ದೆಹಲಿ, ನ. 29: ಯುಜ್ವೇಂದ್ರ ಚಹಲ್ (Yuzvendra Chahal) ಬಿಜೆಪಿಗೆ ಸೇರಿದ ಬಳಿಕ ಇದೀಗ ಮತ್ತೋರ್ವ ಭಾರತೀಯ ಕ್ರಿಕೆಟಿಗ ರಾಜಕೀಯ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೌಲರ್ ಮೊಹಮ್ಮದ್ ಶಮಿ (Mohammed Shami) ಭಾನುವಾರ (ನವೆಂಬರ್ 29) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿದ್ದಾರೆ. ಆ ಮೂಲಕ ರಾಜಕೀಯ ಮೂಲಕ ಮತ್ತೊಂದು ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಶಮಿ ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಭಾನುವಾರದ ಭೇಟಿ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕುನ್ವರ್ ಬಾಸಿತ್ ಅಲಿ ಕೂಡ ಉಪಸ್ಥಿತರಿದ್ದರು.
ಸದ್ಯ ಶಮಿಯಾಗಲಿ, ಬಿಜೆಪಿಯಾಗಲಿ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಕೆಲವು ದಿನಗಳ ಹಿಂದೆ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದರು. ಪಕ್ಷದ ಇತರ ಹಿಂದುಳಿದ ವರ್ಗಗಳ (OBC) ವಿಭಾಗವಾದ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಗೆ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನವೆಂಬರ್ 21ರಂದು ಅವರನ್ನು ನೇಮಿಸಲಾಗಿತ್ತು.
ನಿತಿನ್ ನಬಿನ್ ಜತೆ ಮೊಹಮ್ಮದ್ ಶಮಿ:
ನವೆಂಬರ್ 6ರಂದು ವೇಗದ ಬೌಲರ್ ಶಮಿ ತಮ್ಮ 13 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಕೋಲ್ಕತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನಾಡಿ ಸರಿಯಾಗಿ 13 ವರ್ಷಗಳ ನಂತರ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದರು.
ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿ ಶಾಕ್ ನೀಡಿದ ಮೊಹಮ್ಮದ್ ಶಮಿ!
"ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ, ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ," ಎಂದು ಶಮಿ ಬರೆದುಕೊಂಡಿದ್ದರು.
ಶಮಿ ಕ್ರಿಕೆಟ್ ಸಾಧನೆ
ಮೊಹಮ್ಮದ್ ಶಮಿ 2013ರ ನವೆಂಬರ್‌ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲೇ 9 ವಿಕೆಟ್ ಪಡೆದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 64 ಪಂದ್ಯಗಳನ್ನಾಡಿರುವ ಶಮಿ 229 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 27.71ರ ಬೌಲಿಂಗ್ ಸರಾಸರಿ ಹೊಂದಿರುವ ಅವರು 6 ಬಾರಿ ಇನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. 56 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಸಾಧನೆ.
ಶಮಿ ಕೊನೆಯ ಬಾರಿ 2023ರ ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಂಡನ್‌ನ ಓವಲ್ ಮೈದಾನದಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಕ್ರಿಕೆಟಿಗ ಯುಜ್ವೇಂದ್ರ ಚಹಲ್; ಬಿಜೆಪಿ ಸೇರ್ಪಡೆ
ಐಪಿಎಲ್‌ನಲ್ಲೂ ಮಿಂಚು
ಇದುವರೆಗೆ ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿರುವ ಶಮಿ 145 ವಿಕೆಟ್ ಪಡೆದಿದ್ದಾರೆ. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಶಮಿ ಈಗ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. 2027ರ ಐಪಿಎಲ್ ಆವೃತ್ತಿಯಲ್ಲಿ ಮೊಹಮ್ಮದ್ ಶಮಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಅವರ ರಾಜಕೀಯ ಎಂಟ್ರಿ ಭಾರಿ ಕುತೂಹಲ ಮೂಡಿಸಿದೆ.