ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಗೆಲ್ಲಿಸಿದ ಬಳಿಕ ಕೆಎಲ್ ರಾಹುಲ್ (KL Rahul) ವಿಶಿಷ್ಠ ಶೈಲಿಯಲ್ಲಿ ಸಂಭ್ರಮಿಸಿದ್ದರು. ಮೈದಾನದಲ್ಲಿ ತಮ್ಮ ಬ್ಯಾಟ್ ಮೂಲಕ ವೃತ್ತವನ್ನು ಎಳೆದು, ವೃತ್ತದ ಒಳಗಡೆ ಬ್ಯಾಟ್ ಅನ್ನು ಜೋರಾಗಿ ಇಟ್ಟರು. ಆ ಮೂಲಕ ಇದು ನನ್ನ ತವರು ಮೈದಾನ ಎಂದು ಹೇಳಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಮೆಗಾ ಹರಾಜಿನಲ್ಲಿ ತನ್ನನ್ನು ಖರೀದಿಸದ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಕೆಎಲ್ ರಾಹುಲ್ ತಿರುಗೇಟು ನೀಡಿದ್ದಾರೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸ್ವತಃ ಕೆಎಲ್ ರಾಹುಲ್ ಅವರೇ ತಮ್ಮ ವಿಶೇಷ ಸಂಭ್ರಮದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್, ನನ್ನ ನೆಚ್ಚಿನ ಸಿನಿಮಾ ಕಾಂತಾರ. ಈ ಸಿನಿಮಾ ಶೈಲಿಯಲ್ಲಿ ನಾನು ಸಂಭ್ರಮಿಸಿದ್ದೇನೆ. ಆ ಮೂಲಕ ಇದು ನನ್ನ ಮೈದಾನ, ಈ ಸ್ಥಳದಲ್ಲಿ ನಾನು ಬೆಳೆದಿದ್ದೇನೆ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನನಗಿಂತ ಬೇರೆ ಯಾರೂ ಚೆನ್ನಾಗಿ ಆಡಲು ಸಾಧ್ಯವಿಲ್ಲ ಎಂಬುದನ್ನು ಪ್ರೇಕ್ಷಕರಿಗೆ ನಾನು ವಿವರಿಸಲು ಈ ಶೈಲಿಯನ್ನು ಅನುಸರಿಸಿದ್ದೇನೆಂದು ಅವರು ಹೇಳಿದ್ದಾರೆ.
RCB vs DC: ಆರ್‌ಸಿಬಿಗೆ ತವರಿನಲ್ಲಿ ಸತತ ಎರಡನೇ ಸೋಲು, ಡೆಲ್ಲಿಗೆ ಗೆಲುವು ತಂದುಕೊಟ್ಟ ಕೆಎಲ್ ರಾಹುಲ್!
"ಇದು ನನ್ನ ಪಾಲಿಗೆ ಅತ್ಯಂತ ವಿಶೇಷ ಸ್ಥಳವಾಗಿದೆ. ನನ್ನ ನೆಚ್ಚಿನ ಸಿನಿಮಾವಾದ ಕಾಂತಾರ ರೀತಿ ನಾನು ಸಂಭ್ರಮಿಸಿದ್ದೇನೆ. ಈ ಮೈದಾನ ನನ್ನದು, ಈ ಟರ್ಫ್, ನಾಣು ಕ್ರಿಕೆಟ್ ಆಡಿ ಬೆಳೆದ ಮೈದಾನ ಇದಾಗಿದೆ ಎಂದು ಪ್ರೇಕ್ಷಕರಿಗೆ ಹೇಳಬೇಕಾಗಿದೆ. ಆದ್ದರಿಂದ ಕಾಂತಾರಾ ಶೈಲಿಯಲ್ಲಿ ನಾನು ವಿವಿಸಿದ್ದೇನೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಕೆಎಲ್ ರಾಹುಲ್ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಅವರು ಮೂಲತಃ ಮಂಗಳುರಿನವರು. ಅವರು ಕ್ರಿಕೆಟ್ ಆಡಿ ಬೆಳೆದಿದ್ದು ಬೆಂಗಳೂರಿನಲ್ಲಿ. ಅದರಲ್ಲಿಯೂ ಅವರು ಕೆಎಸ್‌ಸಿಎ ಲೀಗ್‌ಗಳು ಹಾಗೂ ದೇಶಿ ಕ್ರಿಕೆಟ್ ಸೇರಿದಂತೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಪಾಲಿಗೆ ಎಂ ಚಿನ್ನಸ್ವಾಮಿ ಅತ್ಯಂತ ವಿಶೇಷವಾಗಿದೆ.
"ಇದು ನನ್ನ ಗ್ರೌಂಡ್, ಇದು ನನ್ನ ತವರು. ಬೇರೆಯವರಿಗಿಂತ ಇಲ್ಲಿನ ಕಂಡೀಷನ್ಸ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು," ಎಂದು ಪೋಸ್ಟ್ ಮ್ಯಾಚ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ನನ್ನ ಶಾಟ್ಸ್ ಹೇಗೆಂದು ನನಗೆ ಗೊತ್ತಿದೆ. ನನಗೆ ಉತ್ತಮ ಆರಂಭ ಬೇಕಾಗಿತ್ತು ಹಾಗೂ ಒಮ್ಮೆ ಉತ್ತಮ ಆರಂಭ ಸಿಕ್ಕ ಬಳಿಕ ಆಕ್ರಮಣಕಾರಿಯಾಗಿ ಆಡಬಹುದು. ದೊಡ್ಡ ಸಿಕ್ಸರ್ ಹೊಡೆಯಬೇಕೆಂದು ಪ್ರಯತ್ನ ನಡೆಸಿದರೆ, ಯಾರಿಗೆ ಡಾರ್ಗೆಟ್ ಮಾಡಬೇಕೆಂದು ನನಗೆ ಗೊತ್ತಿದೆ," ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
RCB vs DC: ʻನಿಮ್ಮಿಂದ ಫಿಲ್ ಸಾಲ್ಟ್ ರನ್ ಔಟ್ʼ-ವಿರಾಟ್ ಕೊಹ್ಲಿ ವಿರುದ್ಧ ಫ್ಯಾನ್ಸ್ ಕಿಡಿ!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಮೂರು ಪಂದ್ಯಗಳನ್ನು ಆಡಿದ್ದಾರೆ. ತನ್ನ ಆರಂಭಿಕ ಪಂದ್ಯದಲ್ಲಿ 15 ರನ್ ಗಳಿಸಿದ್ದ ಕೆಎಲ್ ರಾಹುಲ್, ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 77 ರನ್ ಗಳನ್ನು ಸಿಡಿಸಿದ್ದರು. ನಂತರ ಇದೀಗ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಅವರು ಅಜೇಯ 93 ರನ್‌ಗಳನ್ನು ಸಿಡಿಸಿದ್ದಾರೆ. ಕೊನೆಯ ಎರಡೂ ಪಂದ್ಯಗಳಲ್ಲಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.