ಕೊಲಂಬೊ, ಮಾ.1: ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಬೆಳವಣಿಗೆಯೊಂದರಲ್ಲಿ, 2026 ರ ಟಿ20 ವಿಶ್ವಕಪ್(T20 World Cup 2026)ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿನ ನಂತರ ತಂಡದ ಮುಖ್ಯ ಕೋಚ್ ಸನತ್ ಜಯಸೂರ್ಯ(Sanath Jayasuriya) ಅವರು ತಮ್ಮ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಫೆಬ್ರವರಿ 28 ರಂದು ಪಲ್ಲೆಕೆಲ್ಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾದವು ಮತ್ತು ಪಾಕಿಸ್ತಾನ ಐದು ರನ್‌ಗಳ ಜಯ ಸಾಧಿಸಿತ್ತು.
ಪಂದ್ಯದ ಬಳಿಕ ಮಾತನಾಡಿದ ಜಯಸೂರ್ಯ ಅವರು ತಮ್ಮ ಪಾತ್ರದಿಂದ ಹಿಂದೆ ಸರಿಯುವ ಸುಳಿವು ನೀಡಿದರು. ಆದರೆ ತಕ್ಷಣವೇ ಅಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಶ್ರೀಲಂಕಾ ಕ್ರಿಕೆಟ್ ಸೂಕ್ತ ಉತ್ತರಾಧಿಕಾರಿಯನ್ನು ಕಂಡುಕೊಂಡರೆ ತಾವು ಹುದ್ದೆಯಿಂದ ಕೆಳಗಿಳಿಯಲು ಸಿದ್ಧರಿರುವುದಾಗಿ ಸೂಚಿಸಿದ್ದಾರೆ.
"ಈ ಜವಾಬ್ದಾರಿಯನ್ನು ಬೇರೆಯವರಿಗೆ ನೀಡುವ ಸಮಯ ಬಂದಿದೆ ಎಂದು ನಾನು ಭಾವಿಸಿದೆ. ಅದಕ್ಕಾಗಿಯೇ ಸುಮಾರು ಎರಡು ತಿಂಗಳ ಹಿಂದೆ ಇಂಗ್ಲೆಂಡ್ ಸರಣಿಯ ಸಮಯದಲ್ಲಿ ನಾನು ಈ ಕೆಲಸದಲ್ಲಿ ಹೆಚ್ಚು ಕಾಲ ಉಳಿಯುವ ಭರವಸೆ ಇಲ್ಲ ಎಂದು ಹೇಳಿದ್ದೆ. ಆ ಹೊತ್ತಿಗೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೆ. ವಿಶ್ವಕಪ್‌ನಲ್ಲಿ ಉತ್ತಮ ರೀತಿಯಲ್ಲಿ ನಾನು ಕೋಚ್ ಹುದ್ದೆಯಿಂದ ಹೊರಹೋಗಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೆ. ನಾನು ಬಯಸಿದಷ್ಟು ಚೆನ್ನಾಗಿ ಅದನ್ನು ಮಾಡಲು ಸಾಧ್ಯವಾಗಲಿಲ್ಲ, ಮತ್ತು ಅದರ ಬಗ್ಗೆ ನನಗೆ ಬೇಸರವಾಗಿದೆ" ಎಂದು ಸನತ್ ಜಯಸೂರ್ಯ ಹೇಳಿರುವುದಾಗಿ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ.
"ನನ್ನ ಒಪ್ಪಂದವು ಜೂನ್ ವರೆಗೆ ಇರುತ್ತದೆ. ನಾನು ಇನ್ನೂ ಲಂಕಾ ಕ್ರಿಕೆಟ್ ಮಂಡಳಿಗೆ ಅಧಿಕೃತವಾಗಿ ಯಾವುದೇ ಸುದ್ದಿಯನ್ನು ನೀಡಿಲ್ಲ. ನಾನು ಇದನ್ನು ಹೇಳುತ್ತೇನೆಂದು ಅವರಿಗೆ ತಿಳಿದಿಲ್ಲ. ನಾನು ಅವರೊಂದಿಗೆ ಹೋಗಿ ಚರ್ಚಿಸಬೇಕಾಗಿದೆ”ಎಂದು ಅವರು ಹೇಳಿದರು.
ಲಂಕಾ ಮಣಿಸಿದರೂ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಪಾಕ್; ಸೆಮಿಗೆ ಲಗ್ಗೆಯಿಟ್ಟ ಕಿವೀಸ್
"ಕಳೆದ ಒಂದೂವರೆ ವರ್ಷಗಳಲ್ಲಿ ನಾನು ತಂಡವನ್ನು ಉತ್ತಮ ಸ್ಥಾನಕ್ಕೆ ತಂದ ಹೆಮ್ಮೆ ಇದೆ. ಏಕದಿನ ಪಂದ್ಯಗಳಲ್ಲಿ ನಾವು ಎಂಟನೇ ಅಥವಾ ಒಂಬತ್ತನೇ ಸ್ಥಾನದಲ್ಲಿದ್ದೆವು ಮತ್ತು ನಾವು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿಲ್ಲ. ಆದರೆ ಈಗ ತಂಡ 4 ನೇ ಸ್ಥಾನದಲ್ಲಿದೆ. ನಾನು ಟೆಸ್ಟ್ ತಂಡವನ್ನು 6 ನೇ ಸ್ಥಾನಕ್ಕೆ ತಂದಿದ್ದೇನೆ ಮತ್ತು ಟಿ 20 ತಂಡವು ಸಹ ಆರನೇ ಅಥವಾ ಏಳನೇ ಸ್ಥಾನದಲ್ಲಿದೆ" ಎಂದು ಅವರು ಹೇಳಿದರು.