ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AUS ಟೆಸ್ಟ್‌ ಸರಣಿ ವೇಳೆ ರಿಷಭ್ ಪಂತ್ ಆಸ್ಟ್ರೇಲಿಯಾ ಆಟಗಾರರನ್ನು ಕೆಣಕುವ ಸಾಧ್ಯತೆ: ಆರ್‌ ಅಶ್ವಿನ್!

IND vs AUS: ಮುಂಬರುವ ಭಾರತ-ಆಸ್ಟ್ರೇಲಿಯಾ ಬಾರ್ಡರ್‌-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸ್ಯಾಂಡ್‌ಪೇಪರ್ ವಿವಾದ ಮತ್ತೆ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ರಿಷಭ್ ಪಂತ್ ಆಸೀಸ್ ಆಟಗಾರರನ್ನು ಕೆಣಕಬಹುದು ಎಂದ ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಆಟಗಾರರನ್ನು ರಿಷಭ್‌ ಪಂತ್‌ ಕೆಣಕಲಿದ್ದಾರೆಂದ ಆರ್‌ ಅಶ್ವಿನ್‌.

ನವದೆಹಲಿ: ಕ್ರಿಕೆಟ್‌ ಜಗತ್ತಿನಲ್ಲಿ 2018ರ ಸ್ಯಾಂಡ್‌ಪೇಪರ್ ವಿವಾದ (Sandpapergate) ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾದ ಬ್ಯಾಟರ್ ಉಸ್ಮಾನ್ ಖವಾಜಾ ತಮ್ಮ ಆತ್ಮಚರಿತ್ರೆ 'ಸಬ್ರ್' (Sabr) ಮೂಲಕ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಬಹುತೇಕ ಆಟಗಾರರಿಗೆ ಚೆಂಡು ವಿರೂಪಗೊಳಿಸಲು ಸ್ಯಾಂಡ್‌ಪೇಪರ್ ಬಳಸಿದ ವಿಷಯ ತಿಳಿದಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು.

ಈ ಹೇಳಿಕೆಗೆ ಡೇವಿಡ್ ವಾರ್ನರ್ ಮತ್ತು ಕ್ಯಾಮರನ್ ಬ್ಯಾಂಕ್ರಾಫ್ಟ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಆಸ್ಟ್ರೇಲಿಯಾದ ಹಾಲಿ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜಾಶ್ ಹೇಝಲ್‌ವುಡ್ ಬೌಲಿಂಗ್ ವಿಭಾಗದ ಆಟಗಾರರು ಈ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ ಎಂದು ನಿರಾಕರಿಸಿದ್ದಾರೆ.

ಈ ವಿಚಾರ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಫಾಕ್ಸ್ ಸ್ಪೋರ್ಟ್ಸ್ ಸಂಸ್ಥೆಯು ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಅವರನ್ನು ತಾತ್ಕಾಲಿಕವಾಗಿ ಕಾಮೆಂಟರಿ ಜವಾಬ್ದಾರಿಯಿಂದ ದೂರವಿಟ್ಟಿದೆ. ಇದೀಗ ವಿವಾದದ ಕುರಿತಾದ ಚರ್ಚೆಗಳು ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದರೂ, ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಈ ವಿಚಾರ ಮತ್ತೆ ಮುನ್ನೆಲೆಗೆ ಬರಲಿದೆ ಎಂದು ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

2018ರ ಬಾರ್ಡರ್‌-ಗವಾಸ್ಕರ್ ಟ್ರೋಫಿ ಸರಣಿಯ ಸಂದರ್ಭದಲ್ಲಿ ಭಾರತದ ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಸ್ಟ್ರೇಲಿಯಾದ ಅಂದಿನ ನಾಯಕ ಟಿಮ್ ಪೇನ್ ಅವರನ್ನು 'ತಾತ್ಕಾಲಿಕ ನಾಯಕ' ಎಂದು ಕರೆದು ಕಾಲೆಳೆದಿದ್ದರು. ಮುಂಬರುವ ಸರಣಿಯಲ್ಲೂ ಪಂತ್ ಇದೇ ರೀತಿಯ ಮಾತಿನ ಚಕಮಕಿ ನಡೆಸುವ ಸಾಧ್ಯತೆಯಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಪಂತ್ ವಿಕೆಟ್‌ ಹಿಂದೆ ನಿಂತುಕೊಂಡು ಆಸ್ಟ್ರೇಲಿಯಾ ಬ್ಯಾಟರ್‌ಗಳ ಗಮನ ಬೇರೆಡೆ ಸೆಳೆಯಲು ಒಂದೆರಡು ಮಾತುಗಳನ್ನು ಆಡಬಹುದು. ಆದರೆ, ಭಾರತೀಯ ಆಟಗಾರರು ಇಂತಹ ತಂತ್ರ ಅನುಸರಿಸಿದರೆ ಆಸ್ಟ್ರೇಲಿಯನ್ನರು ಕೂಡ ಅದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಅಶ್ವಿನ್ ಹೇಳಿದ್ದಾರೆ.

"ನಾನು ಪ್ರಾಮಾಣಿಕವಾಗಿ ಹೇಳುವುದಾದರೆ, ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ವಿಚಾರವಾಗಿ ಮಾತನಾಡಬಹುದಾದ ಒಬ್ಬ ವ್ಯಕ್ತಿ ಮಾತ್ರ ನನಗೆ ಕಾಣಿಸುತ್ತಾರೆ. ಅದು ಸ್ಟಂಪ್ಸ್‌ ಹಿಂದೆ ನಿಲ್ಲುವ ರಿಷಭ್ ಪಂತ್. ಅವರು ಒಂದೆರಡು ಮಾತುಗಳಿಂದ ಆಸ್ಟ್ರೇಲಿಯಾ ಆಟಗಾರರನ್ನು ಕೆಣಕಬಹುದು. ಆದರೆ, ಭಾರತೀಯರು ಈ ವಿಚಾರವನ್ನು ಪ್ರಸ್ತಾಪಿಸಿದರೆ ಆಸ್ಟ್ರೇಲಿಯನ್ನರು ಕೂಡ ಅದಕ್ಕೆ ತಕ್ಕ ಉತ್ತರ ನೀಡುವುದನ್ನು ನೋಡಲು ಬಯಸುತ್ತೇನೆ. ಏಕೆಂದರೆ, ಆಸ್ಟ್ರೇಲಿಯನ್ನರು ಇಂತಹ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಎದುರಾಳಿ ತಂಡದ ಬಗ್ಗೆ ಚಿಂತಿಸುವುದಕ್ಕಿಂತ ಭಾರತ ತನ್ನ ಟೆಸ್ಟ್ ಕ್ರಿಕೆಟ್‌ನ ಸಮಸ್ಯೆಗಳತ್ತ ಗಮನ ಹರಿಸಬೇಕು. ತಮ್ಮ ಆಟವನ್ನು ಸರಿಯಾಗಿ ಆಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಈ ಸರಣಿಯಲ್ಲಿ ಭಾರತ ಹೇಗೆ ಆರಂಭ ಮಾಡುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ," ಎಂದು ಅಶ್ವಿನ್ ಜಿಯೋಸ್ಟಾರ್‌ನಲ್ಲಿ ತಿಳಿಸಿದ್ದಾರೆ.

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

ಉಸ್ಮಾನ್ ಖವಾಜಾರನ್ನು ಪ್ಯಾಟ್ ಕಮಿನ್ಸ್ ಬಲಿಪಶು ಮಾಡಿದ್ದಾರೆ: ಮ್ಯಾಥ್ಯೂ ಹೇಡನ್

ಇನ್ನು ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಬಾರ್ಡರ್‌-ಗವಾಸ್ಕರ್ ಟ್ರೋಫಿ ವೇಳೆ ಸ್ಯಾಂಡ್‌ಪೇಪರ್ ವಿವಾದ ಮತ್ತೆ ಚರ್ಚೆಯಾಗಲಿದೆ ಎಂದು ನಿರೀಕ್ಷಿಸಿದ್ದಾರೆ. ಆದರೆ, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಈ ವಿಚಾರದಲ್ಲಿ ಪ್ಯಾಟ್ ಕಮಿನ್ಸ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಮಿನ್ಸ್ ಈಗಾಗಲೇ ಸುಮಾರು ಒಂದೂವರೆ ಗಂಟೆಗಳ ಕಾಲ ಸುದ್ದಿಗೋಷ್ಠಿ ನಡೆಸುವ ಮೂಲಕ ಈ ವಿವಾದದ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಇನ್ನು ಮುಂದೆ ಚರ್ಚೆ ನಡೆಯಬಾರದು ಎಂಬ ಸಂದೇಶ ನೀಡಿದ್ದಾರೆ ಎಂದು ಹೇಡನ್ ಹೇಳಿದ್ದಾರೆ.

"ಪ್ಯಾಟ್ ಕಮಿನ್ಸ್ ಮೂಲತಃ ಉಸ್ಮಾನ್ ಖವಾಜಾ ಅವರನ್ನು ಬಲಿಪಶುವನ್ನಾಗಿ ಮಾಡಿದ್ದಾರೆ. ಅವರಿಬ್ಬರ ಸ್ನೇಹ ಮತ್ತು ಖವಾಜಾ ಆ ಸ್ನೇಹವನ್ನು ಎಷ್ಟು ಹಗುರವಾಗಿ ಪರಿಗಣಿಸಿದ್ದಾರೆ ಎಂಬಂತಹ ವೈಯಕ್ತಿಕ ವಿಚಾರಗಳನ್ನು ಕಮಿನ್ಸ್ ಬಹಿರಂಗಪಡಿಸಿದ್ದಾರೆ. ಒಂದೂವರೆ ಗಂಟೆಗಳ ಕಾಲ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಆದರೆ, ಅದರ ನಂತರ ಈ ವಿಚಾರವಾಗಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಭಾರತಕ್ಕೆ ಬಾರ್ಡರ್‌-ಗವಾಸ್ಕರ್ ಟ್ರೋಫಿಗಾಗಿ ಬಂದಾಗ ಸ್ಯಾಂಡ್‌ಪೇಪರ್ ವಿವಾದದ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂಬುದು ಅವರ ನಿಲುವಾಗಿದೆ. ಆದರೆ, ಅದು ಕೇವಲ ಆಶಯವಷ್ಟೇ," ಎಂದು ಮ್ಯಾಥ್ಯೂ ಹೇಡನ್ ವಿಶ್ಲೇಷಿಸಿದ್ದಾರೆ.