ಚೆನ್ನೈ: ಟಿಮ್ ಸೀಫರ್ಟ್ (Tim Seifert) ಹಾಗೂ ಫಿನ್ ಆಲೆನ್ (Finn Allen) ಅವರ ದಾಖಲೆಯ ಜೊತೆಯಾಟದ ಬಲದಿಂದ ನ್ಯೂಜಿಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ʻಡಿʼ ಗುಂಪಿನ ಪಂದ್ಯದಲ್ಲಿ ಯುಎಇ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ಸತತ ಎರಡನೇ ಗೆಲುವು ಪಡೆದು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಇನ್ನು ಎದುರಾಳಿ ಯುಎಇ ತಂಡ, ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದ್ದರ ಹೊರತಾಗಿಯೂ ಕಿವೀಸ್ ತಂಡದ ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ವಿಫಲವಾಗಿ ಸೋಲು ಒಪ್ಪಿಕೊಂಡಿತು.
ಮಂಗಳವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಯುಎಇ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊಹಮ್ಮದ್ ವಸೀಮ್ ಹಾಗೂ ಆಲಿಶನ್ ಶರಫು ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳಿಗೆ 173 ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ 174 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ಪರ ಆರಂಭಿಕರಾದ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ಸ್ಫೋಟಕ ಆಟವಾಡಿದರು. ಈ ಜೋಡಿಯ 175 ರನ್‌ಗಳ ಜೊತೆಯಾಟದ ಬಲದಿಂದ ನ್ಯೂಜಿಲೆಂಡ್ 16ನೇ ಓವರ್‌ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಇದು ಟಿ20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್ ಕಳೆದುಕೊಳ್ಳದೆ ಅತಿ ಹೆಚ್ಚು ರನ್ ಚೇಸ್ ಆಗಿದೆ.
NZ vs UAE: 18ನೇ ಓವರ್‌ನಲ್ಲಿ 27 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಗ್ಲೆನ್ ಫಿಲಿಪ್ಸ್!
ಮೊದಲು ಬ್ಯಾಟ್ ಮಾಡಿದ್ದ ಯುಎಇಗೆ ಉತ್ತಮ ಆರಂಭವನ್ನು ನೀಡಲಿಲ್ಲ. ಆರ್ಯನ್ಶ್ ಶರ್ಮಾ 8 ರನ್‌ಗೆ ವಿಕೆಟ್ ಒಪ್ಪಿಸಿದರು.ಆ ಮೂಲಕ ಯುಎಇ 12 ರನ್‌ಗಳಿಗೆ ತಮ್ಮ ಒಂದು ವಿಕೆಟ್ ಕಳೆದುಕೊಂಡಿತು. ನಂತರ ನಾಯಕ ಮೊಹಮ್ಮದ್ ವಸೀಮ್ ಮತ್ತು ಆಲಿಶನ್ ಸರಾಫು ಎರಡನೇ ವಿಕೆಟ್‌ಗೆ 107 ರನ್‌ಗಳ ಪಾಲುದಾರಿಕೆಯನ್ನು ನೀಡುವ ಮೂಲಕ ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಶರಫು 47 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳು ಮತ್ತು ಐದು ಬೌಂಡರಿಗಳನ್ನು ಒಳಗೊಂಡಂತೆ 55 ರನ್ ಗಳಿಸಿ ಔಟಾದರು.
ನಂತರ ನಾಯಕ ವಸೀಮ್ ಮತ್ತು ಮಯಾಂಕ್ ಕುಮಾರ್ ನಾಲ್ಕನೇ ವಿಕೆಟ್‌ಗೆ 40 ರನ್ ಸೇರಿಸಿದರು. ಮಯಾಂಕ್ 12 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 21 ರನ್ ಗಳಿಸಿ ಔಟಾದರು. ವಸೀಮ್ ಕೊನೆಯವರೆಗೂ ಅಜೇಯರಾಗಿ ಉಳಿದರು, 45 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 66 ರನ್ ಗಳಿಸಿದರು. ನ್ಯೂಜಿಲೆಂಡ್ ಪರ, ಮ್ಯಾಟ್ ಹೆನ್ರಿ 4 ಓವರ್‌ಗಳಲ್ಲಿ 37 ರನ್‌ಗಳಿಗೆ 2 ವಿಕೆಟ್ ಪಡೆದರು. ಜಾಕೋಬ್ ಡಫಿ, ಲಾಕಿ ಫರ್ಗ್ಯೂಸನ್, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಒಂದೊಂದು ವಿಕೆಟ್ ಪಡೆದರು.
ಟಿಮ್ ಸೀಫರ್ಟ್-ಫಿನ್ ಆಲೆನ್ ಜುಗಲ್‌ಬಂದಿ
ನ್ಯೂಜಿಲೆಂಡ್‌ನ ಆರಂಭಿಕ ಆಟಗಾರರಾದ ಟಿಮ್ ಸೀಫರ್ಟ್ ಮತ್ತು ಫಿನ್ ಆಲೆನ್ ಮೊದಲ ಮೂರು ಓವರ್‌ಗಳಲ್ಲಿ ಕೇವಲ 22 ರನ್ ಗಳಿಸಿದ್ದರು. ಆದರೆ ನಾಲ್ಕನೇ ಓವರ್‌ನಲ್ಲಿ ಜುನೈದ್ ಸಿದ್ದಿಕಿ ವಿರುದ್ಧ ಇಬ್ಬರೂ 22 ರನ್ ಗಳಿಸಿದರು. ಅಲ್ಲಿಂದ ಕಿವೀಸ್ ಆರಂಭಿಕ ಆಟಗಾರರು ಹಿಂತಿರುಗಿ ನೋಡಲಿಲ್ಲ. ಸೀಫರ್ಟ್ 23 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರೆ, ಅಲೆನ್ 27 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ಟಿಮ್ ಸೀಫರ್ಟ್ 42 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 89 ರನ್ ಗಳಿಸಿದರು. ಅಲೆನ್ 50 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 84 ರನ್ ಗಳಿಸಿದರು. ಈ ಇಬ್ಬರೂ ಮೊದಲನೇ ವಿಕೆಟ್‌ಗೆ 175 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
IND vs NAM: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆಯಬಲ್ಲ ಮೂವರು ಆಟಗಾರರು!
ಪುರುಷರ ಟಿ20ಐ ಪಂದ್ಯಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಅತಿ ದೊಡ್ಡ ರನ್ ಚೇಸ್
200 - ಪಾಕಿಸ್ತಾನ vs ಇಂಗ್ಲೆಂಡ್, ಕರಾಚಿ (2022)
174 - ನ್ಯೂಜಿಲೆಂಡ್ vs ಯುಎಇ, ಚೆನ್ನೈ (2026)
169 - ನ್ಯೂಜಿಲೆಂಡ್ vs ಪಾಕಿಸ್ತಾನ, ಹ್ಯಾಮಿಲ್ಟನ್ (2016)
169 - ಇಂಗ್ಲೆಂಡ್ vs ಭಾರತ, ಅಡಿಲೇಡ್ (2022)
153 - ಭಾರತ vs ಜಿಂಬಾಬ್ವೆ, ಹರಾರೆ (2024)