ಚಂಡೀಗಢ: ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ತಂಡಗಳ ನಡುವಣ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಂದು ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ದೇವದತ್ ಪಡಿಕ್ಕಲ್ (Devdutt Padikkal) ಬದಲು ಸಾಯಿ ಸುದರ್ಶನ್ ಆಡಲಿದ್ದಾರೆಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಸುಳಿವು ನೀಡಿದ್ದಾರೆ. ತಂಡದ ಮೂರನೇ ಕ್ರಮಾಂಕಕ್ಕೆ ಉತ್ತಮ ಪ್ರದರ್ಶನವನ್ನು ನೀಡಲು ಸಾಯಿ ಸುದರ್ಶನ್‌ಗೆ ನಾವು ಇನ್ನೂ ಉತ್ತಮ ಅವಕಾಶಗಳನ್ನು ನೀಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡವು ಸಾಯಿ ಸುದರ್ಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಬಳಸಲು ಆರಂಭಿಸಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ಅವರು ನಿರೀಕ್ಷಿತ ಮಟ್ಟದ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಆರು ಪಂದ್ಯಗಳಲ್ಲಿ ಅವರು 27.45ರ ಸರಾಸರಿಯಲ್ಲಿ 302 ರನ್‌ಗಳನ್ನು ಗಳಿಸಿದ್ದಾರೆ. ಅಂದಿನಿಂದ ಈ ಸ್ಥಾನಕ್ಕಾಗಿ ಭಾರತ ತಂಡವು ಸಾಕಷ್ಟು ಪ್ರಯೋಗಗಳನ್ನು ನಡೆಸಿತ್ತು. ಕರುಣ್ ನಾಯರ್ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನೂ ಆ ಪಾತ್ರದಲ್ಲಿ ಪ್ರಯೋಗ ನಡೆಸಿತ್ತು.
IND vs AFG: ರಾಹುಲ್-ಜೈಸ್ವಾಲ್ ಓಪನರ್ಸ್, ಏಕೈಕ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ. ಕೆಲವೇ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಅವರ ಸಾಮರ್ಥ್ಯವನ್ನು ನಿರ್ಣಯಿಸುವುದು ಸರಿಯಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟರು.
“ಸಾಯಿ ಸುದರ್ಶನ್ ಅವರಿಗೆ ಇನ್ನೂ ನ್ಯಾಯಯುತ ಅವಕಾಶ ಸಿಕ್ಕಿಲ್ಲ. ಅವರು ಹೆಚ್ಚಾಗಿ ಇಂಗ್ಲೆಂಡ್‌ನಲ್ಲೇ ಆಡಿದ್ದಾರೆ. ಅವರಿಗೆ ಸಮರ್ಪಕ ಅವಕಾಶ ನೀಡಬೇಕೆಂದು ನಾನು ನಂಬಿದ್ದೇನೆ,” ಎಂದು ಗಂಭೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾವು ಕಣಕ್ಕಿಳಿಸಬಹುದಾದದ್ದು ಕೇವಲ 11 ಆಟಗಾರರನ್ನು ಮಾತ್ರ. ಸಾಯಿ ಸುದರ್ಶನ್ ಕೆಟ್ಟ ಫಾರ್ಮ್‌ನಲ್ಲಿಲ್ಲ. ಅವರು ಐಪಿಎಲ್‌ನಲ್ಲಿ 700 ರನ್‌ಗಳನ್ನು ಗಳಿಸಿದ್ದಾರೆ. ಕೇವಲ ನಾಲ್ಕು ಅಥವಾ ಐದು ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಸಾಯಿ ಅವರನ್ನು ಮೌಲ್ಯಮಾಪನ ಮಾಡಿದರೆ, ಭವಿಷ್ಯಕ್ಕಾಗಿ ಯಾವುದೇ ಸ್ಥಿರ ತಂಡವನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ದೇವದತ್ ಪಡಿಕ್ಕಲ್ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸುತ್ತಿದ್ದು, ಆರು ಪಂದ್ಯಗಳಲ್ಲಿ 60.33ರ ಸರಾಸರಿಯಲ್ಲಿ 543 ರನ್‌ಗಳನ್ನು ಕಲೆಹಾಕಿದ್ದಾರೆ.
IND vs AFG: ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ರಿಷಭ್ ಪಂತ್!
ಶ್ರೀಲಂಕಾ ಪ್ರವಾಸಕ್ಕೆ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಭಾರತ
ತಂಡದಲ್ಲಿನ ಮತ್ತೊಂದು ಸ್ಥಾನಕ್ಕಾಗಿ ಮಾಣವ್ ಸುತಾರ್ ಮತ್ತು ಹರ್ಷ್ ದುಬೇ ನಡುವೆ ಪೈಪೋಟಿ ಏರ್ಪಟ್ಟಿದೆ. ಮೂರನೇ ಸ್ಪಿನ್ನರ್ ಆಯ್ಕೆಗೆ ಈ ಇಬ್ಬರಲ್ಲೊಬ್ಬರನ್ನು ಪರಿಗಣಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಗೌತಮ್ ಗಂಭೀರ್, ಈ ವರ್ಷದ ಆಗಸ್ಟ್‌ನಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸಕ್ಕೆ ನಾಲ್ವರು ಸ್ಪಿನ್ನರ್‌ಗಳನ್ನು ಸಜ್ಜುಗೊಳಿಸುವುದು ಟೀಮ್ ಮ್ಯಾನೇಜ್‌ಮೆಂಟ್‌ನ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
“ಮನವ್ ಮತ್ತು ಹರ್ಷ್ ಕೆಲ ಮಟ್ಟಿಗೆ ಒಂದೇ ರೀತಿಯ ಬೌಲರ್‌ಗಳಾದರೂ, ಚೆಂಡು ಬಿಡುಗಡೆ ಮಾಡುವ ಶೈಲಿಯಲ್ಲಿ (ರಿಲೀಸ್ ಪಾಯಿಂಟ್) ವ್ಯತ್ಯಾಸವಿದೆ. ಈ ಪಂದ್ಯವು ನಮ್ಮ ನಾಲ್ಕನೇ ಸ್ಪಿನ್ನರ್ ಯಾರು ಎಂಬುದನ್ನು ನಿರ್ಧರಿಸಲು ಉತ್ತಮ ಅವಕಾಶ ಒದಗಿಸುತ್ತದೆ. ಏಕೆಂದರೆ ಶ್ರೀಲಂಕಾ ಪ್ರವಾಸಕ್ಕೆ ನಾವು ನಾಲ್ವರು ಸ್ಪಿನ್ನರ್‌ಗಳನ್ನು ಕರೆದೊಯ್ಯಲಿದ್ದೇವೆ,” ಎಂದು ಅವರು ಹೇಳಿದ್ದಾರೆ.
“ನಾವು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವಾಗ ವಿಭಿನ್ನ ರೀತಿಯಲ್ಲಿ ಸಿದ್ಧತೆ ನಡೆಸಬೇಕಾಗುತ್ತದೆ. ಆದ್ದರಿಂದ, ಟೆಸ್ಟ್ ಕ್ರಿಕೆಟ್ ಆಡುವ ಕೆಲವು ನಿಯಮಿತ ಏಕದಿನ (ODI) ಆಟಗಾರರಿಗೆ ವಿಶ್ರಾಂತಿ ನೀಡಲಿದ್ದೇವೆ. ಟೆಸ್ಟ್ ಕ್ರಿಕೆಟ್‌ಗೆ ಇನ್ನಷ್ಟು ಉತ್ತಮವಾಗಿ ಸಿದ್ಧರಾಗಬೇಕೆಂಬುದು ನಮ್ಮ ಅರಿವಿನಲ್ಲಿದೆ,” ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಇದೇ ವೇಳೆ, ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಂದು ಆರಂಭವಾಗಲಿದೆ.