ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಪಾಕಿಸ್ತಾನ ಕ್ರಿಕೆಟಿಗರಿಗೆ 16 ಲಕ್ಷ ರು ದಂಡ ವಿಧಿಸಿದ್ದು ನಿಜಾನಾ? ಸ್ಪಷ್ಟನೆ ನೀಡಿದ ಪಿಸಿಬಿ!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಿರ್ಗಮನದ ಬಳಿಕ ತನ್ನ ತಂಡದ ಆಟಗಾರರಿಗೆ ತಲಾ 16 ಲಕ್ಷ ರು ದಂಡ ವಿಧಿಸಲಾಗಿದೆ ಎಂಬ ವರದಿಗಳನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತಳ್ಳಿ ಹಾಕಿದೆ. ಆಟಗಾರರ ಮೇಲೆ ಯಾವುದೇ ದಂಡ ವಿಧಿಸಲಾಗಿಲ್ಲ. ಆದರೆ ಆಟಗಾರರ ಪ್ರದರ್ಶನವನ್ನು ಆಧಾರವಾಗಿಸಿಕೊಂಡ ಜವಾಬ್ದಾರಿತನ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಪಿಸಿಬಿ ವಕ್ತಾರ ಆಮಿರ್‌ ಮಿರ್‌ ಸ್ಪಷ್ಟನೆ ನೀಡಿದ್ದಾರೆ.

Pakistan Cricket Team

ನವದೆಹಲಿ: ಕಳೆದ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಸೆಮಿಫೈನಲ್ ತಲುಪಲು ವಿಫಲವಾದ ಕಾರಣ ಪಾಕಿಸ್ತಾನ ತಂಡದ ಆಟಗಾರರಿಗೆ ದಂಡ ವಿಧಿಸಲಾಗಿದೆ ಎಂಬ ವರದಿಗಳನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ತಳ್ಳಿ ಹಾಕಿದೆ. ಪಿಸಿಬಿ ವಕ್ತಾರ ಆಮಿರ್‌ ಮಿರ್‌ (Amir Mir), ಈ ಊಹಾಪೋಹಗಳನ್ನು ನಿರಾಕರಿಸಿದರು ಹಾಗೂ ಆಟಗಾರರ ಮೇಲೆ ಯಾವುದೇ ದಂಡ ವಿಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಂದ ಹಾಗೆ ಪಾಕಿಸ್ತಾನ ತಂಡ, ಸೂಪರ್‌-8ರ ಹಂತದಲ್ಲಿ ಮೂರು ಅಂಕಗಳನ್ನು ಕಲೆ ಹಾಕಿತ್ತಾದರೂ ರನ್‌ರೇಟ್‌ ಕಡಿಮೆ ಇದ್ದ ಕಾರಣ ಸೆಮಿಫೈನಲ್‌ಗೆ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್‌ ತಂಡ ಮೂರು ಅಂಕ ಹೊಂದಿತ್ತಾದರೂ ಉತ್ತಮ ರನ್‌ರೇಟ್‌ ಇದ್ದ ಕಾರಣ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿತ್ತು.

ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕಿಸ್ತಾನ ಹೊರಬಂದ ಕೆಲವೇ ದಿನಗಳಲ್ಲಿ ಈ ತಂಡದ ನಿರಾಶಾಜನಕ ಅಭಿಯಾನದ ಬಳಿಕ ಪಿಸಿಬಿ ದೊಡ್ಡ ಪ್ರಮಾಣದ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿತ್ತು. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಾರ, ತಂಡದ ನಿರೀಕ್ಷೆಗಳನ್ನು ಪೂರೈಸದ ಕಾರಣ ಪ್ರತಿಯೊಬ್ಬ ಆಟಗಾರನಿಗೂ ಭಾರತೀಯ ರುಪಾಯಿ ಲೆಕ್ಕದಲ್ಲಿ 16 ಲಕ್ಷ ರು ದಂಡವನ್ನು ವಿಧಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿತ್ತು. ಆದರೆ, ಇದೀಗ ಪಿಸಿಬಿ ಇದನ್ನು ತಳ್ಳಿ ಹಾಕಿದೆ.

ಮೈಕಲ್‌ ಹೇಸನ್‌ ಬಗ್ಗೆ ಅಸಮಾಧಾನ, ಪಾಕಿಸ್ತಾನ ಆಯ್ಕೆ ಸಮಿತಿಯಿಂದ ಹೊರಬಂದ ಅಲೀಮ್‌ ದಾರ್‌!

ಪಿಸಿಬಿ ವಕ್ತಾರ ಆಮಿರ್‌ ಮಿರ್‌ ಸ್ಪಷ್ಟನೆ

ಆದರೆ ಈ ರೀತಿಯ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಪಿಸಿಬಿ ವಕ್ತಾರ ಆಮಿರ್‌ ಮಿರ್‌ ಸ್ಪಷ್ಟಪಡಿಸಿದ್ದಾರೆ. ಆಟಗಾರರು ಉತ್ತಮ ಪ್ರದರ್ಶನ ನೀಡಿದಾಗ ಅವರಿಗೆ ಹಲವು ಪ್ರೋತ್ಸಾಹಧನಗಳು ದೊರೆಯುವ ಹಿನ್ನೆಲೆಯಲ್ಲಿ, ಅವರ ಪ್ರದರ್ಶನಕ್ಕೆ ಹೆಚ್ಚು ಜವಾಬ್ದಾರಿತನ ತರಲು ಕೆಲವು ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ ಪಾಕಿಸ್ತಾನ ಆಟಗಾರರು ಸುಮಾರು ಪಿಕೆಆರ್‌ ಲೆಕ್ಕದಲ್ಲಿ 6–7 ಕೋಟಿ ರು ವೇತನ ಪಡೆಯುತ್ತಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ವೈಫಲ್ಯ; ಪಾಕ್‌ ಆಟಗಾರರಿಗೆ 16 ಲಕ್ಷ ರು ದಂಡ ವಿಧಿಸಿದ ಪಿಸಿಬಿ!

“ಯಾವುದೇ ಆಟಗಾರನಿಗೂ ದಂಡ ವಿಧಿಸಿಲ್ಲ. ಆದರೆ ಆಟಗಾರರಿಗಾಗಿ ಒಂದು ಸೂತ್ರವನ್ನು ರೂಪಿಸುವ ಬಗ್ಗೆ ಮಂಡಳಿ ಯೋಚಿಸುತ್ತಿದೆ, ಏಕೆಂದರೆ ಅವರು ಉತ್ತಮ ಪ್ರದರ್ಶನ ನೀಡಿದಾಗ ಹಲವು ಪ್ರೋತ್ಸಾಹಧನಗಳನ್ನು ಪಡೆಯುತ್ತಾರೆ. ಆದರೆ ಇದುವರೆಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಮತ್ತು ಯಾರಿಗೂ ದಂಡ ವಿಧಿಸಲಾಗಿಲ್ಲ,” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನ ತಂಡದ ಟಿ20 ವಿಶ್ವಕಪ್‌ ಅಭಿಯಾನ

ಸಲ್ಮಾನ್‌ ಅಲಿ ಆಘಾ ಅವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಣಕ್ಕೆ ಇಳಿದಿತ್ತು. ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದ ಪಾಕಿಸ್ತಾನ ತಂಡ, ಸುಲಭವಾಗಿ ಸೂಪರ್‌-8ರ ಹಂತಕ್ಕೆ ಪ್ರವೇಶ ಮಾಡಿತ್ತು. ಆದರೆ, ನ್ಯೂಜಿಲೆಂಡ್‌ ವಿರುದ್ಧ ಸೂಪರ್‌-8ರ ಹಂತದ ತನ್ನ ಮೊದಲನೇ ಪಂದ್ಯ ಮಳೆಗೆ ಬಲಿಯಾಯಿತು. ಇದರ ಪರಿಣಾನ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ನೀಡಲಾಗಿತ್ತು.

ʻಫೈಯರ್‌ ಅಂಡ್‌ ಫೈಯರ್‌ʼ: ಅಭಿಷೇಕ್‌ ಶರ್ಮಾ ಜೊತೆಗಿನ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ನಂತರ ಇಂಗ್ಲೆಂಡ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿತ್ತಾದರೂ ಅಂತಿಮವಾಗಿ ಕೇವಲ 2 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಪಾಕ್‌ ನೀಡಿದ್ದ 165 ರನ್‌ ಗುರಿಯನ್ನು ಹಿಂಬಾಲಿಸಿದ್ದ ಇಂಗ್ಲೆಂಡ್‌ 58 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸೋಲಿನಂಚಿಗೆ ತಲುಪಿತ್ತು. ಆದರೆ, ನಾಯಕ ಹ್ಯಾರಿ ಬ್ರೂಕ್‌ ಶತಕ ಸಿಡಿಸಿ ತಮ್ಮ ತಂಡವನ್ನು ಗೆಲ್ಲಿಸಿದ್ದರು. ನಂತರ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ಎದುರು ಪಾಕ್‌, 213 ರನ್‌ಗಳ ಗುರಿಯನ್ನು ನೀಡಿತ್ತಾದರೂ ಎದುರಾಳಿ ತಂಡಕ್ಕೆ 207 ರನ್‌ಗಳನ್ನು ನೀಡಿತ್ತು. ಕೇವಲ ಐದು ರನ್‌ನಿಂದ ಗೆದ್ದಿತ್ತು. ಆ ಮೂಲಕ ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ಎರಡೂ ತಂಡಗಳು ತಲಾ 3 ಅಂಕಗಳನ್ನು ಹೊಂದಿದ್ದವು. ಆದರೆ, ಕಿವೀಸ್‌ (+1.390) ಉತ್ತಮ ರನ್‌ ರೇಟ್‌ನಿಂದ ಸೆಮೀಸ್‌ಗೆ ತಲುಪಿತು.