. 2024ರ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅಯ್ಯರ್, 2025ರ ಟೂರ್ನಿಯಲ್ಲಿ ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಕೋಲ್ಕತಾ ಫ್ರಾಂಚೈಸಿಗೆ ನಿರಾಶೆ ಮೂಡಿಸಿದ್ದರು.
IPL 2026: ಹೈದರಾಬಾದ್‌ನಿಂದ ಲಖನೌ ಸೂಪರ್ ಜಯಂಟ್ಸ್‌ಗೆ ಮೊಹಮ್ಮದ್ ಶಮಿ ಟ್ರೇಡ್ ಡೀಲ್?
ಕಳೆದ ಸೀಸನ್‌ನಲ್ಲಿ ಅವರು ವಿಫಲರಾದ ಕಾರಣ ಕೆಕೆಆರ್ ಉಳಿಸಿಕೊಳ್ಳಲು ಮನಸು ಮಾಡುತ್ತಿಲ್ಲ. ಅವರನ್ನು ರಿಲೀಸ್ ಮಾಡಿದರೆ, 23 ಕೋಟಿ ರು. ಗಳನ್ನು ತಮ್ಮ ಖಾತೆಯಲ್ಲಿ ಉಳಿಸಿಕೊಳ್ಳಲು ಕೆಕೆಆರ್ ಯೋಜನೆ ರೂಪಿಸುತ್ತಿದೆ. ಈ ಕಾರಣದಿಂದಾಗಿ ಕೋಲ್ಕತಾ ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಅವರನ್ನು ರಿಲೀಸ್ ಮಾಡಲು ಮುಂದಾಗಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರಿಗೆ ಬಿಡ್ ವಾರ್ ನಡೆದಿತ್ತು. ವೆಂಕಟೇಶ್ ಅಯ್ಯರ್ ಅವರಿಗೆ ಆರಂಭದಿಂದಲೂ ಕೆಕೆಆರ್ ಹಾಗೂ ಎಲ್‌ಎಸ್‌ಜಿ ನಡುವೆ ಬಿಡ್ ವಾರ್ ನಡೆದಿತ್ತು. ಆ ಮೂಲಕ ಅವರ ಮೊತ್ತ 7.75 ಕೋಟಿ ರು. ಗಳಾಗುತ್ತಿದ್ದಂತೆ ಲಖನೌ ಫ್ರಾಂಚೈಸಿ, ಬಿಡ್‌ನಿಂದ ದೂರ ಉಳಿಯಿತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೆಕೆಆರ್‌ಗೆ ತೀವ್ರ ಪೈಪೋಟಿ ನೀಡಿತ್ತು. ಅಂತಿಮವಾಗಿ 23.50 ಕೋಟಿ ರು. ಗಳಿಗೆ ಕೆಕೆಆರ್ ತನ್ನ ಆಟಗಾರನನ್ನು ಉಳಿಸಿಕೊಳ್ಳುವಲ್ಲಿ ಸಫಲವಾಯಿತು.
IPL 2026: ʻಈ ಆಟಗಾರನಿಗೋಸ್ಕರ ಎಸ್‌ಆರ್‌ಎಚ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆʼ-ಡೇಲ್ ಸ್ಟೇನ್!
ಅಜಿಂಕ್ಯ ರಹಾನೆಯನ್ನು ಉಳಿಸಿಕೊಳ್ಳಲಿರುವ ಕೆಕೆಆರ್
ಕೆಕೆಆರ್ ತಂಡ ಅಜಿಂಕ್ಯ ರಹಾನೆ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಅವರು ನಾಯಕನಾಗಿ ಮುಂದುವರಿಯುತ್ತಾರೋ? ಅಥವಾ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ. ಕಳೆದ ವರ್ಷ ಕೆಕೆಆರ್ ನಾಯಕನಾಗಿ ರಹಾನೆ ಹೆಚ್ಚಿನ ರನ್ ಗಳಿಸಿರಲಿಲ್ಲ ಮತ್ತು ಅವರು ಕೇವಲ 5 ಗೆಲುವುಗಳನ್ನು ಮಾತ್ರ ಗಳಿಸಿದ್ದರು.