RCB vs DC: ಆರ್‌ಸಿಬಿಗೆ ತವರಿನಲ್ಲಿ ಸತತ ಎರಡನೇ ಸೋಲು, ಡೆಲ್ಲಿಗೆ ಗೆಲುವು ತಂದುಕೊಟ್ಟ ಕೆಎಲ್ ರಾಹುಲ್!
RCB vs DC match Highlights: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2025ರ ಐಪಿಎಲ್ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 163 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್, ಕೆಎಲ್ ರಾಹುಲ್ ಅರ್ಧಶತಕದ ಬಲದಿಂದ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿಗೆ 6 ವಿಕೆಟ್ ಸೋಲು.

ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಟೂರ್ನಿಯಲ್ಲಿ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲ್ಲಬೇಕೆಂಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕನಸು ಮತ್ತೊಮ್ಮ ಭಗ್ನವಾಯಿತು. ಬ್ಯಾಟಿಂಗ್ ವೈಫಲ್ಯದಿಂದಾಗಿ ಆರ್‌ಸಿಬಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ 2025ರ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು ತಂಡ ಎರಡನೇ ಸೋಲು ಒಪ್ಪಿಕೊಂಡಿತು. ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ಹಾಗೂ ಕೆಎಲ್ ರಾಹುಲ್(KL Rahul) ಅವರ ನಿರ್ಣಾಯಕ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕನೇ ಗೆಲುವನ್ನು ತನ್ನದಾಗಿಸಿಕೊಂಡಿತು.
ಆರ್‌ಸಿಬಿ ನೀಡಿದ್ದ 164 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಪವರ್‌ಪ್ಲೇನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಯಶ್ ದಯಾಳ್ ಡೆಲ್ಲಿ ತಂಡದ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಫಾಫ್ ಡು ಪ್ಲೆಸಿಸ್ ಅವರನ್ನು ಯಶ್ ದಯಾಳ್ ಔಟ್ ಮಾಡಿದ್ದರೆ, ಜೇಕ್ ಮೆಗರ್ಕ್ ಮತ್ತು ಅಭಿಷೇಕ್ ಪೊರೆಲ್ ಅವರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದ್ದರು. ಕೇವಲ 30 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್, 58 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಆರ್‌ಸಿಬಿ ಗೆಲ್ಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ತವರಿನಲ್ಲಿ ಗೆಲ್ಲುವ ಆರ್‌ಸಿಬಿ ಕನಸನ್ನು ಭಗ್ನಗೊಳಿಸಿದರು.
IPL 2025: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮರಳಿದ ಎಂಎಸ್ ಧೋನಿ! ಋತುರಾಜ್ ಗಾಯಕ್ವಾಡ್ ಔಟ್
ತವರಿನಲ್ಲಿ ಅಬ್ಬರಿಸಿದ ಕೆಎಲ್ ರಾಹುಲ್
ಐದನೇ ವಿಕೆಟ್‌ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಆದರೆ, ಅವರು ಒಮ್ಮೆ ಕಂಡೀಷನ್ಸ್‌ಗೆ ಹೊಂದಿಕೊಂಡ ಬಳಿಕ, ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಲು ಶುರು ಮಾಡಿದರು. ಅದರಲ್ಲಿಯೂ ವಿಶೇಷವಾಗಿ ಕನ್ನಡಿಗ ಕೆಎಲ್ ರಾಹುಲ್ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಸತತ ಎರಡನೇ ಅರ್ಧಶತಕವನ್ನು ಸಿಡಿಸಿದರು. ಇವರು ಆಡಿದ 53 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 93 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಟ್ರಿಸ್ಟನ್ ಸ್ಟಬ್ಸ್ ಜೊತೆ ಮುರಿಯದ ಐದನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ರಾಹುಲ್ ಜೊತೆ ಅತ್ಯುತ್ತಮ ಬ್ಯಾಟ್ ಮಾಡಿದ್ದ ಟ್ರಿಸ್ಟನ್ ಸ್ಟಬ್ಸ್ 38 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಗೆದ್ದು ಬೀಗಿತು.
𝗞𝗟assy. 𝗞𝗟inical. 𝗞𝗟utch 💥
— IndianPremierLeague (@IPL) April 10, 2025
KL Rahul wins the Player of the Match award for guiding #DC home with a stunning 9⃣3⃣* 🙌
Scorecard ▶ https://t.co/h5Vb7spAOE#TATAIPL | #RCBvDC | @DelhiCapitals | @klrahul pic.twitter.com/PFie6BHeBf
163 ರನ್ ಕಲೆ ಹಾಕಿದ್ದ ಆರ್‌ಸಿಬಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕುಲ್ದೀಪ್ ಯಾದವ್ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳ ಶಿಸ್ತುಬದ್ದ ದಾಳಿಯ ಹೊರತಾಗಿಯೂ ಫಿಲ್ ಸಾಲ್ಟ್ ಹಾಗೂ ಟಿಮ್ ಡೇವಿಡ್ ನಿರ್ಣಾಯಕ ಬ್ಯಾಟಿಂಗ್ ಸಹಾಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 163 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಡೆಲ್ಲಿಗೆ 164 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.
Unbeaten. Unstoppable. Unmatched 🫡
— IndianPremierLeague (@IPL) April 10, 2025
History for #DC as they win the first 4⃣ games on the trot for the maiden time ever in #TATAIPL history 💙
Scorecard ▶ https://t.co/h5Vb7spAOE#TATAIPL | #RCBvDC | @DelhiCapitals pic.twitter.com/wj9VIrgzVK
ಫಿಲ್ ಸಾಲ್ಟ್ ಅಬ್ಬರ
ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅದರಲ್ಲಿಯೂ ವಿಶೇಷವಾಗಿ ಫಿಲ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ಮೂಲಕ ಡೆಲ್ಲಿ ಬೌಲರ್‌ಗಳಿಗೆ ಬೆವರಿಳಿಸಿದರು. ವಿಶೇಷವಾಗಿ ಮೂರನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಸಾಲ್ಟ್ ಹಾಗೂ ಕೊಹ್ಲಿ 30 ರನ್‌ಗಳನ್ನು ಸಿಡಿಸಿದ್ದರು. ಸಾಲ್ಟ್ ಈ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸೇರಿದಂತೆ 25 ರನ್‌ಗಳನ್ನು ಸಿಡಿಸಿದ್ದರು. ಅಂತಿಮವಾಗಿ ಫಿಲ್ ಸಾಲ್ಟ್ 17 ಎಸೆತಗಳಲ್ಲಿ 37 ರನ್ ಸಿಡಿಸಿದರು. ಆ ಮೂಲಕ ಆರ್‌ಸಿಬಿ ತಂಡ ಮೂರು ಓವರ್‌ಗಳ ಅಂತ್ಯಕ್ಕೆ 53 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ನಾಲ್ಕನೇ ಓವರ್‌ನಲ್ಲಿ ಅನಗತ್ಯ ರನ್ ಕದಿಯಲು ಹೋಗಿ ರನ್‌ಔಟ್ ಆದರು.
RCB vs DC: ʻನಿಮ್ಮಿಂದ ಫಿಲ್ ಸಾಲ್ಟ್ ರನ್ ಔಟ್ʼ-ವಿರಾಟ್ ಕೊಹ್ಲಿ ವಿರುದ್ಧ ಫ್ಯಾನ್ಸ್ ಕಿಡಿ!
ಮಧ್ಯಮ ಕ್ರಮಾಂಕದ ವೈಫಲ್ಯ
ಫಿಲ್ ಸಾಲ್ಟ್ ವಿಕೆಟ್ ಒಪ್ಪಿಸಿದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣವಾಗಿ ಬದಲಾಯಿತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಒಂದು ರನ್ ಗಳಿಸಿ ಔಟ್ ಆದರು. 22 ರನ್ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ನಿರಾಶೆ ಮೂಡಿಸಿದರು. ನಂತರ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಕ್ರಮವಾಗಿ 4 ಮತ್ತು 3 ರನ್ ಗಳಿಸಿ ಔಟ್ ಆದರು. ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ರಜತ್ ಪಾಟಿದಾರ್ (25) ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡಿದರು.
RCB vs DC: '6 4 4 4nb 6 1 4'-ಮಿಚೆಲ್ ಸ್ಟಾರ್ಕ್ ಓವರ್‌ಗೆ 30 ರನ್ ಚಚ್ಚಿದ ಆರ್‌ಸಿಬಿ!
ಆರ್‌ಸಿಬಿಗೆ ಆಸರೆಯಾದ ಟಿಮ್ ಡೇವಿಡ್
ಕೆಳ ಮಧ್ಯಮ ಕ್ರಮಾಂಕದಲ್ಲಿ ಕೃಣಾಲ್ ಪಾಂಡ್ಯ ಹಾಗೂ ಟಿಮ್ ಡೇವಿಡ್ ಆರ್‌ಸಿಬಿ ತಂಡಕ್ಕೆ ಆಸರೆಯಾದರು. ಕೃಣಾಲ್ ಪಾಂಡ್ಯ 18 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಡೆತ್ ಓವರ್‌ಗಳಲ್ಲಿ ನಿರ್ಣಾಯಕ ಬ್ಯಾಟ್ ಮಾಡಿದ್ದ ಟಿಮ್ ಡೇವಿಡ್ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಬಲವಾಗಿ ದಂಡಿಸಿದ್ದರು. ಎದುರಿಸಿದ್ದ ಕೇವಲ 20 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ ಅಜೇಯ 37 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ಸಫಲರಾದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಬೌಲ್ ಮಾಡಿದ ಕುಲ್ದೀಪ್ ಯಾದವ್ ಹಾಗೂ ವಿಪ್ರಾಜ್ ನಿಗಮ್ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು. ಮುಖೇಶ್ ಕುಮಾರ್ ಹಾಗೂ ಮೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಕಿತ್ತರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಿಗೆ 163-7 (ಟಿಮ್ ಡೇವಿಡ್ 37*, ಫಿಲ್ ಸಾಲ್ಟ್ 37, ರಜತ್ ಪಾಟಿದಾರ್ 25; ಕುಲ್ದೀಪ್ ಯಾದವ್ 17ಕ್ಕೆ 2, ವಿಪ್ರಾಜ್ ನಿಗಮ್ 18ಕ್ಕೆ 2, ಮೋಹಿತ್ ಶರ್ಮಾ 10ಕ್ಕೆ 1)
ಡೆಲ್ಲಿ ಕ್ಯಾಪಿಟಲ್ಸ್: 17.5 ಓವರ್‌ಗಳಿಗೆ 1694 (ಕೆಎಲ್ ರಾಹುಲ್ 93*, ಟ್ರಿಸ್ಟನ್ ಸ್ಟಬ್ಸ್ 38*; ಭುವನೇಶ್ವರ್ ಕುಮಾರ್ 26ಕ್ಕೆ 2, ಸುಯೇಶ್ ಶರ್ಮಾ 25ಕ್ಕೆ 1)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಕೆಎಲ್ ರಾಹುಲ್