ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಜು ಸ್ಯಾಮ್ಸನ್‌ ಔಟ್‌? ಭಾರತದ ಪ್ಲೇಯಿಂಗ್‌ XI ಬಗ್ಗೆ ಸುಳಿವು ನೀಡಿದ ಅಜಿತ್‌ ಅಗರ್ಕರ್‌!

2025ರ ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ. ಇದರ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌, ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಸುಳಿವು ನೀಡಿದ್ದಾರೆ. ಆದರೆ, ಸಂಜು ಸ್ಯಾಮ್ಸನ್‌ಗೆ ಸ್ಥಾನ ನೀಡುವುದು ಅನುಮಾನ ಎಂಬ ಬಗ್ಗೆಯೂ ತಿಳಿಸಿದ್ದಾರೆ.

ಏಷ್ಯಾ ಕಪ್‌ಗೆ ಭಾರತದ ಪ್ಲೇಯಿಂಗ್‌ XI ಬಗ್ಗೆ ಸುಳಿವು ನೀಡಿದ ಅಗರ್ಕರ್‌!

ಭಾರತದ ಪ್ಲೇಯಿಂಗ್‌ XI ಬಗ್ಗೆ ಅಜಿತ್‌ ಅಗರ್ಕರ್‌ ಸುಳಿವು ನೀಡಿದ್ದಾರೆ.

Profile Ramesh Kote Aug 19, 2025 8:18 PM

ದುಬೈ: ಬಹುನಿರೀಕ್ಷಿತ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಆಗಸ್ಟ್‌ 19ರಂದು ಅಜಿತ್‌ ಅಗರ್ಕರ್‌ (Ajit Agarkar) ನೇತ್ರತ್ವದ ಆಯ್ಕೆ ಸಮಿತಿಯು ಭಾರತ ತಂಡವನ್ನು (India Squad) ಪ್ರಕಟಿಸಿದೆ. ಸೆಪ್ಟೆಂಬರ್‌ 9 ರಂದು ಪ್ರಾರಂಭವಾಗಲಿರುವ ಈ ಟೂರ್ನಿಗೆ ಭಾರತವನ್ನು ಪ್ರತಿನಿಧಿಸುವ 15 ಸದಸ್ಯರುಗಳ ತಂಡವನ್ನು ಸೂರ್ಯಕುಮಾರ್ ಯಾದವ್ (Suryakumar Yadav) ಮುನ್ನಡೆಸಲಿದ್ದು, ಶುಭ್‌ಮನ್‌ ಗಿಲ್‌ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಮೊಹಮ್ಮದ್‌ ಸಿರಾಜ್‌, ಶ್ರೇಯಸ್‌ ಅಯ್ಯರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರನ್ನು ಕೈ ಬಿಟ್ಟಿರುವುದು ಅಚ್ಚರಿ ಸಂಗತಿಯಾಗಿದೆ. ಇದರ ನಡುವೆ ತಂಡದಲ್ಲಿ ವಿಕೆಟ್‌ ಕೀಪರ್‌ ಆಗಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ಆಯ್ಕೆ ಸಮಿತಿ ತೆರೆ ಎಳೆದಿದ್ದು, ಸಂಜು ಸ್ಯಾಮ್ಸನ್‌ ಮತ್ತು ಜಿತೇಶ್‌ ಶರ್ಮಾ ಅವರಿಗೆ ಮಣೆ ಹಾಕಿದೆ.

ಇದರ ಹೊರತಾಗಿಯೂ ಇನ್ನು ಅನೇಕ ಗೊಂದಲಗಳಿವೆ. ಅದೇನೆಂದರೆ, ಭಾರತ ತಂಡದ ಪರವಾಗಿ ಅಭಿಷೇಕ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸುವವರು ಯಾರು ಎನ್ನುವ ಪ್ರಶ್ನೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ವಿಚಾರದ ಕುರಿತು ಮಾತನಾಡಿರುವ ಅಜಿತ್‌ ಅಗರ್ಕರ್‌ ಅಲ್ಪ ಪ್ರಮಾಣದ ಸುಳಿವು ನೀಡಿದ್ದಾರೆ ಎನ್ನಬಹುದು. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಜೈಸ್ವಾಲ್‌ ಮತ್ತು ಗಿಲ್‌ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಸಂಜು ಸ್ಯಾಮ್ಸನ್‌ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದಾಗ್ಯೂ ಶುಭ್‌ಮನ್‌ ಗಿಲ್‌ ತಂಡದಲ್ಲಿರುವುದರಿಂದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಹಾಗಾಗಿ ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್‌ ಇಲವೆನ್‌ನಲ್ಲಿ ಅವಕಾಶ ಸಿಗುವುದು ಅನುಮಾನ ಎಂದಿದ್ದಾರೆ.

Asia Cup 2025: ಭಾರತ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಪಡೆಯದ ಟಾಪ್‌ 5 ಆಟಗಾರರು!

ಅಜಿತ್‌ ಅಗರ್ಕರ್‌ ಹೇಳಿದ್ದೇನು?

2025ರ ಏಷ್ಯಾಕಪ್‌ ಟೂರ್ನಿಗೆ ತಂಡವನ್ನು ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜಿತ್‌ ಅಗರ್ಕರ್‌, "ಜೈಸ್ವಾಲ್ ಮತ್ತು ಗಿಲ್ ಲಭ್ಯವಿಲ್ಲದ ಕಾರಣ ಸಂಜು ಸ್ಯಾಮ್ಸನ್ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ್ದರು. ಗಿಲ್ ಮತ್ತು ಸಂಜು ಅಭಿಷೇಕ್ ಶರ್ಮಾ ಅವರ ಜೊತೆಗೆ ಗಿಲ್‌ ಮತ್ತು ಸಂಜು ಕೂಡ ಉತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳು. ನಾಯಕ ಮತ್ತು ಕೋಚ್ ದುಬೈ ತಲುಪಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ," ಎಂದು ತಿಳಿಸಿದ್ದಾರೆ.

ಶುಭಮನ್ ಗಿಲ್ ಅವರನ್ನು ತಂಡದ ಉಪನಾಯಕನನ್ನಾಗಿ ಹೆಸರಿಸಿರುವುದರಿಂದ, ಅವರನ್ನು ಕೈಬಿಡಲಾಗುವುದಿಲ್ಲ. ಈ ಕಾರಣದಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನುವ ಸುಳಿವು ನೀಡಿದ್ದಾರೆ.

Asia Cup 2025: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಗಿಲ್‌ಗೆ ಉಪನಾಯಕನ ಪಟ್ಟ

ಏಷ್ಯಾ ಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್

ಸ್ಟ್ಯಾಂಡ್‌ಬೈ: ಪ್ರಸಿಧ್‌ ಕೃಷ್ಣ, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್



ಏಷ್ಯಾಕಪ್‌ಗೆ ಭಾರತ ತಂಡದ ವೇಳಾಪಟ್ಟಿ

ಸೆಪ್ಟೆಂಬರ್ 10: ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ ಕಾದಾಟ ನಡೆಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಸೆಪ್ಟೆಂಬರ್ 14: ಟೀಮ್ ಇಂಡಿಯಾದ ಎರಡನೇ ಪಂದ್ಯ ಪಾಕಿಸ್ತಾನ ವಿರುದ್ಧ. ಇಂಡೋ-ಪಾಕ್ ನಡುವಿನ ಈ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ.

ಸೆಪ್ಟೆಂಬರ್ 19: ಭಾರತ ತಂಡ ತನ್ನ ಮೂರನೇ ಪಂದ್ಯದಲ್ಲಿ ಒಮಾನ್ ವಿರುದ್ಧ ಸೆಣಸಾಡಲಿದೆ. ಈ ಮೂರು ಪಂದ್ಯಗಳಲ್ಲಿ ಭಾರತ ತಂಡ 2 ಜಯ ಸಾಧಿಸಿದರೆ ಸೂಪರ್-4 ಹಂತಕ್ಕೇರಲಿದೆ.