ತಿರುವನಂತಪುರಂ: ಕರುಣ್ ನಾಯರ್ (233 ರನ್) ಹಾಗೂ ಆರ್ ಸ್ಮರಣ್ (220 ರನ್) ಅವರ ದ್ವಿಶತಕಗಳ ಬಲದಿಂದ ಕರ್ನಾಟಕ ತಂಡ, 2025ರ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಬಿ ಪಂದ್ಯದಲ್ಲಿ ಕೇರಳ ಎದುರು ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಅಲ್ಲದೆ ಎರಡನೇ ದಿನದಾಟದ ಅಂತ್ಯಕ್ಕೆ ಎದುರಾಳಿ ಕೇರಳ ತಂಡದ ಮೂರು ವಿಕೆಟ್‌ಗಳನ್ನು ಕರ್ನಾಟಕ ಕಬಳಿಸಿದ ಮೃಲುಗೈ ಸಾಧಿಸಿದೆ. ಅದ್ಭುತ ದ್ವಿಶತಕ ಬಾರಿಸಿದ ಕರುಣ್‌ನಾಯಕ, ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿಯ ನಿಮಿತ್ತ ಬಿಸಿಸಿಐ ಆಯ್ಕೆದಾರರಿಗೆ ಮುನ್ಸೂಚನೆಯನ್ನು ನೀಡಿದ್ದಾರೆ.
ಇಲ್ಲಿನ ಕೆಸಿಎ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಭಾನುವಾರ ಬೆಳಿಗ್ಗೆ ಮೂರು ವಿಕೆಟ್ ಕಳೆದುಕೊಂಡು 319 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ಪರ ಕರುಣ್ ನಾಯರ್ ಹಾಗೂ ಆರ್ ಸ್ಮರಣ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದರು. ಈ ಇಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ಗೆ 343 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 500ರ ಸನಿಹ ತಂದರು.
Karun Nair: ಮತ್ತೊಂದು ಶತಕ ಸಿಡಿಸಿದ ಕರುಣ್ ನಾಯರ್; ಕೇರಳ ವಿರುದ್ಧ ಹಿಡಿತ ಸಾಧಿಸಿದ ಕರ್ನಾಟಕ
5ನೇ ದ್ವಿಶತಕ ಬಾರಿಸಿದ ಕರುಣ್ ನಾಯರ್
ಗೋವಾ ವಿರುದ್ಧ ಕಳೆದ ಪಂದ್ಯದಲ್ಲಿ 174 ರನ್ ಗಳಿಸಿದ್ದ ಕರುಣ್ ನಾಯರ್, ಇದೀಗ ಕೇರಳ ವಿರುದ್ಧ ಅದೇ ಆಟವನ್ನು ಆಡಿದರು. ಅವರು ಆಡಿದ 389 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 25 ಬೌಂಡರಿಗಳೊಂದಿಗೆ 233 ರನ್‌ಗಳನ್ನು ಕಲೆ ಹಾಕಿದರು. ಇದು ಇವರ 5 ದ್ವಿಶತಕವಾಗಿದೆ. ಇವರು ಎನ್ ಬಸಿಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡುತ್ತಿದ್ದ ಆರ್ ಸ್ಮರಣ್, 390 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 220 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿಸದರು.
ಅಂತಿಮವಾಗಿ ಕರ್ನಾಟಕ ತಂಡ, 167 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 586 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್ ಮಾಡಿಕೊಂಡಿತು. ಮೊದಲನೇ ದಿನ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ ಶ್ರೀಜಿತ್ ಅವರು 65 ರನ್‌ಗಳನ್ನು ಗಳಿಸಿದ್ದರು. ಕೇರಳ ಪರ ಎನ್ ಬಸಿಲ್ ಎರಡು ವಿಕೆಟ್ ಕಬಳಿಸಿದ್ದರು.
ಕೇರಳ ತಂಡಕ್ಕೆ ಆರಂಭಿಕ ಆಘಾತ
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಕೇರಳ ತಂಡಕ್ಕೆ ವಿದ್ವತ್ ಕಾವೇರಪ್ಪ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ಆರಂಭಿಕ ಆಘಾತವನ್ನು ನೀಡಿದರು. ಇವರು ಎಂಡಿ ನಿಧೀಶ್ ಹಾಗೂ ವಿಶಾಖ್ ಚಂದಿರನ್ ಅವರನ್ನು ಡಕ್‌ಔಟ್ ಮಾಡಿದರು. ವೈಶಾಖ್ ವಿಜಯ್‌ಕುಮಾರ್, ಕೃಷ್ಣ ಪ್ರಸಾದ್ ಅವರನ್ನು ಔಟ್ ಮಾಡಿದರು. ಆ ಮೂಲಕ ಎರಡನೇ ದಿನದಾಟದ ಅಂತ್ಯಕ್ಕೆ ಕೇರಳ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 10 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿ ಆರಂಭಿಕ ಆಘಾತವನ್ನು ಅನುಭವಿಸಿದೆ.