ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ಕ್ರಿಕೆಟ್‌ ತಂಡ ಸಹಾಯಕ ಕೋಚ್‌ ಹುದ್ದೆಯಿಂದ ಕೆಳಗಿಳಿದ ರಯಾನ್‌ ಡಿ ಡಶ್ಕಾಟೆ!

ಭಾರತ ಕ್ರಿಕೆಟ್‌ ತಂಡದ ಸಹಾಯಕ ಕೋಚ್‌ ಹುದ್ದೆಗೆ ರಯಾನ್‌ ಟೆನ್‌ ಡಶ್ಕಾಟೆ ಅವರು ರಾಜೀನಾಮೆ ನೀಡಿದ್ದಾರೆ. ಎರಡು ವರ್ಷಗಳ ಕಾಲ ಭಾರತ ತಂಡದಲ್ಲಿ ಕಾರ್ಯನಿರ್ವಹಿಸಿದ ಬಳಿಕ ಅವರು ಇದೀಗ ದೂರ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅವರು ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ.

ಭಾರತ ತಂಡದ ಕೋಚ್‌ ಹುದ್ದೆಗೆ ರಯಾನ್‌ ಟೆನ್‌ ಡಶ್ಕಾಟೆ ಗುಡ್‌ ಬೈ!

ಭಾರತ ತಂಡದ ಸಹಾಯಕ ಕೋಚ್‌ ಹುದ್ದೆಯಿಂದ ಕೆಳಗಿಳಿದ ರಯಾನ್‌ ಟೆನ್‌ ಡಶ್ಕಾಟೆ. -

Profile
Ramesh Kote Jul 28, 2026 7:44 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ (Indian Cricket team) ಸಹಾಯಕ ಕೋಚ್‌ ಹುದ್ದೆಯಿಂದ ರಯಾನ್‌ ಟೆನ್‌ ಡಶ್ಕಾಟೆ (Ryan Ten Doeschate) ಅವರು ಕೆಳಗೆ ಇಳಿದಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾ ಜೊತೆಗಿನ ಎರಡು ವರ್ಷಗಳ ಪಯಣವನ್ನು ಅಂತ್ಯಗೊಳಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ವೈಟ್‌ಬಾಲ್‌ ಸರಣಿಗಳು ಡಶ್ಕಾಟೆ ಅವರ ಪಾಲಿಗೆ ಭಾರತ ತಂಡದ ಪರ ಕೊನೆಯ ಸೇವೆಯಾಗಿತ್ತು. ಅಂದ ಹಾಗೆ 2027ರ ವರೆಗೂ ಅವರ ಅವಧಿಯಲ್ಲಿ ವಿಸ್ತರಿಸಲು ಬಿಸಿಸಿಐ ಅವಕಾಶವನ್ನು ಕಲ್ಪಿಸಿದ್ದರೂ ಅದರನ್ನು ಅವರು ನಿರಾಕರಿಸಿದ್ದಾರೆ. ಆ ಮೂಲಕ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಕೋಚಿಂಗ್‌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ.

ಬಿಸಿಸಿಐ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಆಸಕ್ತಿ ತೋರಿದ್ದರೂ, ನೆದರ್ಲೆಂಡ್ಸ್‌ನ ಮಾಜಿ ಆಲ್‌ರೌಂಡರ್ ರಿಯಾನ್ ಟೆನ್ ಡಶ್ಕಾಟೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಆ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಚಿಕ್ಕ ಕುಟುಂಬ ಹೊಂದಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿರಂತರ ಪ್ರವಾಸ ಮತ್ತು ಒತ್ತಡದ ವೇಳಾಪಟ್ಟಿಯಿಂದ ದೂರ ಸರಿದು, ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ನಿರ್ಧಾರ ಕೈಗೊಂಡಿದ್ದಾರೆ.

ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಯನ್ನು ಡಾನ್‌ ಬ್ರಾಡ್ಮನ್‌ಗೆ ಹೋಲಿಸಿದ ರಾಬಿನ್‌ ಉತ್ತಪ್ಪ!

ಫೀಲ್ಡಿಂಗ್‌ ಕೋಚ್‌ ಅವಧಿ ಅಂತ್ಯ

ಇದರೊಂದಿಗೆ ಭಾರತ ತಂಡದ ಕೋಚಿಂಗ್ ಸಿಬ್ಬಂದಿಯಲ್ಲೂ ಮತ್ತೊಂದು ಬದಲಾವಣೆ ನಡೆದಿದೆ. ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅವರು ರಾಷ್ಟ್ರೀಯ ತಂಡದಿಂದ ನಿರ್ಗಮಿಸಿದ್ದಾರೆ. ಪರಿಣಾಮವಾಗಿ, ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದೊಂದಿಗೆ ಅವರು ಪ್ರವಾಸ ಕೈಗೊಳ್ಳುವುದಿಲ್ಲ.

ಆಗಸ್ಟ್ 15 ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ರಿಯಾನ್ ಟೆನ್ ಡಶ್ಕಾಟೆ ಅವರ ನಿರ್ಗಮನವಾಗಿದೆ. ಈ ಪ್ರವಾಸಕ್ಕೂ ಮುನ್ನವೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಹಾಯಕ ಕೋಚಿಂಗ್ ಸಿಬ್ಬಂದಿಯನ್ನು ಬಿಸಿಸಿಐ ಅಂತಿಮಗೊಳಿಸುವ ನಿರೀಕ್ಷೆಯಿದೆ.

ʻಒಂದು ವರ್ಷ ಪಾಲೋ ಮಾಡಿದೆʼ: ವಿರಾಟ್‌ ಕೊಹ್ಲಿ ಲೈಫ್‌ ಸ್ಟೈಲ್‌ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿಕೆ!

ಭಾರತ ತಂಡ 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಇದಾದ ಬಳಿಕ ನಂತರ 2024ರ ಜುಲೈನಲ್ಲಿ ಟೆನ್ ಡಶ್ಕಾಟೆ ಅವರು ಭಾರತ ತಂಡದ ಕೋಚಿಂಗ್ ಬಳಗವನ್ನು ಸೇರಿದ್ದರು.

ಈ ಹಿಂದೆ ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೆ ಗೌತಮ್ ಗಂಭೀರ್ ಅವರ ಜೊತೆಗೆ ಯಶಸ್ವಿಯಾಗಿ ಕೆಲಸ ಮಾಡಿದ್ದ ಡಶ್ಕಾಟೆ ಅವರನ್ನು ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಅವರೊಂದಿಗೆ ರಾಷ್ಟ್ರೀಯ ತಂಡದ ಕೋಚಿಂಗ್ ಸಿಬ್ಬಂದಿಗೆ ಸೇರಿಸಲಾಗಿತ್ತು.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ವಸೀಮ್‌ ಜಾಫರ್‌!

ರಯಾನ್‌ ಟೆನ್‌ ಡಶ್ಕಾಟೆ ಅವರ ಮುಂದಿನ ನಡೆ ಏನು?

45ರ ಪ್ರಾಯದ ರಯಾನ್ ಟೆನ್ ಡಶ್ಕಾಟೆ ಮತ್ತೆ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಆಟಗಾರ ಹಾಗೂ ಕೋಚ್ ಆಗಿ ಕೆಕೆಆರ್‌ನೊಂದಿಗೆ ಅವರು ದೀರ್ಘಕಾಲದ ನಂಟು ಹೊಂದಿದ್ದಾರೆ. 2012 ಮತ್ತು 2014ರಲ್ಲಿ ಕೆಕೆಆರ್ ಪ್ರಶಸ್ತಿ ಗೆದ್ದ ತಂಡದ ಸದಸ್ಯರಾಗಿದ್ದ ಟೆನ್ ಡಶ್ಕಾಟೆ, 2022ರಲ್ಲಿ ಫೀಲ್ಡಿಂಗ್ ಕೋಚ್ ಆಗಿ ಮತ್ತೆ ಫ್ರಾಂಚೈಸಿಗೆ ಮರಳಿದ್ದರು. 2024ರಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆದ ಬಳಿಕ ಅವರು ರಾಷ್ಟ್ರೀಯ ತಂಡದ ಕೋಚಿಂಗ್ ಸಿಬ್ಬಂದಿಯನ್ನು ಸೇರಿದ್ದರು.

ಮತ್ತೊಮ್ಮೆ ಕೆಕೆಆರ್‌ಗೆ ಮರಳಿದರೆ, ಅಲ್ಲಿ ಅಭಿಷೇಕ್ ನಾಯರ್ ಅವರೊಂದಿಗೆ ಸೇರಲಿದ್ದಾರೆ. ಈ ಇಬ್ಬರೂ ಈ ಹಿಂದೆ ಕೆಕೆಆರ್ ಹಾಗೂ ಭಾರತ ತಂಡದ ಕೋಚಿಂಗ್ ಬಳಗದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ, ಭಾರತ ತಂಡದ ಕೋಚಿಂಗ್ ಸಿಬ್ಬಂದಿಯನ್ನು ಬಿಸಿಸಿಐ ಅಂತಿಮಗೊಳಿಸುವ ನಿರೀಕ್ಷೆಯಿದೆ.