ರಾಯ್ಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನಲ್ಲಿ (IPL 2026) ವಿರಾಟ್ ಕೊಹ್ಲಿ (Virat Kohli) ಅನಿರೀಕ್ಷಿತವಾಗಿ ಕಳಪೆ ಫಾರ್ಮ್‌ಗೆ ಜಾರಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಕೊಹ್ಲಿ ಡಕ್‌ಔಟ್ ಆಗಿದ್ದರು. ಆದರೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಶೇನ್ ವಾಟ್ಸನ್ (Shane Watson), ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ಅನ್ನು ತಮ್ಮ ತಂಡ ಯಾವತ್ತೂ ಲಘುವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಯ್ಪುರದಲ್ಲಿ ಮಂಗಳವಾರ ನಡೆಯಲಿರುವ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯಕ್ಕೆ ಕೊಹ್ಲಿ ಸತತ ಎರಡು ಡಕ್‌ಔಟ್‌ಗಳೊಂದಿಗೆ ಆಗಮಿಸುತ್ತಿದ್ದಾರೆ. ಈ ಎರಡು ಇನಿಂಗ್ಸ್‌ಗಳಲ್ಲಿ ಕೇವಲ ಮೂರು ಎಸೆತಗಳನ್ನು ಮಾತ್ರ ಎದುರಿಸಿರುವ ಅವರು ರನ್ ಖಾತೆ ತೆರೆಯಲು ವಿಫಲರಾಗಿದ್ದಾರೆ. ಆದರೂ, ಆರ್‌ಸಿಬಿ ಪ್ಲೇಆಫ್ಸ್ ರೇಸ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದೆ. 14 ಅಂಕಗಳು ಮತ್ತು +1.103 ಎಂಬ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆರ್‌ಸಿಬಿ ವಿರುದ್ಧದ ಪಂದ್ಯದ ನಿಮಿತ್ತ ಮಾತನಾಡಿದ ಶೇನ್ ವಾಟ್ಸನ್,"ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವುದರಿಂದ, ಪ್ರತಿಯೊಂದು ತಂಡವೂ ಅವರ ವಿರುದ್ಧ ವಿಶೇಷ ಯೋಜನೆ ರೂಪಿಸಿರುತ್ತದೆ. ಆದರೆ ಸವಾಲೇನಂದರೆ, ಆ ಯೋಜನೆಗಳನ್ನು ಹೇಗೆ ಎದುರಿಸಬೇಕು ಎಂಬುದು ಕೊಹ್ಲಿಗೆ ಚೆನ್ನಾಗಿ ಗೊತ್ತಿದೆ,” ಎಂದು ಹೇಳಿದರು.
RCB vs KKR ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪ್ಲೇಯಿಂಗ್ XI ವಿವರ!
ಮಾಜಿ ಆಸ್ಟ್ರೇಲಿಯಾ ಆಲ್‌ರೌಂಡರ್ ಆಗಿರುವ ವಾಟ್ಸನ್, ಕೊಹ್ಲಿ ಆರಂಭದಲ್ಲೇ ತಪ್ಪು ಮಾಡಿದರೆ ಕೆಕೆಆರ್ ಅದನ್ನು ಖಂಡಿತವಾಗಿ ಬಳಸಿಕೊಳ್ಳಲು ಸಿದ್ಧವಾಗಿರುತ್ತದೆ ಎಂದೂ ಒಪ್ಪಿಕೊಂಡರು.
“ಹಿಂದಿನ ಪಂದ್ಯದಲ್ಲಿ ಮಾಡಿದಂತೆಯೇ, ಅವರು ಆರಂಭದಲ್ಲೇ ಆಕ್ರಮಣಕಾರಿ ಶಾಟ್ ಆಡಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಅದಕ್ಕೆ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ವಿರಾಟ್ ಕೊಹ್ಲಿ ಅತ್ಯಂತ ಶಿಸ್ತಿನ ಆಟಗಾರ,” ಎಂದು ವಾಟ್ಸನ್ ಸೇರಿಸಿದ್ದಾರೆ.
“ಅವರು ಅಸಾಧಾರಣ ಆಟಗಾರ. ಅತ್ಯುತ್ತಮರಾಗಬೇಕೆಂಬ ಅವರ ಹಸಿವು ಮತ್ತು ಪ್ರತಿಯೊಂದು ಎಸೆತದ ಮೇಲೂ ತೋರಿಸುವ ತೀವ್ರತೆ ಇನ್ನೂ ಅದೇ ರೀತಿ ಉರಿಯುತ್ತಿವೆ. ಆದ್ದರಿಂದ ಮೊದಲ ಎಸೆತದಿಂದಲೇ ನಾವು ಸಂಪೂರ್ಣ ಎಚ್ಚರಿಕೆಯಿಂದಿರಬೇಕು. ಏಕೆಂದರೆ ತಮ್ಮ ತಂಡಕ್ಕಾಗಿ ಪಂದ್ಯವನ್ನು ಅದ್ಭುತವಾಗಿ ಕಟ್ಟಿಕೊಡುವ ಸಾಮರ್ಥ್ಯ ಕೊಹ್ಲಿಗಿದೆ,” ಎಂದು ಶೇನ್ ವಾಟ್ಸನ್ ತಿಳಿಸಿದ್ದಾರೆ.
IPL 2026: ಕ್ಯಾಮೆರಾಗಳ ಮುಂದೆ ವಿರಾಟ್ ಕೊಹ್ಲಿ ನಟನೆ? ಸಂಜಯ್ ಮಾಂಜ್ರೇಕರ್ ಅಚ್ಚರಿ ಹೇಳಿಕೆ!
ರಾಯಲ್ ಚಾಲೆಂಜರ್ಸ್ ಬೇಂಗಳೂರು ತಂಡದ ಆರಂಭಿಕ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಅವರು ಐಪಿಎಲ್ 2026ನ್ನು ಅತ್ಯುತ್ತಮ ಲಯದಲ್ಲಿ ಆರಂಭಿಸಿ, ಟೂರ್ನಿಯ ಅತ್ಯಂತ ನಂಬಿಗಸ್ತ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಸತತ ಒಂಬತ್ತು ಇನಿಂಗ್ಸ್‌ಗಳಲ್ಲಿ ಅವರು ಪ್ರತೀ ಬಾರಿ ಎರಡಂಕಿ ಮೊತ್ತವನ್ನು ತಲುಪಿದ್ದು, ಆರ್‌ಸಿಬಿಗೆ ಹಲವು ಪ್ರಮುಖ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಪ್ರಸ್ತುತ ಅವರು 11 ಪಂದ್ಯಗಳಲ್ಲಿ 379 ರನ್‌ಗಳನ್ನು ಗಳಿಸಿದ್ದರೂ, ಅಚ್ಚರಿಯ ಸಂಗತಿಯೆಂದರೆ ಈ ಉತ್ತಮ ಆರಂಭದ ಹೊರತಾಗಿಯೂ ಅವರು ಇನ್ನೂ ಟೂರ್ನಿಯ ಟಾಪ್ 10 ರನ್ ಸ್ಕೋರರ್ಸ್ ಪಟ್ಟಿಗೆ ಪ್ರವೇಶಿಸಿಲ್ಲ.