ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಸ್ಥಾನ್‌ ರಾಯಲ್ಸ್‌ ತೊರೆದು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರಲು ಬಲವಾದ ಕಾರಣ ತಿಳಿಸಿದ ಸಂಜು ಸ್ಯಾಮ್ಸನ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಮುನ್ನ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ತೊರೆದು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರ್ಪಡೆಯಾಗಲು ಕಾರಣವೇನೆಂದು ಸಂಜು ಸ್ಯಾಮ್ಸನ್‌ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಸಿಎಸ್‌ಕೆ ತಂಡದಲ್ಲಿ ನಾಯಕತ್ವವನ್ನು ಬಯಸಿ ಇಲ್ಲಿಗೆ ಬರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆರ್‌ಆರ್‌ ತೊರೆದು ಸಿಎಸ್‌ಕೆಗೆ ಸೇರಲು ಕಾರಣ ತಿಳಿಸಿದ ಸಂಜು ಸ್ಯಾಮ್ಸನ್‌.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ (IPL 2026) ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ತೊರೆದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರಲು ಪ್ರಮುಖ ಕಾರಣವೇನೆಂದು ಭಾರತದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಬಹಿರಂಗಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನೊಂದಿಗೆ ತಮ್ಮ ಪಯಣ ಪೂರ್ಣಗೊಂಡಂತೆ ಅನಿಸಿತ್ತು. ಆ ತಂಡಕ್ಕೆ ನೀಡಲು ನನ್ನ ಬಳಿ ಹೊಸದೇನೂ ಉಳಿದಿಲ್ಲ ಎಂಬ ಭಾವನೆ ಮೂಡಿತ್ತು. ಈ ವಿಚಾರದಲ್ಲಿ ಸ್ಪಷ್ಟತೆ ಪಡೆಯಲು ಕುಟುಂಬ ಸದಸ್ಯರೊಂದಿಗೆ ದೀರ್ಘ ಚರ್ಚೆ ನಡೆಸಿದ್ದಾಗಿ ತಿಳಿಸಿದ ಅವರು, ಎಲ್ಲವನ್ನೂ ಆಲೋಚಿಸಿದ ಬಳಿಕ ಹೊಸ ಸವಾಲನ್ನು ಸ್ವೀಕರಿಸುವ ಉದ್ದೇಶದಿಂದ ಚೆನ್ನೈ ಸೂಪರ್ ಕಿಂಗ್ಸ್ ಸೇರುವ ನಿರ್ಧಾರ ಕೈಗೊಂಡೆ ಎಂದು ಹೇಳಿದ್ದಾರೆ.

ಜಿಯೋಹಾಟ್‌ಸ್ಟಾರ್‌ನ 'ಸೂಪರ್‌ಸ್ಟಾರ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, "ನನ್ನ ಕುಟುಂಬ ಮತ್ತು ಪತ್ನಿಯೊಂದಿಗೆ ಸಾಕಷ್ಟು ಸಮಯ ಚರ್ಚೆ ನಡೆಸಿದ್ದೆ. ಇದು ಹಠಾತ್ ತೆಗೆದುಕೊಂಡ ನಿರ್ಧಾರವೇ ಅಥವಾ ನಿಜವಾಗಿಯೂ ಖಚಿತವಾಗಿದ್ದೀಯಾ ಎಂದು ಅವರು ಪದೇ-ಪದೆ ಕೇಳುತ್ತಿದ್ದರು. ಸುಮಾರು ಎರಡು-ಮೂರು ವಾರಗಳ ಕಾಲ ನಾವು ಈ ಬಗ್ಗೆ ಚರ್ಚಿಸಿದ್ದೆವು. ಕೊನೆಗೆ ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ್ದೇವೆ. ಇದು ಸರಿಯಾದ ನಿರ್ಧಾರ ಎಂಬ ವಿಶ್ವಾಸ ನನಗಿತ್ತು," ಎಂದು ಹೇಳಿದ್ದಾರೆ.

IND vs ZIM: ರಜತ್‌ ಪಾಟಿದಾರ್‌ಗೆ ಭಾರತ ತಂಡದಲ್ಲಿ ಸ್ಥಾನ ಏಕೆ ನೀಡಿಲ್ಲ? ಹನುಮ ವಿಹಾರಿ ಪ್ರಶ್ನೆ!

2025ರ ಐಪಿಎಲ್‌ ಟೂರ್ನಿಯಲ್ಲಿ ಆರಂಭಿಕ ಬ್ಯಾಟರ್ ಸ್ಥಾನವನ್ನು ವೈಭವ್ ಸೂರ್ಯವಂಶಿ ಅವರಿಗೆ ಬಿಟ್ಟುಕೊಟ್ಟ ಬಳಿಕ, ಮತ್ತೆ ಶೂನ್ಯದಿಂದಲೇ ಆರಂಭಿಸಲು ತಾನು ಸಿದ್ಧನಾಗಿದ್ದೆ ಎಂದು ಸ್ಯಾಮ್ಸನ್ ಹೇಳಿದರು. ಚೆಪಾಕ್‌ನಲ್ಲಿ ಹೊಸ ಸವಾಲು ಸ್ವೀಕರಿಸಲು ನಾನು ಸಂಪೂರ್ಣ ಸಿದ್ಧನಾಗಿದ್ದೆ. ಐಪಿಎಲ್‌ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಮತ್ತೊಮ್ಮೆ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸವೂ ಇತ್ತು ಎಂದು ಅವರು ತಿಳಿಸಿದ್ದಾರೆ.

ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಕೆಲವು ಪಂದ್ಯಗಳಲ್ಲಿ ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆರಂಭಿಕ ವೈಫಲ್ಯದ ಬಳಿಕ ಅವರ ಹೊಂದಾಣಿಕೆ ಸಾಮರ್ಥ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕೇಳಿಬಂದವು. ಈ ಸಂದರ್ಭದಲ್ಲಿ ಅವರು ಎಂ.ಎಸ್ ಧೋನಿ ಅವರನ್ನು ಭೇಟಿಯಾದಾಗ, "ಎಲ್ಲವೂ ಸರಿಯಾಗುತ್ತದೆ" ಎಂದು ಧೋನಿ ಆತ್ಮವಿಶ್ವಾಸ ತುಂಬಿದ ಮಾತುಗಳನ್ನು ಹೇಳಿದ್ದರು.

IND vs ZIM: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಹಾದಿಯ ಬಗ್ಗೆ ಪ್ರತಿಕ್ರಿಯಿಸಿದ ಮಯಾಂಕ್‌ ಯಾದವ್!

ಆ ಸರಳವಾದ ಮಾತುಗಳು ತಮ್ಮ ಜೀವನ ಮತ್ತು ವೃತ್ತಿಜೀವನದ ದೃಷ್ಟಿಕೋನವನ್ನು ಬದಲಿಸಿದ ಮಹತ್ವದ ಪಾಠವಾಗಿತ್ತು ಎಂದು ಸ್ಯಾಮ್ಸನ್ ಹೇಳಿದ್ದಾರೆ. ಧೋನಿ ಅವರ ಆ ವಿಶ್ವಾಸ ತುಂಬಿದ ಮಾತುಗಳು ಮತ್ತೆ ಆತ್ಮಸ್ಥೈರ್ಯದಿಂದ ಮುಂದುವರಿಯಲು ಪ್ರೇರಣೆ ನೀಡಿದವು ಎಂದು ಅವರು ತಿಳಿಸಿದ್ದಾರೆ.

ಸಿಎಸ್‌ಕೆ ನಾಯಕತ್ವವನ್ನು ಕೇಳಲಿಲ್ಲ: ಸಂಜು ಸ್ಯಾಮ್ಸನ್‌

ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಬಳಿಕ ನಾಯಕತ್ವವನ್ನು ತಾವು ಕೇಳಲಿಲ್ಲ ಎಂದು ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಐದು ಋತುಗಳ ಕಾಲ ಮುನ್ನಡೆಸಿದ್ದರೂ, ನಾಯಕತ್ವ ಎಂಬುದು ಕೇಳಿ ಪಡೆಯುವ ಹುದ್ದೆಯಲ್ಲ, ಅದು ನಂಬಿಕೆಯಿಂದ ನೀಡಲ್ಪಡುವ ಜವಾಬ್ದಾರಿ ಎಂದು ಅವರು ಹೇಳಿದರು.

"ರಾಜಸ್ಥಾನ್ ರಾಯಲ್ಸ್‌ನಲ್ಲೂ ನಾನು ಎಂದಿಗೂ ನಾಯಕತ್ವವನ್ನು ಕೇಳಿರಲಿಲ್ಲ. ತಂಡದ ಮಾಲೀಕ ಮನೋಜ್ ಬಾದಲೆ ಅವರು, 'ನೀವೇ ಮುಂದಿನ ನಾಯಕ' ಎಂದು ಹೇಳಿದಾಗ, ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಉತ್ತರಿಸಿದ್ದೆ," ಎಂದು ಹೇಳಿದ ಸ್ಯಾಮ್ಸನ್, ಮುಂದುವರಿದು, ರಾಜಸ್ಥಾನ್ ರಾಯಲ್ಸ್‌ನ ನಾಯಕನಾಗಿ ಕಳೆದ ಸಮಯವನ್ನು ತುಂಬಾ ಆನಂದಿಸಿದ್ದೆ. ಆದರೆ ಈಗ ನಾನು ಕ್ರಿಕೆಟ್ ಅನ್ನು ಇನ್ನಷ್ಟು ಮುಕ್ತವಾಗಿ ಆನಂದಿಸಲು ಬಯಸಿದ್ದೆ. ಋತುರಾಜ್ ಗಾಯಕ್ವಾಡ್ ಅವರಂತಹ ನಾಯಕತ್ವದಲ್ಲಿ ಆಡುವುದನ್ನು ನಾನು ಖಂಡಿತವಾಗಿ ಇಷ್ಟಪಡುತ್ತೇನೆ ಎಂಬ ವಿಶ್ವಾಸ ನನಗಿತ್ತು," ಎಂದು ಅವರು ತಿಳಿಸಿದ್ದಾರೆ.