ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಟ್ರೋಫಿ ಗೆಲ್ಲುವುದು ಅಡಿಕ್ಷನ್‌ ಆಗಲಿ' - ಆರ್‌ಸಿಬಿ ಆಟಗಾರರಿಗೆ ಮೊ ಬೋಬಾಟ್‌ ಸಂದೇಶ!

ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೋಬಾಟ್‌ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ. ತಂಡಗಳು ಟ್ರೋಫಿ ಗೆಲ್ಲುತ್ತವೆ, ಆದರೆ, ದೈತ್ಯ ತಂಡಗಳು ಟ್ರೋಫಿಗಳನ್ನು ಗೆಲ್ಲುತ್ತಾ ಹೋಗುತ್ತವೆ ಅಂತಹ ಚಾಂಪಿಯನ್‌ ತಂಡ ಆರ್‌ಸಿಬಿ ಆಗಬೇಕೆಂದು ಬೋಬಾಟ್‌ ಕರೆ ನೀಡಿದ್ದಾರೆ.

ಆರ್‌ಸಿಬಿ ಕ್ರಿಕೆಟ್ ಡೈರೆಕ್ಷರ್‌ ಮೊ ಬೋಬಾಟ್ (ಚಿತ್ರ: ಆರ್‌ಸಿಬಿ)

ಬೆಂಗಳೂರು: ಒಂದು ಕಾಲದಲ್ಲಿ ಟ್ರೋಫಿ ಗೆಲ್ಲದ ತಂಡ ಎಂಬ ಹಣೆಪಟ್ಟಿ ಹೊತ್ತಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈಗ ಐಪಿಎಲ್‌ನಲ್ಲಿ ಹೊಸ ಸಂಸ್ಕೃತಿಯೊಂದನ್ನು ನಿರ್ಮಿಸುತ್ತಿದೆ. ವರ್ಷಗಳ ಕಾಲ "ಈ ಸಲ ಕಪ್‌ ನಮ್ದು" ಎಂಬ ಘೋಷಣೆಯನ್ನು ನಂಬಿಕೆಯಾಗಿ ಉಳಿಸಿಕೊಂಡಿದ್ದ ಅಭಿಮಾನಿಗಳಿಗೆ ಸತತ ಎರಡು ಟ್ರೋಫಿಗಳನ್ನು ಉಡುಗೊರೆಯಾಗಿ ನೀಡಿರುವ ಆರ್‌ಸಿಬಿ, ಈಗ ಮತ್ತೊಂದು ದೊಡ್ಡ ಗುರಿಯತ್ತ ಕಣ್ಣು ನೆಟ್ಟಿದೆ.

ಅದಕ್ಕೆ ಕಾರಣ ತಂಡದ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೋಬಾಟ್‌ ನೀಡಿರುವ ಒಂದು ಸರಳ ಆದರೆ ಶಕ್ತಿಯುತ ಸಂದೇಶ.

"ಟ್ರೋಫಿ ಗೆಲ್ಲುವುದು ನಿಮಗೆ ಅಡಿಕ್ಷನ್‌ ಆಗಬೇಕು."

ಇದು ಕೇವಲ ಪ್ರೇರಣೆಯ ಮಾತಲ್ಲ. ಚಾಂಪಿಯನ್‌ ತಂಡದ ಮನಸ್ಥಿತಿಯನ್ನು ಕಟ್ಟುವ ಸೂತ್ರ.

ಗೆಲುವಿನ ರುಚಿ ಒಮ್ಮೆ ಸಿಕ್ಕರೆ...

ಕ್ರೀಡಾ ಲೋಕದಲ್ಲಿ ಹಲವು ಶ್ರೇಷ್ಠ ತಂಡಗಳು ತಮ್ಮ ಯಶಸ್ಸಿನ ಸಾಮ್ರಾಜ್ಯ ಕಟ್ಟಿದ್ದು ಇದೇ ಮನೋಭಾವದಿಂದ. ಒಮ್ಮೆ ಟ್ರೋಫಿ ಗೆದ್ದ ಬಳಿಕ ಅದನ್ನು ಸಾಧನೆ ಎಂದು ಸಂಭ್ರಮಿಸುವುದಕ್ಕಿಂತ, ಅದನ್ನೇ ಹೊಸ ಮಾನದಂಡವನ್ನಾಗಿ ಮಾಡಿಕೊಂಡ ತಂಡಗಳೇ ಇತಿಹಾಸ ನಿರ್ಮಿಸಿವೆ.

RCB fans' celebration: ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು; ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮುಗಿಲುಮುಟ್ಟಿದ ಅಭಿಮಾನಿಗಳ ಸಂಭ್ರಮಾಚರಣೆ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಐದು ಐದು ಟ್ರೋಫಿಗಳನ್ನು ಗೆಲ್ಲಲು ಕಾರಣ ಕೇವಲ ಪ್ರತಿಭೆಯಲ್ಲ. ಗೆಲುವಿನ ಹಸಿವು ಎಂದಿಗೂ ಕಡಿಮೆಯಾಗದಿರುವುದು.

ಈಗ ಅದೇ ಹಸಿವನ್ನು ಆರ್‌ಸಿಬಿ ಆಟಗಾರರಲ್ಲೂ ಬೆಳೆಸಲು ಮೊ ಬೋಬಾಟ್‌ ಪ್ರಯತ್ನಿಸುತ್ತಿದ್ದಾರೆ.

ಬದಲಾಗಿರುವ ಆರ್‌ಸಿಬಿ

ಕೆಲ ವರ್ಷಗಳ ಹಿಂದೆ ಆರ್‌ಸಿಬಿ ಬಗ್ಗೆ ಮಾತನಾಡಿದರೆ ಮೊದಲು ನೆನಪಾಗುತ್ತಿದ್ದದ್ದು ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಮತ್ತು ಕ್ರಿಸ್‌ ಗೇಲ್‌ ಅವರಂತಹ ಸೂಪರ್‌ ಸ್ಟಾರ್‌ಗಳು. ಆದರೆ ಇಂದು ತಂಡದ ಗುರುತು ಕೇವಲ ಸ್ಟಾರ್‌ ಆಟಗಾರರಲ್ಲ. ತಂಡದ ಯಶಸ್ಸಿಗೆ ಪ್ರತಿಯೊಬ್ಬ ಆಟಗಾರನು ಟೊಂಕ ಕಟ್ಟಿ ನಿಂತಿದ್ದಾರೆ. ವೈಯಕ್ತಿಕ ಸಾಧನೆಗಿಂತಲೂ, ತಂಡವಾಗಿ ಆಡಿದರೆ ಯಶಸ್ಸು ಹಿಂಬಾಲಿಸುತ್ತದೆ ಅನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆ.

ಟೀಮ್ ಕಲ್ಚರ್ ಮತ್ತು ಪ್ಲಾನಿಂಗ್

2024ರಲ್ಲಿ ಮೊ ಬೋಬಾಟ್‌ ಕ್ರಿಕೆಟ್‌ ನಿರ್ದೇಶಕರಾಗಿ ಬಂದ ಬಳಿಕ ತಂಡದ ರಚನೆಯಲ್ಲೇ ದೊಡ್ಡ ಬದಲಾವಣೆ ಕಂಡುಬಂದಿದೆ. ಹೆಡ್‌ ಕೋಚ್‌ ಆಂಡಿ ಫ್ಲವರ್‌, ಬ್ಯಾಟಿಂಗ್‌ ಕೋಚ್‌ ದಿನೇಶ್‌ ಕಾರ್ತಿಕ್‌ ಮತ್ತು ಬೆಂಬಲ ಸಿಬ್ಬಂದಿಯ ಯೋಜನೆಗಳು ಈಗ ಫಲ ನೀಡುತ್ತಿವೆ. ಅದರ ಪರಿಣಾಮವೇ ಸತತ ಎರಡು ಐಪಿಎಲ್‌ ಗೆಲುವಿನ ಕಿರೀಟಗಳು.

RCB vs GT: ʻಈ ಸಲಾನು ಕಪ್‌ ನಮ್ದೇʼ-ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಗರಿ!

ಎರಡು ಟ್ರೋಫಿ ಅಂತಿಮ ಗುರಿಯಲ್ಲ

ಬಹುತೇಕ ತಂಡಗಳಿಗೆ ಒಂದು ಟ್ರೋಫಿ ಗೆಲ್ಲುವುದು ಕನಸು. ಆದರೆ ಚಾಂಪಿಯನ್‌ ತಂಡಗಳಿಗೆ ಒಂದು ಟ್ರೋಫಿ ಕೇವಲ ಆರಂಭ.

ಮೊ ಬೋಬಾಟ್‌ ಅವರ ಮಾತುಗಳಲ್ಲೂ ಇದೇ ಸಂದೇಶ ಅಡಗಿದೆ. "ಟ್ರೋಫಿ ಗೆದ್ದ ಸಂತೋಷವನ್ನು ಅನುಭವಿಸಿ. ಆದರೆ ಅದರಲ್ಲಿ ತೃಪ್ತಿ ಪಡಬೇಡಿ. ಮತ್ತೆ ಗೆಲ್ಲುವ ಹಸಿವು ಹುಟ್ಟಿಸಿಕೊಳ್ಳಿ. ಆ ಭಾವನೆ ವ್ಯಸನದಂತೆ ನಿಮ್ಮನ್ನು ಮುನ್ನಡೆಸಲಿ. ಒಮ್ಮೆ ಗೆದ್ದವರು ಚಾಂಪಿಯನ್ಸ್‌. ಮತ್ತೆ ಮತ್ತೆ ಗೆದ್ದವರು ಲೆಜೆಂಡ್ಸ್‌," ಎಂದು ಆರ್‌ಸಿಬಿ ಆಟಗಾರರನ್ನು ಹುರಿದುಂಬಿಸಿದ್ದಾರೆ.

RCB vs GT ಫೈನಲ್‌ನಲ್ಲಿ ಆಶಿಶ್ ನೆಹ್ರಾರ 'ರಕ್ಷಣಾತ್ಮಕ' ತಂತ್ರದ ವಿರುದ್ಧ ಎಬಿ ಡಿವಿಲಿಯರ್ಸ್ ಆಕ್ರೋಶ!

ಐದು ಟ್ರೋಫಿಗಳ ಕನಸು

ಇಂದು ಆರ್‌ಸಿಬಿ ಅಭಿಮಾನಿಗಳು ಎರಡು ಟ್ರೋಫಿಗಳ ಸಂಭ್ರಮದಲ್ಲಿದ್ದಾರೆ. ಆದರೆ ತಂಡದ ಸಾಮರ್ಥ್ಯ, ಆಟಗಾರರ ಗುಣಮಟ್ಟ ಮತ್ತು ಆಡಳಿತದ ಯೋಜನೆಗಳನ್ನು ನೋಡಿದರೆ ಈ ಪಯಣ ಇಲ್ಲಿಗೆ ನಿಲ್ಲುವಂತೆ ಕಾಣುವುದಿಲ್ಲ.

ಮುಂಬೈ ಮತ್ತು ಚೆನ್ನೈ ಹೊಂದಿರುವ ಐದು ಟ್ರೋಫಿಗಳ ದಾಖಲೆಯತ್ತ ಆರ್‌ಸಿಬಿ ಹೆಜ್ಜೆ ಇಡುತ್ತಿದೆ ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದೆ.

ಮೊ ಬೋಬಾಟ್‌ ಅವರ "ಟ್ರೋಫಿ ಗೆಲ್ಲುವುದು ಅಡಿಕ್ಷನ್‌ ಆಗಲಿ" ಎಂಬ ಸಂದೇಶವೂ ಅದನ್ನೇ ಸೂಚಿಸುತ್ತದೆ. ಏಕೆಂದರೆ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತಾರೆ. ಆದರೆ ದೈತ್ಯ ತಂಡಗಳು ಟ್ರೋಫಿ ಗೆಲ್ಲುವುದನ್ನೇ ಅಭ್ಯಾಸವಾಗಿಸಿಕೊಳ್ಳುತ್ತವೆ.