ದಾಂಬೂಲ: ಭಾರತ ಹಾಗೂ ಶ್ರೀಲಂಕಾ ಎ ತಂಡಗಳ(IND-A vs SL-A) ನಡುವಣ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ಹೈಡ್ರಾಮಾ ನಡೆದಿತ್ತು. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಹಾಗೂ ನಾಯಕ ತಿಲಕ್ ವರ್ಮಾ ತಾಳ್ಮೆ ಕಳೆದುಕೊಂಡು ಎದುರಾಳಿ ಆಟಗಾರರು ಹಾಗೂ ಅಂಪೈರ್‌ಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಘಟನೆ ನಡೆಯಿತು. ಸೂಪರ್ ಓವರ್ ಬಳಿಕ ಪಿಚ್ ಬಳಿ ಇದ್ದ ವೈಭವ್ ಸೂರ್ಯವಂಶಿ ಎದುರಾಳಿ ಆಟಗಾರನನ್ನು ನೂಗಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಇದೀಗ ಸ್ಪಿನ್ ದಂತಕತೆ ರವಿಚಂದ್ರನ್ ಅಶ್ವಿನ್ (R Ashwin) ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಇಲ್ಲಿನ ರಣಗಿರಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಎ ತಂಡ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 265 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, 49.2 ಓವರ್‌ಗಳಿಗೆ ಗೆಲುವಿನ ಸನಿಹ ಬಂದು 265 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಪಂದ್ಯ ಟೈ ಆಯಿತು. ಈ ವೇಳೆ ಅಂಪೈರ್‌ಗಳು ಮಂದ ಬೆಳಕಿನ ಕಾರಣ ಟೈ ಬ್ರೇಕರ್ ತೆಗೆದುಕೊಂಡು ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ನೀಡಲು ಬಯಿಸಿದರು.
ಶ್ರೀಲಂಕಾ ಎ ಆಟಗಾರನನ್ನು ತಳ್ಳಿದ ವೈಭವ್ ಸೂರ್ಯವಂಶಿ, ಸೂಪರ್ ಓವರ್ ಬಳಿಕ ಹೈಡ್ರಾಮಾ!
ಇದಕ್ಕೆ ತಿಲಕ್ ವರ್ಮಾ ಒಪ್ಪಲಿಲ್ಲ ಹಾಗೂ ನಾವು ಸೂಪರ್ ಓವರ್ ಆಡಲು ಬಯಸುತ್ತಿದ್ದೇವೆಂದು ಹೇಳಿದ್ದರು. ಇದಕ್ಕೆ ಸಹ ಆಟಗಾರರು ಕೂಡ ಒಮ್ಮತ ವ್ಯಕ್ತಪಡಿಸಿದ್ದರು. ನಂತರ ಸೂಪರ್ ಓವರ್‌ಗೆ ಎರಡೂ ತಂಡಗಳ ನಾಯಕರು ಒಪ್ಪಿಕೊಂಡರು. ಸೂಪರ್ ಓವರ್‌ನಲ್ಲಿ ಅರ್ಷದ್ ಖಾನ್ ಬೌಲ್ ಮಾಡಿದರು 16 ರನ್‌ಗಳನ್ನು ಬಿಟ್ಟುಕೊಟ್ಟರು. ಅಂದ ಹಾಗೆ ಕೊನೆಯ ಎಸೆತದಲ್ಲಿ ಅರ್ಷದ್ ಖಾನ್ ಸೊಂಡದ ಭಾಗಕ್ಕಿಂತ ಮೇಲೆ ಚೆಂಡನ್ನು ಹಾಕಿದ್ದರು. ಭಾರತ ತಂಡದ ಆಟಗಾರರು ಓವರ್ ಮುಗಿಯಿತು ಎಂದು ಪೆವಿಲಿಯನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರೆ, ವೈಭವ್ ಆಗಲೇ ಪ್ಯಾಡ್ ಅಪ್ ಮಾಡುತ್ತಿದ್ದರು.
ಆದರೆ, ಅಂಪೈರ್ ನೋ ಬಾಲ್ ನೀಡಿದರು ಹಾಗೂ ಇದು ಪ್ರವಾಸಿ ಆಟಗಾರರ ಬೇಸರಕ್ಕೆ ಕಾರಣವಾಯಿತು. ಈ ವೇಳೆ ತಿಲಕ್ ವರ್ಮಾ ಅಂಪೈರ್‌ಗಳ ಜೊತೆಗೆ ಸಂಭಾಷಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ಸ್ವಲ್ಪ ಸಮಯ ವ್ಯರ್ಥವಾಯಿತು. ನಂತರ ಭಾರತ ಎ ತಂಡದ 17 ರನ್‌ಗಳ ಚೇಸಿಂಗ್‌ನಲ್ಲಿ ಮಂದ ಬೆಳಕು ಆವರಿಸಿತ್ತು. ಇಲ್ಲಿ ಚೆಂಡು ಪರಿಪೂರ್ಣವಾಗಿ ಕಾಣಿಸುತ್ತಿರಲಿಲ್ಲ. ಭಾರತ ತಂಡ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಈ ವೇಳೆ ಲಂಕಾ ಆಟಗಾರರ ಸಂಭ್ರಮಿಸುತ್ತಿದ್ದರು ಹಾಗೂ ವೈಭವ್‌ಗೆ ಯಾರೋ ಒಬ್ಬ ಆಟಗಾರ ಏನಾದರೂ ಹೇಳಿರಬಹುದು. ಇದಕ್ಕೆ ವೈಭವ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಎದುರಾಳಿ ಆಟಗಾರನನ್ನು ನೂಕಿದರು ಹಾಗೂ ಆಟಗಾರರ ಎದುರು ವಾಗ್ವಾದ ನಡೆಸುತ್ತಿದ್ದರು.
ವಿವಾದಾತ್ಮಕ ಘಟನೆ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯೆ
ಈ ಪಂದ್ಯದಲ್ಲಿ ಸಂಭವಿಸಿದ ವಿವಾದಾತ್ಮಕ ಘಟನೆ ಬಗ್ಗೆ ಸ್ಪಿನ್ ದಂತಕತೆ ಆರ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಓಪನರ್‌ಗಳು ಕೀಸ್‌ಗೆ ಬರಲು ಬೇಕಂತಲೇ ತಡ ಮಾಡಿದ್ದರು, ಇದರಿಂದ ಭಾರತ ತಂಡದ ಆಟಗಾರರಿಗೆ ಅಸಮಾಧಾನ ಉಂಟಾಗಿತ್ತು ಎಂದು ಅಶ್ವಿನ್ ಹೇಳಿದ್ದಾರೆ.
" ಐಪಿಎಲ್ ಟೂರ್ನಿಯಲ್ಲಿ ಬಳಿಸಿದಂತೆ ಈ ಪಂದ್ಯಕ್ಕೆ ಹೆಚ್ಚಿನ ಕ್ಯಾಮೆರಾಗಳನ್ನು ಅಳವಡಿಸಿರಲಿಲ್ಲ. ಸೂಪರ್ ಓವರ್‌ನಲ್ಲಿ ನೋ ಬಾಲ್ ಕರೆಯು ಹೆಚ್ಚಿನ ಚರ್ಚೆಯನ್ನು ಹುಟ್ಟು ಹಾಕಿದೆ ಹಾಗೂ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಬರಲು ಬೇಕಂತಲೇ ತಡ ಮಾಡಿದ್ದರು. ಇದು ಭಾರತೀಯ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿತ್ತು," ಎಂದು ಅಶ್ವಿನ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
"ಭಾರತ ಎ ತಂಡದ ಆಟಗಾರರು ಬೇಸರ ವ್ಯಕ್ತಪಡಿಸಿದ್ದಕ್ಕೆ ಕಾರಣ ಏನೇಂಬುದು ಅರ್ಥವಾಗಿದೆ. ಆದರೆ, ಶ್ರೀಲಂಕಾ ಎ ಆಟಗಾರರು ಇಲ್ಲಿ ಮೈಂಡ್ ಗೇಢಮ್ ಆಡಿದ್ದಾರೆ," ಎಂದು ಅವರು ಹೇಳಿದ್ದಾರೆ.