ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈಭವ್‌ ಸೂರ್ಯವಂಶಿ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದ ಅಜಿಂಕ್ಯ ರಹಾನೆ!

ವೈಭವ್‌ ಸೂರ್ಯವಂಶಿ ಇನ್ನೂ ಯುವ ಬ್ಯಾಟ್ಸ್‌ಮನ್‌ ಆಗಿದ್ದು, ಅವರಿಗೆ ಇನ್ನೂ ದೊಡ್ಡ ಭವಿಷ್ಯವಿದೆ. ಹಾಗಾಗಿ ಭಾರತ ಟಿ20 ತಂಡದಲ್ಲಿ ವೈಭವ್‌ ಬದಲು ಸಂಜು ಸ್ಯಾಮ್ಸನ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಮಾಜಿ ಟೆಸ್ಟ್‌ ತಂಡದ ನಾಯಕ ಅಜಿಂಕ್ಯ ರಹಾನೆ ತಿಳಿಸಿದ್ದಾರೆ. ಭಾರತ ತಂಡ ಇದೇ 13 ರಂದು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ.

ವೈಭವ್‌ ಬದಲು ಸಂಜುಗೆ ಸ್ಥಾನ ನೀಡಬೇಕೆಂದ ಅಜಿಂಕ್ಯ ರಹಾನೆ!

ಸಂಜು ಸ್ಯಾಮ್ಸನ್‌ ಪರ ಬ್ಯಾಟ್‌ ಬೀಸಿದ ಅಜಿಂಕ್ಯ ರಹಾನೆ. -

Profile
Ramesh Kote Sep 11, 2026 7:31 PM

ನವದೆಹಲಿ: ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸತತ ವೈಫಲ್ಯದಿಂದ ಭಾರತ ತಂಡದಿಂದ ಹೊರಗುಳಿದಿದ್ದ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಇದೀಗ ಮತ್ತೆ ಭಾರತ ತಂಡಕ್ಕೆ (Indian Cricket Team) ಮರಳಿದ್ದಾರೆ. 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನು ಗೆದ್ದಿದ್ದರು. ಐದು ಇನಿಂಗ್ಸ್‌ಗಳಲ್ಲಿ ಒಟ್ಟು 321 ರನ್ ಗಳಿಸಿದ್ದ ಅವರು, ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ 89 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ 89 ರನ್‌ಗಳಂತಹ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ಗಳನ್ನು ಆಡಿದ್ದರು.

ಆದರೆ, ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಅವರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿಬಂದಿರಲಿಲ್ಲ. ಮೂರು ಇನಿಂಗ್ಸ್‌ಗಳಲ್ಲಿ ಸ್ಯಾಮ್ಸನ್ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದ್ದರು. ಇದರ ಪರಿಣಾಮವಾಗಿ ಜಿಂಬಾಬ್ವೆ ವಿರುದ್ಧದ ಟಿ20I ಸರಣಿ ಭಾರತ ತಂಡಕ್ಕೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಇವರ ಬದಲು ಪ್ರಭ್‌ಸಿಮ್ರಾನ್‌ ಸಿಂಗ್‌ಗೆ ಅವಕಾಶವನ್ನು ಕಲ್ಪಿಸಲಾಗಿತ್ತು.

Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!

ಸಂಜು ಸ್ಯಾಮ್ಸನ್‌ಗೆ ರಹಾನೆ ಬೆಂಬಲ

ಇದೀಗ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಮರಳಿರುವ ಹಿನ್ನೆಲೆಯಲ್ಲಿ ಮಾಜಿ ನಾಯಕ ಅಜಿಂಕ್ಯ ರಹಾನೆ, ವಿಕೆಟ್‌ ಕೀಪರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಠಿಣ ಅವಧಿಯನ್ನು ಎದುರಿಸುತ್ತಿರುವ ವಿಶ್ವಕಪ್ ಹೀರೋಗೆ ಬೆಂಬಲ ನೀಡುವುದು ಮುಖ್ಯ ಎಂದು ರಹಾನೆ ಹೇಳಿದ್ದಾರೆ. ವೈಭವ್ ಸೂರ್ಯವಂಶಿಗೆ ಭವಿಷ್ಯದಲ್ಲಿ ಅವಕಾಶಗಳು ಸಿಗಲಿವೆ ಎಂದೂ ರಹಾನೆ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಹಿಂದಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಹಾನೆ, “ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಟಾಪ್-3 ಆಟಗಾರರೇ ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ಸ್ಯಾಮ್ಸನ್ ಉತ್ತಮವಾಗಿ ಆಡಿದ್ದಾರೆ. ಆದರೆ ಎರಡು ಅಥವಾ ಮೂರು ಕಳಪೆ ಇನಿಂಗ್ಸ್‌ಗಳ ನಂತರ ಅವರನ್ನು ಕೈಬಿಡಲಾಯಿತು. ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ” ಎಂದಿದ್ದಾರೆ.

ಡಿಆರ್‌ಎಸ್‌ ಶ್ರೇಯ ನಿಮಗೆ ಸಿಕ್ಕಿದೆ ಎಂದ ಇಶಾನ್‌ ಕಿಶನ್‌ಗೆ ತಿರುಗೇಟು ನೀಡಿದ ವೈಭವ್‌ ಸೂರ್ಯವಂಶಿ!

‘ಸ್ಯಾಮ್ಸನ್, ಅಭಿಷೇಕ್, ಇಶಾನ್ ಅಗ್ರ ಮೂರರಲ್ಲಿ ಆಡಬೇಕುʼ

“ಅಭಿಷೇಕ್ ಮತ್ತು ಇಶಾನ್ ಕೂಡ ನಮಗಾಗಿ ಉತ್ತಮವಾಗಿ ಆಡಿದ್ದಾರೆ. ವೈಭವ್‌ಗೆ ಖಂಡಿತವಾಗಿಯೂ ಅವಕಾಶಗಳು ಸಿಗುತ್ತವೆ. ಅವರ ಸಮಯವೂ ಬರುತ್ತದೆ. ಆದರೆ ಸದ್ಯಕ್ಕೆ ಟಾಪ್-3ನಲ್ಲಿ ಸ್ಯಾಮ್ಸನ್, ಅಭಿಷೇಕ್ ಮತ್ತು ಇಶಾನ್ ಇರಬೇಕು ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್‌ ಟೂರ್ನಿಯಲ್ಲಿ ಇವರೇ ನಮ್ಮ ಪ್ರಮುಖ ಕೊಡುಗೆದಾರರಾಗಿದ್ದರು,” ಎಂದು ಹೇಳಿದ್ದಾರೆ.

ರಹಾನೆ ಅವರ ಈ ಹೇಳಿಕೆ ಇದೀಗ ಭಾರತ ತಂಡದ ಟಾಪ್-ಆರ್ಡರ್ ಸಂಯೋಜನೆ ಹಾಗೂ ವೈಭವ್ ಸೂರ್ಯವಂಶಿ ಅವರ ಭವಿಷ್ಯದ ಅವಕಾಶಗಳ ಕುರಿತು ಚರ್ಚೆಗೆ ಕಾರಣವಾಗಿದೆ.