ನವದೆಹಲಿ: ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ಹುದ್ದೆಯಿಂದ ಹೊರಬಂದ 24 ಗಂಟೆಗಳ ಒಳಗೆ ರಯಾನ್ ಟೆನ್ ಡಶ್ಕಾಟೆ (Ryan ten Doeschate) ತಮ್ಮ ಹಳೆಯ ತಂಡವಾದ ನೈಟ್ ರೈಡರ್ಸ್ ಕುಟುಂಬವನ್ನು ಸೇರಿದ್ದಾರೆ. ಜುಲೈ 29ರಂದು ನೈಟ್ ರೈಡರ್ಸ್ ಸ್ಪೋರ್ಟ್ಸ್ ಡೆಶ್ಕಾಟೆ ಅವರನ್ನು ಕ್ರಿಕೆಟ್ ತಾಂತ್ರಿಕ ಮುಖ್ಯಸ್ಥರಾಗಿ (Head of Cricket Strategy)ನೇಮಕ ಮಾಡಿರುವುದಾಗಿ ಘೋಷಿಸಿದೆ. ಈ ಹೊಸ ಹುದ್ದೆಯಲ್ಲಿ ಅವರು ನೈಟ್ ರೈಡರ್ಸ್ (Knight Riders) ಫ್ರಾಂಚೈಸಿಯ ಜಾಗತಿಕ ಕ್ರಿಕೆಟ್ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಲಿದ್ದು, ಜೊತೆಗೆ ವಿದೇಶದಲ್ಲಿರುವ ಫ್ರಾಂಚೈಸಿಯ ಮೂರು ತಂಡಗಳೊಂದಿಗೆ ಮೈದಾನದಲ್ಲಿಯೂ ಕೋಚಿಂಗ್ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
ಭಾರತ ತಂಡದ ಸಹಾಯಕ ಕೋಚ್ ಹುದ್ದೆಗೆ 2027ರವರೆಗೆ ಒಪ್ಪಂದ ವಿಸ್ತರಿಸಲು ಬಿಸಿಸಿಐ ಅವಕಾಶ ನೀಡಿದ್ದರೂ, ಟೆನ್ ಡಶ್ಕಾಟೆ ಆ ಪ್ರಸ್ತಾವವನ್ನು ತಿರಸ್ಕರಿಸಿ ರಾಜೀನಾಮೆ ನೀಡಿದ್ದರು ಎಂಬ ವರದಿಯ ಮರುದಿನವೇ ನೈಟ್ ರೈಡರ್ಸ್‌ನ ಈ ನೇಮಕಾತಿ ಪ್ರಕಟವಾಗಿದೆ.
"ಟೆಂಡೋ (ಡಶ್ಕಾಟೆ) ಅವರನ್ನು ಮತ್ತೆ ನೈಟ್ ರೈಡರ್ಸ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ತಂಡದ ಕಾರ್ಯತತ್ವದ ಬಗ್ಗೆ ಅವರಿಗೆ ಆಳವಾದ ಅರಿವಿದೆ. ಜೊತೆಗೆ ಫ್ರಾಂಚೈಸಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಂದಿರುವ ಅವರ ಅನುಭವ, ಈ ಹೊಸ ಜವಾಬ್ದಾರಿಗೆ ಅವರನ್ನು ಅತ್ಯಂತ ಸೂಕ್ತ ವ್ಯಕ್ತಿಯನ್ನಾಗಿಸಿದೆ. ನೈಟ್ ರೈಡರ್ಸ್ ವ್ಯವಸ್ಥೆಯ ಮುಂದಿನ ಬೆಳವಣಿಗೆಯ ಹಂತವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ," ಎಂದು ನೈಟ್ ರೈಡರ್ಸ್ ಸ್ಪೋರ್ಟ್ಸ್‌ನ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡ ಸಹಾಯಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಯಾನ್ ಡಿ ಡಶ್ಕಾಟೆ!
ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ಪುರುಷರ ತಂಡದೊಂದಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದ ರಿಯಾನ್ ಟೆನ್ ಡಶ್ಕಾಟೆ, ವಿವಿಧ ಫ್ರಾಂಚೈಸಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಹಾಗೂ ದೀರ್ಘಾವಧಿಯ ಕ್ರಿಕೆಟ್ ವ್ಯವಸ್ಥೆಯನ್ನು ನಿರ್ಮಿಸುವ ಜವಾಬ್ದಾರಿಯೇ ಈ ಹೊಸ ಹುದ್ದೆಯನ್ನು ಸ್ವೀಕರಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ರಯಾನ್ ಟೆನ್ ಡಶ್ಕಾಟೆ ಪ್ರತಿಕ್ರಿಯೆ
"ಈ ಹೊಸ ಜವಾಬ್ದಾರಿಯಲ್ಲಿ ಮತ್ತೆ ನೈಟ್ ರೈಡರ್ಸ್ ಕುಟುಂಬವನ್ನು ಸೇರಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಜಾಗತಿಕ ಫ್ರಾಂಚೈಸಿಗಳ ಕೋಚಿಂಗ್ ಮತ್ತು ಅನಾಲಿಟಿಕ್ಸ್ ತಂಡಗಳೊಂದಿಗೆ ಕೆಲಸ ಮಾಡುವ ಮೂಲಕ ಪ್ರತಿಭೆ ಹುಡುಕುವ (ಸ್ಕೌಟಿಂಗ್) ಹಾಗೂ ಆಟಗಾರರ ಅಭಿವೃದ್ಧಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು, ಜೊತೆಗೆ ದೀರ್ಘಾವಧಿಯ ಕ್ರಿಕೆಟ್ ತಂತ್ರವನ್ನು ರೂಪಿಸುವುದು ನನಗೆ ಸಿಕ್ಕಿರುವ ವಿಶಿಷ್ಟ ಅವಕಾಶವಾಗಿದೆ," ಎಂದು ರಿಯಾನ್ ಟೆನ್ ಹೇಳಿದ್ದಾರೆ.
ಶುಭದೀಪ್ ಘೋಷ್ ಭಾರತ ಕ್ರಿಕೆಟ್ ತಂಡಕ್ಕೆ ನೂತನ ಫೀಲ್ಡಿಂಗ್ ಕೋಚ್?
ಕೆಕೆಆರ್‌ಗೆ ಮರಳಿದ ಟೆನ್ ಡಶ್ಕಾಟೆ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದೊಂದಿಗಿನ ಅವರ ನಂಟು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮುಂದುವರಿದಿದೆ. 2011ರಲ್ಲಿ ಆಟಗಾರನಾಗಿ ಕೆಕೆಆರ್ ಸೇರಿದ್ದ ಡಶ್ಕಾಟೆ, 2012 ಮತ್ತು 2014ರ ಐಪಿಎಲ್ ಪ್ರಶಸ್ತಿ ಗೆದ್ದ ತಂಡಗಳಲ್ಲಿ ಪ್ರಮುಖ ಸದಸ್ಯರಾಗಿದ್ದರು.
ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ 2022ರಲ್ಲಿ ಅವರು ಕೆಕೆಆರ್ ಕೋಚಿಂಗ್ ಬಳಗವನ್ನು ಸೇರಿಕೊಂಡಿದ್ದರು. 2024ರಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ತನ್ನ ಮೂರನೇ ಐಪಿಎಲ್ ಪ್ರಶಸ್ತಿ ಗೆದ್ದಾಗ, ಟೆನ್ ಡಶ್ಕಾಟೆ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯರಾಗಿದ್ದರು. ಇದೀಗ ಅವರ ಹೊಸ ಜವಾಬ್ದಾರಿಗಳು ಇನ್ನಷ್ಟು ವಿಸ್ತಾರಗೊಂಡಿವೆ.