ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮ್ಮ ಚೊಚ್ಚಲ ಏಕದಿನ ಸರಣಿಯಲ್ಲಿನ ಬೌಲಿಂಗ್‌ ಸಕ್ಸಸ್‌ಗೆ ಬಲವಾದ ಕಾರಣ ತಿಳಿಸಿದ ಗುರ್ನೂರ್‌ ಬ್ರಾರ್‌!

ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿನ ತಮ್ಮ ಬೌಲಿಂಗ್‌ ಸಕ್ಸಸ್‌ಗೆ ಕಾರಣವೇನೆಂದು ಭಾರತ ತಂಡದ ಯುವ ವೇಗಿ ಗುರ್ನೂರ್‌ ಬ್ರಾರ್‌ ತಿಳಿಸಿದ್ದಾರೆ. ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬ್ರಾರ್‌, ಆರಂಭಿಕ ಎರಡೂ ಪಂದ್ಯಗಳಿಂದ ಒಟ್ಟು 6 ವಿಕೆಟ್‌ಗಳನ್ನು ಕಬಳಿಸಿ ಗಮನವನ್ನು ಸೆಳೆದಿದ್ದಾರೆ.

ತಮ್ಮ ಬೌಲಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ಗುರ್ನೂರ್‌ ಬ್ರಾರ್‌.

ನವದೆಹಲಿ: ಅಫ್ಘಾನಿಸ್ತಾನ ವಿರುದ್ದದ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ (IND vs AFG) ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಭಾರತ ತಂಡದ ಯುವ ವೇಗಿ ಗುರ್ನೂರ್‌ ಬ್ರಾರ್‌ (Gurnoor Brar) ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ತಮ್ಮ ಪದಾರ್ಪಣೆ ಏಕದಿನ ಸರಣಿಯಲ್ಲಿಯೇ ಯುವ ವೇಗಿ ಗಮನ ಸೆಳೆದಿದ್ದಾರೆ. ಇದೀಗ ಅವರು ತಮ್ಮ ಬೌಲಿಂಗ್‌ ಸಕ್ಸಸ್‌ಗೆ ಕಾರಣವೇನೆಂದು ತಿಳಿಸಿದ್ದಾರೆ. ಅಂದ ಹಾಗೆ ಭಾರತ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಏಕದಿನ ಸರಣಿಯನ್ನು ಈಗಾಗಲೇ 2-0 ಅಂತರದಲ್ಲಿ ಮುಡಗೇರಿಸಿಕೊಂಡಿದೆ.

ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು 14.50ರ ಸರಾಸರಿ ಮತ್ತು 5.87ರ ಎಕಾನಮಿ ದರದಲ್ಲಿ ಪಡೆದಿರುವ ಭಾರತದ ವೇಗದ ಬೌಲರ್ ಗುರ್ನೂರ್‌ ಬ್ರಾರ್‌, ಪ್ರತಿಯೊಬ್ಬ ವೇಗದ ಬೌಲರ್ ಕೂಡ ಮಾರಕ ಯಾರ್ಕರ್ ಎಸೆತವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 170 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಬ್ರಾರ್ 10 ಓವರ್‌ಗಳಲ್ಲಿ 60 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪ್ರದರ್ಶನದ ಬಳಿಕ ಮಾತನಾಡಿದ ಅವರು, ಡೆತ್ ಓವರ್‌ಗಳ ಬೌಲಿಂಗ್ ಕೌಶಲವನ್ನು ಮತ್ತಷ್ಟು ಉತ್ತಮಗೊಳಿಸಲು ತಾವು ಕಠಿಣ ಪರಿಶ್ರಮ ಪಡುತ್ತಿರುವುದಾಗಿ ತಿಳಿಸಿದರು.

ʻನಿಮಗೆ ದಕ್ಷಿಣ ಆಫ್ರಿಕಕ್ಕೆ ವೀಸಾ ಸಿಕ್ಕಿದೆʼ: ಇಶಾನ್‌ ಕಿಶನ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

“ನನ್ನ ಅಭಿಪ್ರಾಯದಲ್ಲಿ ಪ್ರತಿಯೊಬ್ಬ ವೇಗದ ಬೌಲರ್ ಯಾರ್ಕರ್‌ಗಳ ಮೇಲೆ ಹೆಚ್ಚು ಕೆಲಸ ಮಾಡಬೇಕು. ನಾನು ಡೆತ್ ಬೌಲಿಂಗ್‌ನಲ್ಲಿ ನಿರಂತರವಾಗಿ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಭ್ಯಾಸ ಮಾಡುತ್ತೇನೆ. ಏಕೆಂದರೆ ಪಂದ್ಯಗಳ ಅಂತಿಮ ಹಂತದಲ್ಲಿ ಬೌಲ್‌ ಮಾಡುವಾಗ, ವಿಶೇಷವಾಗಿ ಉತ್ತಮ ಹಿಟ್ಟರ್‌ಗಳು ಕ್ರೀಸ್‌ಗೆ ಬಂದಾಗ, ಯಾರ್ಕರ್‌ಗಳು ಅತ್ಯಂತ ಪರಿಣಾಮಕಾರಿ ಆಯುಧವಾಗುತ್ತವೆ,” ಎಂದು ಗುರ್ನೂರ್ ಬ್ರಾರ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್‌ ಅವರು ತಮ್ಮ ಬೌಲಿಂಗ್ ಶೈಲಿಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಸೂಚಿಸದೆ, ತಮ್ಮ ಸಹಜ ಸಾಮರ್ಥ್ಯಗಳ ಮೇಲೆಯೇ ನಂಬಿಕೆ ಇಡುವಂತೆ ಪ್ರೋತ್ಸಾಹಿಸಿದ್ದಾರೆ ಎಂದು ಅವರು ಹೇಳಿದರು.

“ತಂಡದ ಆಡಳಿತ ಮಂಡಳಿ ಮತ್ತು ಬೌಲಿಂಗ್ ಕೋಚ್ ನನ್ನನ್ನು ತುಂಬಾ ಬೆಂಬಲಿಸುತ್ತಾರೆ. ಹಾಗಾಗಿ ನಾನು ಹೆಚ್ಚು ಮುಕ್ತವಾಗಿ ಬೌಲ್‌ ಮಾಡಲು ಸಾಧ್ಯವಾಗುತ್ತದೆ. ಅವರು ನನಗೆ ಯಾವುದೇ ಹೊಸ ಸಲಹೆಗಳನ್ನು ನೀಡಲಿಲ್ಲ. ಬದಲಾಗಿ, ನನ್ನ ಸಾಮರ್ಥ್ಯದ ಮೇಲೆಯೇ ವಿಶ್ವಾಸ ಇಡಲು ಹೇಳಿದ್ದರು,” ಎಂದು ಬ್ರಾರ್ ತಿಳಿಸಿದ್ದಾರೆ.

IND vs AFG: ನಾಲ್ಕು ವರ್ಷಗಳ ಬಳಿಕ ಒಡಿಐ ಶತಕ ಬಾರಿಸಿದ ಇಶಾನ್‌ ಕಿಶನ್‌!

ಕೇವಲ ವೇಗವಾಗಿ ಬೌಲ್‌ ಮಾಡಿದರೆ ಸಾಕಾಗುವುದಿಲ್ಲ. ಪಿಚ್‌ನಲ್ಲಿ ಬೌಲರ್‌ಗಳಿಗೆ ನೆರವು ಇಲ್ಲದಿದ್ದರೆ ಅನೇಕ ಬ್ಯಾಟರ್‌ಗಳು ವೇಗದ ಬೌಲಿಂಗ್ ಅನ್ನು ಇಷ್ಟಪಡುತ್ತಾರೆ ಎಂದು ಭಾರತದ ವೇಗದ ಬೌಲರ್‌ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಎದುರಾಳಿಗಳು ಹಾಗೂ ಗುಣಮಟ್ಟದ ಬ್ಯಾಟರ್‌ಗಳ ವಿರುದ್ಧ ಯಶಸ್ಸು ಸಾಧಿಸಲು ಸರಿಯಾದ ಯೋಜನೆ ಮತ್ತು ಫೀಲ್ಡಿಂಗ್ ವ್ಯವಸ್ಥೆ ಅತ್ಯಂತ ಮುಖ್ಯ ಎಂದು ಅವರು ಹೇಳಿದ್ದಾರೆ.

“ಕೇವಲ ವೇಗವಾಗಿ ಬೌಲ್‌ ಮಾಡಿದರೆ ಸಾಕಾಗುವುದಿಲ್ಲ. ಪಿಚ್‌ನಲ್ಲಿ ಯಾವುದೇ ಸಹಾಯ ಇಲ್ಲದಿದ್ದರೆ ಹಲವು ಬ್ಯಾಟರ್‌ಗಳು ವೇಗದ ಬೌಲಿಂಗ್ ಅನ್ನು ಸುಲಭವಾಗಿ ಎದುರಿಸುತ್ತಾರೆ. ಆದ್ದರಿಂದ ಉತ್ತಮ ಎದುರಾಳಿ ಅಥವಾ ಉತ್ತಮ ಬ್ಯಾಟರ್ ವಿರುದ್ಧ ಯಾವ ರೀತಿಯ ಯೋಜನೆ ರೂಪಿಸಬೇಕು ಮತ್ತು ಫೀಲ್ಡ್ ಅನ್ನು ಹೇಗೆ ಅಣಿಗೊಳಿಸಬೇಕು ಎಂಬುದೇ ಮುಖ್ಯವಾಗುತ್ತದೆ,” ಎಂದು ಬ್ರಾರ್ ತಿಳಿಸಿದ್ದಾರೆ.

ತಮ್ಮ ಔಟ್‌ಸ್ವಿಂಗ್ ಬೌಲಿಂಗ್ ಬಗ್ಗೆ ಮಾತನಾಡಿದ ಅವರು, “ನಿಮ್ಮ ಔಟ್‌ಸ್ವಿಂಗ್ ಉತ್ತಮವಾಗಿದ್ದರೆ ಯಾವುದೇ ಬ್ಯಾಟರ್‌ಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಚೆಂಡನ್ನು ಸ್ವಿಂಗ್ ಮಾಡಲು ನಾನು ಪ್ರಯತ್ನಿಸುತ್ತೇನೆ. ಸ್ವಿಂಗ್ ಕಡಿಮೆಯಾದಾಗ, ನಾನು ನನ್ನ ಲೆನ್ಸ್‌ ಅನ್ನು ಸ್ವಲ್ಪ ಹಿಂದಕ್ಕೆ ಇಡುತ್ತೇನೆ,” ಎಂದು ತಿಳಿಸಿದ್ದಾರೆ.