ವಡೋದರ: ಪ್ರಸ್ತುತ ನಡೆಯುತ್ತಿರುವ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB women) ತಂಡದ ಸತತ ಗೆಲುವಿಗೆ ಡೆಲ್ಲಿ ಕ್ಯಾಪಿಟಲ್ಸ್ (Delhi capitals) ತಂಡ ಬ್ರೇಕ್ ಹಾಕಿದೆ. ಶನಿವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್‌ಸಿಬಿ ತಂಡ, ಎದುರಾಳಿ ಡೆಲ್ಲಿ ವನಿತೆಯರ ಎದುರು 7 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಈ ಋತುವಿನಲ್ಲಿ ಸ್ಮೃತಿ ಮಂಧಾನಾ ಪಡೆಗೆ ಇದು ಮೊದಲನೇ ಸೋಲಾಗಿದೆ. ಇನ್ನು ಜೆಮಿಮಾ ರೊಡ್ರಿಗಸ್ ನಾಯಕತ್ವದ ಡೆಲ್ಲಿಗೆ ಇದು ಮೂರನೇ ಗೆಲುವಾಗಿದೆ. ಆ ಮೂಲಕ ಪ್ಲೇಆಫ್ಸ್‌ಗೆ ಇನ್ನಷ್ಟು ಹತ್ತಿರವಾಗಿದೆ.
109 ರನ್‌ಗಳ ಸಾಧಾರಣ ಗುರಿ ನೀಡಿದರ ಹೊರತಾಗಿಯೂ ಆರ್‌ಸಿಬಿ, ಡೆಲ್ಲಿ ತಂಡದ ಆರಂಭಿಕ ಆಟಗಾರ್ತಿಯರನ್ನು ಬೇಗ ಔಟ್ ಮಾಡಿತ್ತು. ಆದರೆ, ಲಾರಾ ವೋಲ್ವಾರ್ಡ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 38 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದರು. ಲಾರಾ ಅವರನ್ನು ಔಟ್ ಮಾಡಲು ಆರ್‌ಸಿಬಿ ಬೌಲರ್‌ಗಳು ಸಾಕಷ್ಟು ಪ್ರಯತ್ನ ಹಾಕಿದರು. ಆದರೆ, ಸಾಧ್ಯವಾಗಲಿಲ್ಲ. ಜೆಮಿಮಾ ರೊಡ್ರಿಗಸ್ ಉಪಯುಕ್ತ 24 ರನ್‌ಗಳ ಕೊಡುಗೆಯನ್ನು ನೀಡಿದರು. ಬೌಲಿಂಗ್‌ನಲ್ಲಿ ಎರಡು ವಿಕೆಟ್ ಕಿತ್ತಿದ್ದ ಮಾರಿಜಾನ್ ಕಪ್ ಅಜೇಯ 19 ರನ್ ಗಳಿಸಿದರು. ಅಂತಿಮವಾಗಿ ಕ್ಯಾಪಿಟಲ್ಸ್ 15.4 ಓವರ್‌ಗಳಿಗೆ 3 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಗೆಲುವಿನ ದಡ ಸೇರಿತು. ಮಾರಿಜಾನ್ ಕಾಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IPL 2026: ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ, ಅಭ್ಯಾಸ ಆರಂಭಿಸಿದ ಎಂಎಸ್ ಧೋನಿ!
109 ರನ್ ಕಲೆ ಹಾಕಿದ ಆರ್‌ಸಿಬಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮಾರಿಜಾನ್ ಕಾಪ್ ಹಾಗೂ ಮಿನ್ನು ಮಣಿ ಅವರ ಬೌಲಿಂಗ್ ದಾಳಿಗೆ ನಲುಗಿದ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 109 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರಿಗೆ 110 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು.
ಸ್ಮೃತಿ ಮಂಧಾನಾ 38 ರನ್
ಕಳೆದ ಐದು ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ್ದ ಆರ್‌ಸಿಬಿ ವನಿತೆಯರು, ತಮ್ಮ ಆರನೇ ಪಂದ್ಯದಲ್ಲಿ ಪಿಚ್‌ಗೆ ತಕ್ಕಂತೆ ಬ್ಯಾಟ್ ಮಾಡುವಲ್ಲಿ ವಿಫಲವಾಯಿತು. ನಾಯಕಿ ಸ್ಮೃತಿ ಮಂಧಾನ 38 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ರಾಧಾ ಯಾದವ್ 18 ರನ್ ಹಾಗೂ ಜಾರ್ಜಿಯಾ ವಾಲ್ 11 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಇನ್ನುಳಿದವರು ಕನಿಷ್ಠ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕದೆ ವಿಕೆಟ್ ಒಪ್ಪಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಮಾರಿನಾನ್ ಕಾಪ್ 4 ಓವರ್‌ಗಳಿಗೆ 17 ರನ್ ನೀಡಿ ಎರಡು ವಿಕೆಟ್ ಕಿತ್ತರು. ಇವರು ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವಾಲ್ ಅವರನ್ನು ಔಟ್ ಮಾಡಿದರು. ಮಿನ್ನು ಮಣಿ, ಸ್ಮೃತಿ ಮಂಧಾನಾ ಹಾಗೂ ರಿಚಾ ಘೋಷ್ ಅವರನ್ನು ಔಟ್ ಮಾಡಿದರು. ನಂದಿನಿ ಶರ್ಮಾ ಮೂರು ವಿಕೆಟ್ ಕಿತ್ತರು.