ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಮೇ 26ರಿಂದ ಪ್ಲೇಆಫ್ಸ್ ಪಂದ್ಯಗಳು ಶರುವಾಗಲಿವೆ. ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು (RCB vs GT) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಅಂದ ಹಾಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ (Axar Patel), ಆರ್‌ಸಿಬಿ ತಂಡವನ್ನು ಹೊರಗಿಟ್ಟು ಈ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಬಲ್ಲ ತಮ್ಮ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದಾರೆ.
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಭಾನುವಾರ ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು. ಈ ಪಂದ್ಯದ ಬಳಿಕ ಮಾತನಾಡಿದ ಅಕ್ಷರ್ ಪಟೇಲ್, ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ವಿವರಿಸಿದ್ದಾರೆ.
ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಮೇ 22 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ಸೋತರೂ ಅತ್ಯುತ್ತಮ ರನ್‌ರೇಟ್ ಮೂಲಕ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು. ಆದರೆ, ಗೆದ್ದರೂ ಹೈದರಾಬಾದ್ ತಂಡ ರನ್‌ರೇಟ್ ಕಡಿಮೆ ಇದ್ದ ಕಾರಣ ಮೂರನೇ ಸ್ಥಾನದಲ್ಲಿಯೇ ಉಳಿಯಿತು ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಕಾದಾಟ ನಡೆಸಲಿದೆ.
ಕೆಕೆಆರ್ ಎದುರು ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್‌ನಲ್ಲಿ ಮಾತನಾಡಿದ ಅಕ್ಷರ್ ಪಟೇಲ್, "ನನಗೆ ಅನಿಸಿದ ಹಾಗೆ ಸನ್‌ರೈಸರ್ಸ್ ಹೈದರಾಬಾದ್ ತುಂಬಾ ಬಲಿಷ್ಠ ತಂಡವಾಗಿದೆ. ಈ ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್‌ಗಳನ್ನು ಸಿಡಿಸಿದರೆ, ಎಸ್‌ಆರ್‌ಎಚ್ ಅಸಾಧಾರಣ ತಂಡದಂತೆ ಕಾಣುತ್ತದೆ," ಎಂದು ಹೇಳಿದ್ದಾರೆ.
ರಾಹಲ್ ಅರ್ಧಶತಕ; ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ 2026ರ ಐಪಿಎಲ್ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಆರನೇ ಸ್ಥಾನದ ಮೂಲಕ ತನ್ನ ಅಭಿಯಾನವನ್ನು ಮುಗಿಸಿತು. ಟೂರ್ನಿಯ ಮಧ್ಯಭಾಗದಲ್ಲಿ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿದ್ದು, ಬಳಿಕ ಕಮ್‌ಬ್ಯಾಕ್ ಮಾಡಲು ವಿಫಲವಾದ ಕಾರಣ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಸೀಸನ್‌ನ ಕೊನೆಯ ಮೂರು ಪಂದ್ಯಗಳಲ್ಲಿ ಡೆಲ್ಲಿ ಜಯ ಸಾಧಿಸಿ ಸಕಾರಾತ್ಮಕ ಅಂತ್ಯ ಕಂಡಿದ್ದರೂ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಅದು ಸಾಕಾಗಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ವೈಫಲ್ಯಕ್ಕೆ ಕಾರಣ ತಿಳಿಸಿದ ಅಕ್ಷರ್ ಪಟೇಲ್
ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷರ್ ಪಟೇಲ್, ಟೂರ್ನಿಯ ನಿರ್ಣಾಯಕ ಕ್ಷಣಗಳನ್ನು ಬಳಸಿಕೊಳ್ಳುವಲ್ಲಿ ದೆಹಲಿ ವಿಫಲವಾಯಿತು ಎಂದು ಒಪ್ಪಿಕೊಂಡರು.
“ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ನೀವು ಏನನ್ನು ಮಾಡಬಹುದೆಂಬುದು ಅರ್ಥವಾಗುತ್ತದೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ನಾವು ಪ್ರಮುಖ ಕ್ಷಣಗಳನ್ನು ಸದುಪಯೋಗಪಡಿಸಿಕೊಂಡಿದ್ದರೆ ಪರಿಸ್ಥಿತಿ ಬೇರೆ ರೀತಿ ಇರುತ್ತಿತ್ತು. ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ, ಆದರೆ ಕೆಲ ಮಹತ್ವದ ಸಂದರ್ಭಗಳನ್ನು ಕೈಚೆಲ್ಲಿದ್ದೇವೆ,” ಎಂದು ಡೆಲ್ಲಿ ನಾಯಕ ಅಕ್ಷರ್ ಪಟೇಲ್ ತಿಳಿಸಿದ್ದಾರೆ.