ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದ್ದ 15ರ ವಯಸ್ಸಿನ ಆರಂಭಿಕ ವೈಭವ್ ಸೂರ್ಯವಂಶಿ (vaibhav Sooryavanshi) ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯ ಕನಸನ್ನು ನನಸು ಮಾಡಿಕೊಳ್ಳಲು ಇನ್ನಷ್ಟು ದಿನಗಳ ಕಾಲ ಕಾಯಬೇಕಾಗುತ್ತದೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಆರಂಭಿಕ ಪಂದ್ಯಗಳಲ್ಲಿಯೂ ಎಡಗೈ ಬ್ಯಾಟ್ಸ್‌ಮನ್‌ಗೆ ಅವಕಾಶ ಸಿಗುವುದು ಅನುಮಾನ. ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರು, ಟಿ20 ವಿಶ್ವಕಪ್ ವಿಜೇತ ಆಟಗಾರರಿಗೆ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡ 2-0 ಅಂತರದಲ್ಲಿ ವೈಟ್‌ವಾಶ್ ಆಘಾತ ಅನುಭವಿಸಿತ್ತು. ಈ ಸರಣಿಯಲ್ಲಿ ವೈಭವ್‌ಗೆ ಚೊಚ್ಚಲ ಪಂದ್ಯವನ್ನು ಆಡಲು ಅವಕಾಶ ನೀಡಲಿಲ್ಲ. ಬದಲಾಗಿ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಗೆ ಹಾಗೂ ವೇಗದ ಬೌಲರ್ ಪ್ರಿನ್ಸ್ ಯಾದವ್ ಅವರಿಗೆ ಭಾರತ ತಂಡದ ಪರ ಚೊಚ್ಚಲ ಪಂದ್ಯ ಆಡಲು ಅವಕಾಶ ನೀಡಲಾಯಿತು.
ಮಂಗಳವಾರ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸಮರ್ಥಿಸಿಕೊಂಡರು. ಪ್ರಸ್ತುತ ಪ್ಲೇಯಿಂಗ್ ಇಲೆವೆನ್‌ನಲ್ಲಿರುವ ಪ್ರತಿಯೊಬ್ಬ ಆಟಗಾರರೂ ತಮ್ಮ ನಿರಂತರ ಉತ್ತಮ ಪ್ರದರ್ಶನದ ಆಧಾರದ ಮೇಲೆ ತಮ್ಮ-ತಮ್ಮ ಸ್ಥಾನಗಳನ್ನು ಸಂಪಾದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
IND vs ENG: ವೈಭವ್ ಸೂರ್ಯವಂಶಿ ನೀರು ತೆಗೆದುಕೊಂಡು ಹೋದರೆ ತಪ್ಪೇನು? ಆರ್ ಅಶ್ವಿನ್ ಗರಂ!
"ತಂಡದಲ್ಲಿ ಆಡುತ್ತಿರುವ ಪ್ರತಿಯೊಬ್ಬ ಆಟಗಾರರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಬ್ಬ ಆಟಗಾರ ಮಾತ್ರ ಸಾಧನೆ ಮಾಡಿದ್ದಾನೆ ಎನ್ನುವುದು ಸರಿಯಲ್ಲ," ಎಂದು ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
"ಪ್ರತಿಯೊಬ್ಬರಿಗೂ ಅವಕಾಶಗಳನ್ನು ನೀಡಬೇಕು. ಜೊತೆಗೆ, ಆಟಗಾರರಲ್ಲಿ ಆತ್ಮವಿಶ್ವಾಸ ಬೆಳೆಸುವಂತಹ ಭದ್ರತೆಯ ಭಾವನೆಯನ್ನು ರೂಪಿಸಬೇಕು. ಆಗ ಅವರು ಮುಂದಿನ ಟೂರ್ನಿಗಳಲ್ಲೂ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಗುತ್ತದೆ," ಎಂದು ಅವರು ಹೇಳಿದರು.
ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಪ್ರಮುಖ ಆಟಗಾರರ ಮೇಲೆ ತಂಡದ ನಿರ್ವಹಣೆ ಏಕೆ ಇನ್ನೂ ವಿಶ್ವಾಸ ಇಟ್ಟಿದೆ ಎಂಬುದನ್ನೂ ಅಯ್ಯರ್ ವಿವರಿಸಿದರು. "ಕಳೆದ ವಿಶ್ವಕಪ್ ಗೆಲ್ಲಲು ನೆರವಾದ ಆಟಗಾರರ ಮೇಲೆ ಖಂಡಿತವಾಗಿಯೂ ನಮಗೆ ವಿಶ್ವಾಸವಿದೆ. ಟಿ20 ಕ್ರಿಕೆಟ್ ಅನ್ನು ಹೇಗೆ ಆಡಬೇಕು ಮತ್ತು ಆ ಮಾದರಿಯಲ್ಲಿ ಹೇಗೆ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ಸ್ಪಷ್ಟ ಕಲ್ಪನೆ ನಮ್ಮಲ್ಲಿದೆ. ಆ ದೃಷ್ಟಿಯಿಂದ ನೋಡಿದರೆ, ನಮ್ಮ ಬಳಿ ಬಲಿಷ್ಠ ಆಟಗಾರರ ಆಧಾರ ಸ್ತಂಭಗಳಿವೆ," ಎಂದು ಅಯ್ಯರ್ ತಿಳಿಸಿದ್ದಾರೆ.
IND vs ENG: ವೈಭವ್ ಸೂರ್ಯವಂಶಿ ನೀರು ತೆಗೆದುಕೊಂಡು ಹೋದರೆ ತಪ್ಪೇನು? ಆರ್ ಅಶ್ವಿನ್ ಗರಂ!
ಭಾರತ ತಂಡದ ಪರ ಇನ್ನೂ ಚೊಚ್ಚಲ ಪಂದ್ಯವನ್ನೇ ಆಡದಿದ್ದರೂ, 15 ವರ್ಷದ ವೈಭವ್ ಸೂರ್ಯವಂಶಿ ಈಗಾಗಲೇ ಅಪಾರ ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದ್ದಾರೆ.
ಕೇವಲ 15 ವರ್ಷ 91 ದಿನಗಳ ವಯಸ್ಸಿನಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರೆ, ಪುರುಷ ಹಾಗೂ ಮಹಿಳಾ ವಿಭಾಗ ಸೇರಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಅವರು ನಿರ್ಮಿಸುತ್ತಿದ್ದರು. ಆದರೆ ಭಾರತದ ಟೀಮ್ ಮ್ಯಾನೇಜ್‌ಮೆಂಟ್ ಇತ್ತೀಚಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನುಭವಿ ಆರಂಭಿಕರಾದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರ ಮೇಲೆಯೇ ವಿಶ್ವಾಸವಿಟ್ಟು, ಅದೇ ಆರಂಭಿಕ ಬ್ಯಾಟಿಂಗ್ ಕ್ರಮವನ್ನು ಮುಂದುವರಿಸಿತ್ತು.