ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2026ರ ಸಾಲಿನ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಾಜಿ ನಾಯಕ ಎಂಎಸ್ ಧೋನಿ ಹೊರಗುಳಿಯುವುದೇ ಸರಿ ಎಂದು ಮಾಂತ್ರಿಕ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕ್ಯಾಪ್ಟನ್ ಕೂಲ್ ಖ್ಯಾತಿಯ ಸಿಎಸ್‌ಕೆ ದಿಗ್ಗಜ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮೀನಖಂಡದ ಸೆಳೆತದ ಸಮಸ್ಯೆಗೆ ತುತ್ತಾಗಿರುವ 44 ವರ್ಷದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಐಪಿಎಲ್ 2026 ಟೂರ್ನಿಯ ಮೊದಲ 3 ಪಂದ್ಯಗಳಿಗೆ ಗೈರಾಗಿದ್ದಾರೆ. ಈ ಮೂರೂ ಪಂದ್ಯಗಳಲ್ಲಿ ಸಿಎಸ್‌ಕೆ ಸೋತು ಸುಣ್ಣವಾಗಿದ್ದು, ಎಂಎಸ್ ಧೋನಿ ತಂಡದ ಪ್ಲೇಯಿಂಗ್ 11ಗೆ ಮರಳಬೇಕು ಎಂಬುದು ಅಭಿಮಾನಿಗಳ ಕೂಗಾಗಿದೆ.
ಆದರೆ, ಆರ್ ಅಶ್ವಿನ್ ಮಾತ್ರ ಎಂಎಸ್‌ಡಿ ಆಡುವುದು ಬೇಡ ಎಂಬ ಅಚ್ಚರಿಯ ಅಭಿಪ್ರಾಯ ಹೊರಹಾಕಿದ್ದಾರೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ಆಡಿದ್ದೇ ಆದರೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಬಗ್ಗೆ ಅಶ್ವಿನ್ ಸ್ಪಷ್ಟ ಚಿತ್ರಣ ನೀಡಿದ್ದಾರೆ.
IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ
ಧೊನಿಯನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬೇಡಿ
ಸ್ಪಿನ್ ಮಾಂತ್ರಿಕ ಅಶ್ವಿನ್ ಅವರ ಪ್ರಕಾರ, ಧೋನಿಯನ್ನು ಕೇವಲ Impact Player ಆಗಿ ಬಳಸುವುದು ಸರಿಯಲ್ಲ. "ಧೋನಿ ತಂಡದಲ್ಲಿದ್ದರೆ ಅವರು ಆಡುವ 11ರ ಬಳಗದಲ್ಲಿ ಪ್ರಮುಖ ಆಟಗಾರನಾಗಿ ಇರಬೇಕು. ಅವರು ಆಡಬಯಸದೇ ಇದ್ದರೆ, ಸಂಪೂರ್ಣ ಸೀಸನ್‌ನಿಂದಲೇ ವಿಶ್ರಾಂತಿ ಪಡೆಯಬೇಕು," ಎಂದು ಅಶ್ವಿನ್ ಹೇಳಿದ್ದಾರೆ.
ತಂಡದಲ್ಲಿ ಇದ್ದರೆ, ಆಡಲೇಬೇಕು ಎಂದ ಅಶ್ವಿನ್
"ಧೋನಿ ತಂಡದಲ್ಲಿ ಇದ್ದಾರೆ ಎಂದರೆ ಪ್ಲೇಯಿಂಗ್ 11 ಆಯ್ಕೆಯ ಚರ್ಚೆ ಇಲ್ಲಿಯೇ ಮುಗಿಯಬೇಕು. ಅವರು 11ರ ಬಳಗದಲ್ಲಿ ಆಡಲೇಬೇಕು. ಕಳೆದ ಮೂರು ತಿಂಗಳಿಂದ ಪ್ರಾಕ್ಟೀಸ್ ಮಾಡುತ್ತಲೇ ಬಂದಿದ್ದಾರೆ. ಈ ಮೂಲಕ ತಮ್ಮಲ್ಲಿ ಮ್ಯಾಚ್ ಫಿಟ್ನೆಸ್ ಇದೆ ಎಂಬುದನ್ನು ಅವರು ತೋರಿಸಿದ್ದಾರೆ," ಎಂದು ಅಶ್ವಿನ್ ವಿವರಿಸಿದ್ದಾರೆ.
IPL 2026: ʻನಾನಿನ್ನೂ ಆಡಬೇಕಾಗಿತ್ತುʼ-ಐಪಿಎಲ್ ನಿವೃತ್ತಿಗೆ ಕಾರಣ ತಿಳಿಸಿದ ಆರ್ ಅಶ್ವಿನ್!
ಡಬಲ್ ರೋಲ್‌ನಲ್ಲಿ ಧೋನಿ
ಎಂಎಸ್ ಧೋನಿ ಈಗ ಟಾಪ್ 6 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇರದೇ ಇರಬಹುದು ಎಂದು ಒಪ್ಪಿಕೊಂಡ ಅಶ್ವಿನ್, ಅವರು ವಿಕೆಟ್ ಕೀಪರ್ ಆಗಿ ಮತ್ತು ತಂಡದ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಧೋನಿ ಮೈದಾನದಲ್ಲೇ ನಾಯಕತ್ವದ ತರಬೇತಿ ನೀಡಬಹುದು. ವಿಶೇಷವಾಗಿ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಅವರಿಗೆ ವಿಕೆಟ್ ಹಿಂಬದಿಯಿಂದಲೇ ಮಾರ್ಗದರ್ಶನ ನೀಡಲು ಸಾಧ್ಯ," ಎಂದು ಅಶ್ವಿನ್ ಹೇಳಿದ್ದಾರೆ.
ಧೋನಿ ವಿಕೆಟ್ ಹಿಂದೆ ನಿಂತು ಬೌಲರ್‌ಗಳನ್ನು ನಿಯಂತ್ರಿಸಿ, ಪಂದ್ಯದಲ್ಲಿ ಸಿಎಸ್‌ಕೆ ತನ್ನ ರಣತಂತ್ರಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.
IPL 2026: ʻತುಂಬಾ ನೋವಾಗುತ್ತಿದೆʼ: ಸಿಎಸ್‌ಕೆ ಹ್ಯಾಟ್ರಿಕ್ ಸೋಲಿನ ಬಗ್ಗೆ ಅಶ್ವಿನ್ ಪ್ರತಿಕ್ರಿಯೆ!
"ಹೊಸ ಬೌಲಿಂಗ್ ವಿಭಾಗಕ್ಕೆ ಧೋನಿ ಬೆಂಬಲ ನೀಡುವುದು ಬಹಳ ಮುಖ್ಯ. ಅವರು ತಂಡದ ಫೀಲ್ಡ್ ಸೆಟ್ಟಿಂಗ್ ಮತ್ತು ಗೇಮ್ ಕಂಟ್ರೋಲ್‌ನಲ್ಲಿ ಪ್ರಮುಖ ಪಾತ್ರವಹಿಸಬಹುದು" ಎಂದಿದ್ದಾರೆ.
ಈ ಸೀಸನ್‌ನಲ್ಲಿ ಬಲಿಷ್ಠ ಟಾಪ್ ಆರ್ಡರ್ ಇರುವುದರಿಂದ, ಧೋನಿ ಹೆಚ್ಚಿನ ವೇಳೆ ಅಂತಿಮ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಬಹುದು ಎಂದಿರುವ ಅಶ್ವಿನ್, ಕೆಲ ಪಂದ್ಯಗಳಲ್ಲಿ ಅವರು ಮೇಲಿನ ಕ್ರಮದಲ್ಲೂ ಬ್ಯಾಟಿಂಗ್ ಮಾಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಅಶ್ವಿನ್ ಅವರ ಅಭಿಪ್ರಾಯದ ಪ್ರಕಾರ, ಧೋನಿ ತಂಡದಲ್ಲಿದ್ದರೆ ಅವರು ಸಂಪೂರ್ಣವಾಗಿ ಆಡಬೇಕು. ಅವರ ಅನುಭವ ಮತ್ತು ನಾಯಕತ್ವ ತಂಡಕ್ಕೆ ಇನ್ನೂ ಬಹಳ ಮುಖ್ಯವಾಗಿದೆ. ಧೋನಿ ಇನ್ನೂ ಕ್ರಿಕೆಟ್‌ಗೆ ಕೊಡುಗೆ ನೀಡಬಲ್ಲರು ಎಂಬುದನ್ನು ಅವರ ಸಿದ್ಧತೆ ಮತ್ತು ಸಮರ್ಪಣೆ ಸ್ಪಷ್ಟಪಡಿಸುತ್ತದೆ. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಧೋನಿಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ ಎಂದು ಸಿಎಸ್‌ಕೆಗೆ ಅಶ್ವಿನ್ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.