ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಫ್ಲ್ಯಾಟ್‌ ಪಿಚ್‌ಗಳನ್ನು ಮಾಡಿ 300 ರನ್‌ ಗಳಿಸಿದರೆ ಬೌಲರ್‌ಗಳು ಎಲ್ಲಿ ಹೋಗಬೇಕು?ʼ: ಸಂಜಯ್‌ ಮಾಂಜ್ರೇಕರ್‌!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳಿಗೆ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ನೀಡುತ್ತಿರುವ ಫ್ಲ್ಯಾಟ್‌ ಪಿಚ್‌ಗಳ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಫ್ಲ್ಯಾಟ್‌ ಪಿಚ್‌ಗಳಲ್ಲಿ ತಂಡಗಳು ಸುಲಭವಾಗಿ 300 ರನ್‌ಗಳನ್ನು ಕಲೆ ಹಾಕಬಹುದು ಎಂದು ಅವರು ಹೇಳಿದ್ದಾರೆ.

ಫ್ಲ್ಯಾಟ್‌ ಪಿಚ್‌ಗಳ ವಿರುದ್ಧ ಗುಡುಗಿದ ಸಂಜಯ್‌ ಮಾಂಜ್ರೇಕರ್‌.

ನವದೆಹಲಿ: ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವಣ ಟಿ20ಐ ಸರಣಿಯಲ್ಲಿ (IND vs WI) ನಿಯಮಿತವಾಗಿ 200 ರನ್‌ಗಳಿಂದ ಹೆಚ್ಚಿನ ಮೊತ್ತ ದಾಖಲಾಗುತ್ತಿದೆ. 200 ರನ್‌ಗಳ ಗುರಿಯನ್ನು ನೀಡಿದರೂ ಈ ಮೊತ್ತಕ್ಕೆ ಚೇಸಿಂಗ್‌ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ. ಎರಡನೇ ಪಂದ್ಯದಲ್ಲಿ ಭಾರತ ನೀಡಿದ್ದ 250 ರನ್‌ಗಳನ್ನು ವಿಂಡೀಸ್‌ ಚೇಸ್‌ ಮಾಡಿತ್ತು. ಕೊನೆಯ ಮೂರು ಪಂದ್ಯಗಳಲ್ಲಿಯೂ 200 ಕ್ಕೂ ಹೆಚ್ಚಿನ ಮೊತ್ತ ದಾಖಲಾಗಿತ್ತು. ಈ ಬಗ್ಗೆ ಮಾಜಿ ಕಿಕೆಟಿಗ ಸಂಜಯ್‌ ಮಾಂಜ್ರೇಕರ್‌ (Sanjay Manjrekar) ಟೀಕಿಸಿದ್ದಾರೆ. ಫ್ಲ್ಯಾಟ್‌ ಪಿಚ್‌ಗಳನ್ನು ಮಾಡಿಕೊಂಡರೆ, ಬೌಲರ್‌ಗಳು ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪಿಚ್‌ಗಳು ಮತ್ತು ಬೌಂಡರಿಗಳ ಗಾತ್ರದಲ್ಲಿ ಬದಲಾವಣೆ ಮಾಡುವ ಮೂಲಕ ಬ್ಯಾಟಿಂಗ್‌ಗೆ ಇನ್ನಷ್ಟು ಅನುಕೂಲ ಕಲ್ಪಿಸಬಹುದು ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬೌಲರ್‌ಗಳಿಗೂ ಸಮಾನ ಅವಕಾಶ ನೀಡುವಂತಹ ಪಿಚ್‌ಗಳ ಅಗತ್ಯದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ.

“ಪಿಚ್‌ಗಳನ್ನು ಇನ್ನಷ್ಟು ಫ್ಲ್ಯಾಟ್ ಆಗಿ ಮಾಡುವುದು, ಬೌಂಡರಿಗಳನ್ನು ಚಿಕ್ಕದಾಗಿಸುವುದು ಮತ್ತು ಬೌಲರ್‌ಗಳ ವಿರುದ್ಧ ಹೆಚ್ಚಿನ ನಿಯಮಗಳನ್ನು ಜಾರಿಗೆ ತರುವುದು ಸಾಧ್ಯ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಇದರಿಂದ ನಾವು 20 ಓವರ್‌ಗಳಲ್ಲಿ ನಿಯಮಿತವಾಗಿ 300 ರನ್ ಗಳಿಸಬಹುದು,” ಎಂದು ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

IND vs WI: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿನಲ್ಲಿ ಕಣಕ್ಕೆ ಇಳಿಯಲಿರುವ ಭುವನೇಶ್ವರ್‌ ಕುಮಾರ್‌!

ಸಮತೋಲಿತ ಪಿಚ್‌ಗಳಿಗೆ ಅಗತ್ಯವಿದೆ ಎಂದಿದ್ದ ಗಂಭೀರ್‌

ವೆಸ್ಟ್ ಇಂಡೀಸ್ ತಂಡ ಎರಡನೇ ಟಿ20 ಪಂದ್ಯದಲ್ಲಿ 250 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದ ಬಳಿಕ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಬ್ಯಾಟ್ ಮತ್ತು ಬಾಲ್ ನಡುವೆ ಸಮಾನ ಪೈಪೋಟಿ ನಡೆಯುವಂತಹ ಪಿಚ್‌ಗಳ ಅಗತ್ಯವನ್ನು ಪ್ರತಿಪಾದಿಸಿದ್ದರು.

“ನಿಮಗೆ ಕೇವಲ ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ನೋಡಬೇಕೆಂದಿದ್ದರೆ, ನಮಗೂ ಅದು ಬೇಕು. ಆದರೆ ಬ್ಯಾಟ್ ಮತ್ತು ಬಾಲ್ ನಡುವೆ ಸಮಾನ ಪೈಪೋಟಿ ಬೇಕೆಂದಿದ್ದರೆ, ನಮಗೂ ಅದೇ ಬೇಕು. ಏಕೆಂದರೆ ಬೌಲರ್‌ಗಳೂ ನಮ್ಮವರೇ ಅಲ್ಲವೇ? ಅವರು ವಿದೇಶಿ ಬೌಲರ್‌ಗಳಲ್ಲ. ಅವರ ವೃತ್ತಿಜೀವನವೂ ಅಪಾಯದಲ್ಲಿದೆ,” ಎಂದು ಗಂಭೀರ್ ಹೇಳಿದ್ದರು.

“ಈ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಥಾನ ಪಡೆಯಲು ಬೌಲರ್‌ಗಳೂ ಕಷ್ಟಪಟ್ಟಿದ್ದಾರೆ. ಅವರು ಪರಿಶ್ರಮ ಪಟ್ಟಿಲ್ಲ ಎಂದಲ್ಲ. ಅವರೂ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಸಮಾನ ಪೈಪೋಟಿ ಇದ್ದರೆ ಉತ್ತಮವಾಗಿರುತ್ತದೆ ಮತ್ತು ಉತ್ತಮ ಗುಣಮಟ್ಟದ ಕ್ರಿಕೆಟ್ ನೋಡಲು ಸಾಧ್ಯವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

IND vs WI: ʻಬೆಂಗಳೂರಿನಲ್ಲಿ ಮಿಂಚಲಿದ್ದಾರೆʼ-ಸಂಜು ಸ್ಯಾಮ್ಸನ್‌ ಬಗ್ಗೆ ಅಭಿಷೇಕ್‌ ನಾಯರ್‌ ದೊಡ್ಡ ಭವಿಷ್ಯ!

ಬೌಲರ್‌ಗಳ ಬಗ್ಗೆಯೂ ಗಮನ ಹರಿಸಲು ಬಿಸಿಸಿಐಗೆ ಮನವಿ

1983ರ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಟಗಾರ ಚೇತನ್ ಶರ್ಮಾ ಕೂಡ ಬೌಲರ್‌ಗಳಿಗೆ ನೆರವಾಗುವಂತಹ ಪಿಚ್‌ಗಳನ್ನು ಸಿದ್ಧಪಡಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಚೇತನ್ ಶರ್ಮಾ, ಬ್ಯಾಟರ್‌ಗಳ ಜೊತೆಗೆ ಬೌಲರ್‌ಗಳ ಹಿತಾಸಕ್ತಿಯ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

“ಸ್ವಲ್ಪ ಸುಧಾರಣೆ ಅಗತ್ಯವಿದೆ. ಪ್ರೇಕ್ಷಕರು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಲು ಬಯಸುತ್ತಾರೆ ಎಂಬುದು ನನಗೆ ಗೊತ್ತು. ಆದರೆ ದಯವಿಟ್ಟು ಬೌಲರ್‌ಗಳ ಬಗ್ಗೆಯೂ ಸ್ವಲ್ಪ ಗಮನ ಹರಿಸಿ. ಬೌಲರ್‌ಗಳು ರನ್‌ಗಳನ್ನು ಬಿಟ್ಟುಕೊಡುವ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಅವರು ಮತ್ತೆ ಕ್ರಿಕೆಟ್ ಆಡಲು ಬಯಸದಷ್ಟು ಅವರನ್ನು ಹೊಡೆಯಬೇಡಿ,” ಎಂದು ಚೇತನ್ ಶರ್ಮಾ ಹೇಳಿದ್ದಾರೆ.