ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs SRH: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

RCB vs SRH Match Toss: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ದುಕೊಂಡಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವಣ ಐಪಿಎಲ್‌ ಪಂದ್ಯ.

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು (RCB vs SRH) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ (Rajat Patidar) ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ ಹಾಗೂ ಎದುರಾಳಿ ಎಸ್‌ಆರ್‌ಎಚ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ಟಾಸ್‌ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದಾರ್‌, ತಾವು ಮೊದಲು ಬೌಲ್‌ ಮಾಡುವುದಾಗಿ ಹೇಳಿದರು. ಕಳೆದ ವರ್ಷದ ಗೆಲುವಿನಿಂದಾಗಿ ಈ ಬಾರಿ ಸಕಾರಾತ್ಮಕವಾಗಿ ಆಡುತ್ತೇವೆ. 2026ರಲ್ಲಿಯೂ ಚಾಂಪಿಯನ್‌ ಆಗಲು ಪ್ರಯತ್ನ ನಡೆಸುತ್ತೇವೆ. ಈ ಬಾರಿ ಇಬ್ಬರು ಹೊಸ ಮುಖಗಳಿಗೆ ಅವಕಾಶವನ್ನು ನೀಡಲಾಗಿದೆ. ಜೇಕಬ್‌ ಡಫಿ ಹಾಗೂ ಅಭಿನಂದನ್‌ ಸಿಂಗ್‌ಗೆ ಅವಕಾಶವನ್ನು ನೀಡಲಾಗಿದೆ ಎಂದು ಪಾಟಿದಾರ್‌ ತಿಳಿಸಿದ್ದಾರೆ. ಜಾಶ್‌ ಹೇಝಲ್‌ವುಡ್‌ ಬದಲು ಜೇಕಬ್‌ ಡಫಿ ಆಡಿದರೆ, ಯಶ್‌ ದಯಾಳ್‌ ಸ್ಥಾನದಲ್ಲಿ ಅಭಿನಂದನ್‌ ಸಿಂಗ್‌ ಆಡುತ್ತಿದ್ದಾರೆ.

IPL 2026: ಆರ್‌ಸಿಬಿ ಇನ್‌, ಸಿಎಸ್‌ಕೆ ಔಟ್! ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ

ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಇಶಾನ್‌ ಕಿಶನ್‌ ಮಾತನಾಡಿ, ಇದು ಮೊದಲನೇ ಪಂದ್ಯ ಆಗಿರುವ ಕಾರಣ ಖುಷಿಯಾಗುತ್ತಿದೆ. ಟಾಸ್‌ ಗೆದ್ದಿದ್ದರೆ ನಾವು ಕೂಡ ಮೊದಲು ಬೌಲಿಂಗ್‌ ಆಯ್ಕೆ ಮಾಡುತ್ತಿದ್ದೆವೆ. ದಿನದಾಂತ್ಯಕ್ಕೆ ಮೊದಲು ಬ್ಯಾಟಿಂಗ್‌ ಅಥವಾ ಮೊದಲು ಬೌಲಿಂಗ್‌ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ, ಇಲ್ಲಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದು ಮುಖ್ಯ ಎಂದು ಹೇಳಿದ್ದಾರೆ.



ಎರಡನೇ ಕಪ್‌ ಮೇಲೆ ಆರ್‌ಸಿಬಿ ಕಣ್ಣು

ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದುಕೊಂಡಿತ್ತು. ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆಲುವು ಪಡೆಯುವ ಮೂಲಕ ಬೆಂಗಳೂರು ತಂಡ, 17 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಎರಡನೇ ಬಾರಿಯೂ ಟ್ರೋಫಿಯನ್ನು ಗೆಲ್ಲಲು ಆರ್‌ಸಿಬಿ ಎದುರು ನೋಡುತ್ತಿದೆ. ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕಳೆದ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗಿತ್ತು. ಆದರೆ, ಈ ಬಾರಿ ಕಮ್‌ಬ್ಯಾಕ್‌ ಮಾಡಿ ಟೂರ್ನಿಯಲ್ಲಿ ಶುಭಾರಂಭ ಮಾಡಲು ಬಯಸುತ್ತಿದೆ.



ಇತ್ತಂಡಗಳ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜಾಕೋಬ್ ಡಫಿ, ಸುಯಾಶ್ ಶರ್ಮಾ

ಸನ್‌ರೈಸರ್ಸ್‌ ಹೈದರಾಬಾದ್‌: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ, ವಿಕೆಟ್‌ ಕೀಪರ್‌), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಇಶಾನ್ ಮಾಲಿಂಗ