ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಯಲ್ಲಿ ಎಂಎಸ್ ಧೋನಿ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್, ಸಿಎಸ್‌ಕೆ ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆಂದು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಕೃಷ್ಣಮಾಚಾರಿ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 19ನೇ ಸೀಸನ್‌ನಲ್ಲಿ ಎಂಎಸ್ ಧೋನಿ ಆಡಬೇಕಾಗಿತ್ತು, ಆದರೆ ಫಿಟ್‌ನೆಸ್ ಹಾಗೂ ಗಾಯದ ಕಾರಣ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಸಿಎಸ್‌ಕೆ ಈ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 8 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಹಾಗಾಗಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.
ಟೂರ್ನಿಯ ಆರಂಭಕ್ಕೂ ಮುನ್ನ ಎಂಎಸ್ ಧೋನಿ ತಯಾರಿ ನಡೆಸುತ್ತಿದ್ದರು ಹಾಗೂ ಸಿಎಸ್‌ಕೆ ಕ್ಯಾಂಪ್‌ನಲ್ಲಿ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವಿಡಿಯೊಗಳು ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದಿತ್ತು. ಆದರೆ, ಅವರು ಒಂದೇ ಒಂದು ಪಂದ್ಯದಲ್ಲಿಯೂ ಆಡಲಿಲ್ಲ. ಗಾಯ ಹಾಗೂ ಫಿಟ್‌ನೆಸ್ ಸಮಸ್ಯೆಯ ಕಾರಣಗಳನ್ನು ಹೇಳುವ ಮೂಲಕ ಟೀಮ್ ಮ್ಯಾನೇಜ್‌ಮೆಂಟ್ ಎಂಎಸ್ ಧೋನಿಯ ಬಗ್ಗೆ ಅಭಿಮಾನಿಗಳನ್ನು ದಿಕ್ಕನ್ನು ತಪ್ಪಿಸಿದ್ದಾರೆಂದು ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಗುಡುಗಿದ್ದಾರೆ.
ಮುಂದಿನ ವರ್ಷ ಧೋನಿ ಐಪಿಎಲ್‌ನಲ್ಲಿ ಆಡುತ್ತಾರಾ?; ಮಹತ್ವದ ಹೇಳಿಕೆ ನೀಡಿದ ಗಾಯಕ್ವಾಡ್
ಗುಜರಾತ್ ಟೈಟನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡ 89 ರನ್‌ಗಳ ಸೋಲಿನ ಬಳಿಕ ಪ್ಲೇಫ್ಸ್‌ನಿಂದ ಹೊರಬಿದ್ದ ಬಳಿಕ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಕೆ ಶ್ರೀಕಾಂತ್, "ಟೂರ್ನಿಯ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ಹಾಗೂ ಅವರು ತಂಡಕ್ಕೆ ಲಭ್ಯರಾಗಲಿದ್ದಾರೆಂದು ಹೇಳಿದ್ದರು," ಎಂದು ತಿಳಿಸಿದ್ದಾರೆ.
"ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಅದೇ ಹಾಡನ್ನು ಹಾಡಿದ್ದರು. ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಅದೇ ಹಾಡನ್ನು ಹಾಡಿದ್ದರು. ಅವರು ಬಹುಶಃ ಮುಂದಿನ ಪಂದ್ಯಕ್ಕೆ ಸಿದ್ದರಾಗಬಹುದು ಎಂದಿದ್ದರು. ಅದರಂತೆ ಪಂದ್ಯಕ್ಕೂ ಮುನ್ನ ಎಂಎಸ್ ಧೋನಿ ಅಭ್ಯಾಸದಲ್ಲಿ ತೊಡಗಿದ್ದರು. ಇದನ್ನು ನೋಡಿದ ಅಭಿಮಾನಿಗಳಿಗೂ ಕೂಡ ಧೋನಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಆಡಬಹುದು ಎಂದು ಭಾವಿಸಿದ್ದರು,"ಎಂದು ಕೆ ಶ್ರೀಕಾಂತ್ ಹೇಳಿದ್ದಾರೆ.
IPL 2026: ಸೋಲಿನ ಮಧ್ಯೆ 24 ಲಕ್ಷ ದಂಡಕ್ಕೆ ಗುರಿಯಾದ ಋತುರಾಜ್ ಗಾಯಕ್ವಾಡ್
ಎಂಎಸ್‌ಧೋನಿ ತಂಡದೊಂದಿಗೆ ಹೊರಗಿನ ಕೆಲ ಪಂದ್ಯಗಳಿಗೆ ಪ್ರಯಾಣಿಸಲಿಲ್ಲ. ಅವರು ಕೊನೆಯ ಕೆಲವು ತವರು ಪಂದ್ಯಗಳ ನಿಮಿತ್ತ ಚೆಪಾಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೂ ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ಸ್ಪಷ್ಟವಾಗಿ ತಂಡದಿಂದ ಹೊರಗಿಟ್ಟಿದ್ದಾರೆ ಎಂದು ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ.
ಸಿಎಸ್‌ಕೆಯ ಕೊನೆಯ ಪಂದ್ಯದ ಬಳಿಕ ಟಿವಿ ನಿರೂಪಕ ಗ್ರೇಮ್ ಸ್ವಾನ್, ಎಂಎಸ್ ಧೋನಿ ಕುರಿತು ಪ್ರಶ್ನಿಸಿದಾಗ ಋತುರಾಜ್ ಗಾಯಕ್ವಾಡ್ “ಮುಂದಿನ ವರ್ಷ ನಿಮಗೆ ಗೊತ್ತಾಗುತ್ತದೆ” ಎಂದು ಉತ್ತರಿಸಿದರು.
“ನಂತರ ಅವರು, ‘ಇಲ್ಲ, ಇಲ್ಲ. ಅವರು ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. ಬಳಿಕ ಅವರು ತೊಡೆಯ ಭಾಗದಲ್ಲಿ ಗಾಯವಾಗಿದೆ ಎಂದೂ ಹೇಳಿದರು,” ಎಂದು ಶ್ರೀಕಾಂತ್ ಹೇಳಿದರು.
“ಈ ರೀತಿಯ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಸ್ಪಷ್ಟತೆ ನೀಡಬೇಕು. ಅವರು ಸಂಪೂರ್ಣವಾಗಿ ಸೀಸನ್ ಆಡಲು ಹೋಗುವುದಿಲ್ಲ ಎಂದಿದ್ದರೆ, ಅದೂ ಸರಿ. ಅದನ್ನು ಮುಂಚಿತವಾಗಿಯೇ ಸ್ಪಷ್ಟಪಡಿಸಿದ್ದರೆ ಅಭಿಮಾನಿಗಳು ಮಾನಸಿಕವಾಗಿ ಸಿದ್ಧರಾಗುತ್ತಿದ್ದರು,” ಎಂದು ಅವರು ಅಭಿಪ್ರಾಯಪಟ್ಟರು.
CSK vs GT: ಚೆನ್ನೈ ಸೂಪರ್ ಕಿಂಗ್ಸ್ ಎದುರು ಭರ್ಜರಿ ಗೆಲುವು ಪಡೆದ ಗುಜರಾತ್ ಟೈಟನ್ಸ್!
ಎಂಎಸ್ ಧೋನಿಯನ್ನು ಯಾರೂ ಕಳೆದುಕೊಳ್ಳುವುದಿಲ್ಲ: ಶ್ರೀಕಾಂತ್
“ಪ್ರತಿ ಪಂದ್ಯಕ್ಕೂ ಮುನ್ನ ಕೇಳಿದಾಗ, ಋತುರಾಜ್ ‘ದೊಡ್ಡವರು ಮುಂದಿನ ಪಂದ್ಯಕ್ಕೆ ಲಭ್ಯರಾಗುತ್ತಾರೆ’ ಎಂದು ಹೇಳುತ್ತಿದ್ದರು. ಅವರು ಅದನ್ನೇ ಪುನರಾವರ್ತಿಸುತ್ತಿದ್ದರು. ಅಲ್ಲಿ ಟೀಮ್ ಮ್ಯಾನೇಜ್‌ಮೆಂಟ್, ನಾಯಕ ಮತ್ತು ಸ್ಟೀಫನ್ ಫ್ಲೆಮಿಂಗ್ ಸ್ಪಷ್ಟವಾಗಿ ಹೇಳಬೇಕಿತ್ತು — ‘ಅವರು ಈ ಸೀಸನ್‌ನಲ್ಲಿ ಆಡುತ್ತಿಲ್ಲ, ಅವರು ಸಂಪೂರ್ಣ ಫಿಟ್ ಆಗಿಲ್ಲ’ ಎಂದು. ಹೀಗೆ ಹೇಳಿದ್ದರೆ ಅಭಿಮಾನಿಗಳೂ ಅದನ್ನು ಒಪ್ಪಿಕೊಂಡು ಮುಂದಕ್ಕೆ ಸಾಗುತ್ತಿದ್ದರು,” ಎಂದು ಕೆ ಶ್ರೀಕಾಂತ್ ಗುಡುಗಿದ್ದಾರೆ.
“ನಿಜವಾಗಿ ನೋಡಿದರೆ, ಈಗ ಯಾರೂ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ಪಂದ್ಯಗಳಲ್ಲಿ ಧೋನಿ ಇಲ್ಲ ಎಂದು ಯಾರೂ ಪ್ರಶ್ನಿಸುತ್ತಿಲ್ಲ. ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಏಕೆ ಇಲ್ಲ ಎಂಬುದನ್ನು ಕೆಲವರು ಕೇಳಬಹುದು, ಆದರೆ ಅವರು ಆಡುತ್ತಿಲ್ಲ ಎಂಬುದರ ಬಗ್ಗೆ ಎಷ್ಟು ಜನ ಪ್ರಶ್ನಿಸುತ್ತಿದ್ದಾರೆ? ಧೋನಿಯ ಯುಗ ಮುಗಿದಿದೆ. ಧೋನಿ ಐಪಿಎಲ್ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು ಮತ್ತು ಶ್ರೇಷ್ಠ ನಾಯಕರಲ್ಲಿಯೂ ಒಬ್ಬರು. ಅದನ್ನು ನೀವು ಸ್ಪಷ್ಟಪಡಿಸಬೇಕಿತ್ತು. ಅಭಿಮಾನಿಗಳನ್ನು ಯಾಕೆ ನಿರಂತರವಾಗಿ ಗೊಂದಲಕ್ಕೀಡು ಮಾಡುತ್ತಿದ್ದೀರಿ?” ಎಂದು ಅವರು ಪ್ರಶ್ನಿಸಿದರು.