ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಷಿಪ್ (County Championship) ಟೂರ್ನಿಯಲ್ಲಿ ವಾರ್ವಿಕ್‌ಶೈರ್ ಪರ ಭಾರತದ ಸ್ಪಿನ್ನರ್ ಮಾನವ್ ಸುತಾರ್ (Manav Suthar) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ವಾರ್ವಿಕ್‌ಶೈರ್ (Warwickshire) ತಂಡದ ಪರ ಆಡುತ್ತಿರುವ ಮಾನವ್ ಸುತಾರ್ ಎರಡೂ ಇನಿಂಗ್ಸ್‌ಗಳಲ್ಲಿ ರನ್ ನೀಡದೆ ಕನಿಷ್ಠ ಒಂದು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಗ್ಲಾಮೋರ್ಗನ್ ವಿರುದ್ಧದ ಡಿವಿಷನ್-ಒಂದರ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಈ ಅಪರೂಪದ ಸಾಧನೆ ಮಾಡಿದರು. 24 ವರ್ಷದ ಸುತಾರ್, ಗ್ಲಾಮೋರ್ಗನ್‌ನ ಮೊದಲ ಇನಿಂಗ್ಸ್‌ನಲ್ಲಿ ತಾವು ಎಸೆದ ಮೂರು ಎಸೆತಗಳಲ್ಲೇ ಒಂದು ವಿಕೆಟ್ ಕಬಳಿಸಿದರು. ಇನ್ನು ವಾರ್ವಿಕ್‌ಶೈರ್ ಪರ ಎಥಾನ್ ಬಾಂಬರ್ ಐದು ವಿಕೆಟ್‌ಗಳ ಸಾಧನೆ ಮಾಡಿದರೆ, ನಾಯಕ ಎಡ್ ಬರ್ನಾರ್ಡ್ ಮೂರು ವಿಕೆಟ್ ಕಬಳಿಸಿದರು. ಪರಿಣಾಮ ಗ್ಲಾಮೋರ್ಗನ್ ತಂಡ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್‌ನ ಅನುಭವಿ ಆಲ್‌ರೌಂಡರ್ ಕ್ರಿಸ್ ವೋಕ್ಸ್‌ಗೆ ಈ ಇನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಸ್ಯಾಮ್ ಹೇನ್, ವಿಲ್ ಯಂಗ್ ಹಾಗೂ ಎಡ್ ಬರ್ನಾರ್ಡ್ ಅರ್ಧಶತಕಗಳನ್ನು ಸಿಡಿಸಿದ ಪರಿಣಾಮ ವಾರ್ವಿಕ್‌ಶೈರ್ ತಂಡ 391 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕಾಯ್ ಸ್ಮಿತ್ 49 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಮನವ್ ಸುತಾರ್ ಕೂಡ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದ್ದು, 23 ಎಸೆತಗಳಲ್ಲಿ 16 ರನ್ ಗಳಿಸಿದರು.
Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!
ಇದಾದ ಬಳಿಕ ಗ್ಲಾಮೋರ್ಗನ್ ಮತ್ತೊಮ್ಮೆ 100 ರನ್‌ಗಳ ಗಡಿ ದಾಟಲು ವಿಫಲವಾಗಿ 65 ರನ್‌ಗಳಿಗೆ ಆಲೌಟ್ ಆಯಿತು. ಮಾನವ್ ಸುತಾರ್ ಕೇವಲ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಕಬಳಿಸಿದರು. ಕ್ರಿಸ್ ಕೂಕ್ ಮತ್ತು ಜೇಮಿ ಮೆಕ್‌ಇಲ್ರಾಯ್ ಅವರನ್ನು ಯಾವುದೇ ರನ್ ಬಿಟ್ಟುಕೊಡದೆ ಔಟ್ ಮಾಡಿದರು. ವಿಶೇಷವೆಂದರೆ, ಸುತಾರ್ ಪಡೆದ ಈ ಮೂರು ವಿಕೆಟ್‌ಗಳಿಗೂ ಯಾವುದೇ ಫೀಲ್ಡರ್‌ನ ನೆರವು ಬೇಕಾಗಲಿಲ್ಲ. ಮೂವರು ಬ್ಯಾಟರ್‌ಗಳೂ ಬೌಲ್ಡ್ ಆಗುವ ಮೂಲಕ ಔಟ್ ಆದರು.
ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಸುತಾರ್
ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ಮಾನವ್ ಸುತಾರ್, ಭಾರತಕ್ಕೆ ಮರಳುವ ಮುನ್ನ ಇನ್ನೂ ಎರಡು ಕೌಂಟಿ ಪಂದ್ಯಗಳನ್ನು ಆಡಲಿದ್ದಾರೆ. ಸದ್ಯ ಸುತಾರ್ ಭಾರತ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಆದರೆ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತ ತಂಡದಿಂದ ಇನ್ನೂ ಅವರಿಗೆ ಅವಕಾಶ ದೊರೆತಿಲ್ಲ.
ಮಾನವ್ ಸುತಾರ್ ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯಕ್ಕೆ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ ಅವರು, ಅಫ್ಘಾನಿಸ್ತಾನದ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದರು. ನಂತರದ ಇನಿಂಗ್ಸ್‌ನಲ್ಲಿ ಮತ್ತೊಂದು ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು.
ವೈಭವ್ ಸೂರ್ಯವಂಶಿ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದ ಅಜಿಂಕ್ಯ ರಹಾನೆ!
ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಸಾಧನೆ
ತಮ್ಮ ಮೊದಲ ವಿದೇಶಿ ಟೆಸ್ಟ್ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಸುತಾರ್ 10 ವಿಕೆಟ್‌ಗಳ ಸಾಧನೆ ಮಾಡಿದರು. ಅವರ ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ತಂಡ 165 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲೂ ಸುತಾರ್ 6 ವಿಕೆಟ್ ಕಬಳಿಸಿದರು. ಆದರೆ ಆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ನ್ಯೂಜಿಲೆಂಡ್ ವಿರುದ್ಧ ಆಡುವ ಬಳಗದಲ್ಲಿ ಸ್ಥಾನ ಸಿಗುತ್ತಾ?
ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾನವ್ ಸುತಾರ್ ಆಡುವ ಬಳಗದಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡ ಈ ಸರಣಿಯಲ್ಲಿ ಒಬ್ಬ ಸ್ಪಿನ್ನರ್‌ನೊಂದಿಗೆ ಮಾತ್ರ ಆಡುವ ಬಳಗವನ್ನು ಕಣಕ್ಕಿಳಿಸುವ ಸಾಧ್ಯತೆ ಇರುವುದರಿಂದ ಸುತಾರ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.