ನವದೆಹಲಿ: ಭಾರತ ಕ್ರಿಕೆಟ್ ತಂಡ ಕಳೆದ 10 ಪಂದ್ಯಗಳಲ್ಲಿ ಕೇವಲ ಒಂದು ಜಯ ಮಾತ್ರ ದಾಖಲಿಸಿದ್ದು, ಇನ್ನುಳಿದ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಜುಲೈ 19ರಂದು ಲಾರ್ಡ್ಸ್‌ನಲ್ಲಿ ನಡೆದಿದ್ದ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ (IND vs ENG) 388 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ 27 ರನ್‌ಗಳಿಂದ ಸೋಲು ಕಂಡಿತು. ಈ ಸೋಲಿನ ಭಾರತದ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ (Sanjay Manjrekar), ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್‌ರಂತಹ ಅನುಭವಿ ವೇಗಿಗಳನ್ನು ತಂಡದಿಂದ ಹೊರಗಿಟ್ಟಿರುವ ತಂತ್ರವನ್ನು ಪ್ರಶ್ನಿಸಿದ್ದಾರೆ.
ಅನುಭವಿ ಆಟಗಾರರನ್ನು ಕಡೆಗಣಿಸುವ ತಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಜಯ್ ಮಾಂಜ್ರೇಕರ್, "ಈ ತಂಡದ ಮ್ಯಾನೇಜ್‌ಮೆಂಟ್ ಅನುಸರಿಸುತ್ತಿರುವ ತಂತ್ರ ನನಗೆ ಸಂಪೂರ್ಣವಾಗಿ ಅಚ್ಚರಿ ಮೂಡಿಸಿದೆ. 2027ರ ವಿಶ್ವಕಪ್ ಟೂರ್ನಿಗಾಗಿ ತಂಡವನ್ನು ಕಟ್ಟಲು ಬಯಸುವುದು ಸರಿಯೇ. ಆದರೆ ಅದಕ್ಕಾಗಿ ಉತ್ತಮ ಅನುಭವಿ ಆಟಗಾರರನ್ನು ಸಂಪೂರ್ಣವಾಗಿ ಕಡೆಗಣಿಸುವುದು ಸರಿಯಾದ ಮಾರ್ಗವಲ್ಲ. ಜಸ್‌ಪ್ರೀತ್ ಬುಮ್ರಾ ಗಾಯಗೊಂಡ ತಕ್ಷಣವೇ ಭಾರತದ ಬೌಲಿಂಗ್ ದಾಳಿ ಸಂಪೂರ್ಣ ಪರಿಣಾಮ ಕಳೆದುಕೊಳ್ಳುತ್ತಿದೆ," ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬೆಂಬಲ ನೀಡಿ ಅಥವಾ ಬಿಟ್ಟು ಬಿಡಿ: ಬಿಸಿಸಿಐಗೆ ಯುವರಾಜ್ ಸಿಂಗ್ ಸಂದೇಶ!
ಶಮಿ-ಸಿರಾಜ್‌ರನ್ನು ಹೊರಗಿಟ್ಟಿರುವುದೇಕೆ? ಮಾಂಜ್ರೇಕರ್ ಪ್ರಶ್ನೆ
ತಮ್ಮ ಮಾತು ಮುಂದುವರಿಸಿದ ಸಂಜಯ್ ಮಾಂಜ್ರೇಕರ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಲ್ಲೇಖಿಸಿ ತಂಡದ ಆಯ್ಕೆಯನ್ನು ಪ್ರಶ್ನಿಸಿದರು.
"ಇಂಗ್ಲೆಂಡ್‌ನ ನೆಲದಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಂಗೆಡಿಸಿದ್ದ ಮೊಹಮ್ಮದ್ ಸಿರಾಜ್ ಈಗ ಎಲ್ಲಿದ್ದಾರೆ? ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಮೊಹಮ್ಮದ್ ಶಮಿ ಎಲ್ಲಿದ್ದಾರೆ? 'ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್' ಅಥವಾ ಯುವ ಆಟಗಾರರಿಗೆ ಅವಕಾಶ ನೀಡುವ ಹೆಸರಿನಲ್ಲಿ ಇವರನ್ನು ಹೊರಗಿಡುವುದು ಸರಿಯಾದ ನಿರ್ಧಾರವಲ್ಲ. ಅದರಲ್ಲೂ ನಿಮ್ಮ ಬ್ಯಾಕ್‌ಅಪ್ ಬೌಲರ್‌ಗಳು ದುಬಾರಿಯಾಗುತ್ತಿರುವಾಗ ಇಂತಹ ನಿರ್ಧಾರ ಅರ್ಥವಾಗುವುದಿಲ್ಲ. ಲಾರ್ಡ್ಸ್‌ನಂತಹ ಮೈದಾನದಲ್ಲಿ ನಿಮಗೆ ವಿಕೆಟ್ ಪಡೆಯುವ ಬೌಲರ್‌ಗಳು ಬೇಕೇ ಹೊರತು, ಕೇವಲ ಓವರ್‌ಗಳನ್ನು ಪೂರ್ಣಗೊಳಿಸುವ ಬೌಲರ್‌ಗಳಲ್ಲ," ಎಂದು ಮಾಂಜ್ರೇಕರ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಲಾರ್ಡ್ಸ್ ಶತಕದ ಬಳಿಕ ರೋಹಿತ್ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಶುಭಮನ್ ಗಿಲ್!
ಬುಮ್ರಾ ಹೊರತುಪಡಿಸಿ ಇನ್ನುಳಿದ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನವಿಲ್ಲ
ಇಂಗ್ಲೆಂಡ್ ಪ್ರವಾಸದಲ್ಲಿ ಜಸ್‌ಪ್ರೀತ್ ಬುಮ್ರಾ ಹೊರತುಪಡಿಸಿ ಇನ್ನುಳಿದ ಭಾರತೀಯ ಬೌಲರ್‌ಗಳು ನಿರೀಕ್ಷಿತ ಪರಿಣಾಮ ಬೀರಲು ವಿಫಲರಾದರು. ಬುಮ್ರಾ ಎರಡು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದರೂ, ಅವರ ಬೌಲಿಂಗ್‌ನಲ್ಲಿದ್ದ ತೀಕ್ಷ್ಣತೆ ಮತ್ತು ನಿಯಂತ್ರಣ ಉಳಿದವರಲ್ಲಿ ಕಾಣಿಸಲಿಲ್ಲ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬುಮ್ರಾ ಅವರ ಆರಂಭಿಕ ಸ್ಪೆಲ್‌ನಿಂದ ಭಾರತ 80 ರನ್‌ಗಳಿಗೆ ಇಂಗ್ಲೆಂಡ್‌ನ ಐದು ವಿಕೆಟ್‌ಗಳನ್ನು ಕಬಳಿಸಿತ್ತು. ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಬೆನ್ ಡಕೆಟ್ ಅವರನ್ನು ಔಟ್ ಮಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಲಾರ್ಡ್ಸ್‌ನಲ್ಲಿ ಬುಮ್ರಾ ಅನುಪಸ್ಥಿತಿಯ ಪರಿಣಾಮ ಸ್ಪಷ್ಟವಾಗಿ ಗೋಚರಿಸಿತು. ಇಂಗ್ಲೆಂಡ್‌ನ ಮೊದಲ ವಿಕೆಟ್‌ಗಾಗಿ ಭಾರತ 192 ರನ್‌ಗಳ ಜೊತೆಯಾಟ ಮುರಿಯುವವರೆಗೆ ಕಾಯಬೇಕಾಯಿತು, ಇದು ಭಾರತೀಯ ಬೌಲಿಂಗ್ ದಾಳಿಯ ದುರ್ಬಲತೆಯನ್ನು ಎತ್ತಿ ತೋರಿಸಿತು.