ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಭಾರತ ಹಾಗೂ ಮುಂಬೈ ತಂಡದ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ (Sarfaraz Khan) ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಪಂಜಾಬ್ ವಿರುದ್ದದ ಏಳನೇ ಸುತ್ತಿನ ಪಂದ್ಯದಲ್ಲಿಯೂ ಅವರು ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಕೇವಲ 15 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಬರೋಡಾ ತಂಡದ ಅತಿತ್ ಸೇಠ್ (Atit Seth) ಅವರ ದಾಖಲೆಯನ್ನು ಮುರಿದಿದ್ದಾರೆ. 2020-21ರ ಸಾಲಿನ ಇದೇ ಟೂರ್ನಿಯಲ್ಲಿ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಅತಿತ್ ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಇದೀಗ ಈ ದಖಲೆಯನ್ನು ಸರ್ಫರಾಝ್ ಖಾನ್ ಮುರಿದಿದ್ದಾರೆ. ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸರ್ಫರಾಝ್ ಖಾನ್ ಬರೆದಿದ್ದಾರೆ.
ಗುರುವಾರ ಪಂಜಾಬ್ ನೀಡಿದ್ದ 217 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ತಂಡ ಬಹುಬೇಗ ಮುಶೀರ್ ಖಾನ್ ವಿಕೆಟ್ ಅನ್ನು ಕಳೆದುಕೊಂಡಿತು. ಆ ಮೂಲಕ ಮುಂಬೈ 57 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಸರ್ಫರಾಝ್ ಖಾನ್, ಪಂದ್ಯಕ್ಕೆ ಹೊಂದಿಕೊಳ್ಳಲು ಹೆಚ್ಚು ಹೊತ್ತು ಸಮಯವನ್ನು ತೆಗೆದುಕೊಳ್ಳಲಿಲ್ಲ. ಅಭಿಷೇಕ್ ಶರ್ಮಾ ಅವರ ಓವರ್‌ನಲ್ಲಿ ಅವರು 30 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಕೇವಲ 15 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಐದು ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
KAR vs MP: ಮಹಾರಾಷ್ಟ್ರ ವಿರುದ್ಧ ಸೋತರೂ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಕರ್ನಾಟಕ!
ಅಂತಿಮವಾಗಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆಡಿದ 20 ಎಸೆತಗಳಲ್ಲಿ 62 ರನ್‌ಗಳನ್ನು ಗಳಿಸಿದರು. ತಮ್ಮ ಇನಿಂಗ್ಸ್‌ನಲ್ಲಿ ಅವರು 5 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಕಲೆ ಹಾಕಿದ್ದರು. ಸರ್ಫರಾಝ್ ಖಾನ್ ಅವರ ಜೊತೆಗೆ ನಾಯಕ ಶ್ರೇಯಸ್ ಅಯ್ಯರ್ ಅವರು ಕೂಡ 34 ಎಸೆತಗಳಲ್ಲಿ 45 ರನ್‌ಗಳನ್ನು ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿವೆ.
303 ರನ್ ಗಳಿಸಿರುವ ಸರ್ಫರಾಝ್ ಖಾನ್
ಸರ್ಫರಾಝ್ ಖಾನ್ ಅವರು ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ 5 ಇನಿಂಗ್ಸ್‌ಗಳಿಂದ 75.75ರ ಸರಾಸರಿ ಹಾಗೂ 190.56ರ ಸ್ಟ್ರೈಕ್ ರೇಟ್‌ನಲ್ಲಿ303 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು ಒಂದ ಶತಕ ಹಾಗೂ ಎರಡು ಅರ್ಧಶತಕವನ್ನು ಬಾರಿಸಿದ್ದಾರೆ.
ಇದಕ್ಕೂ ಮುನ್ನ ಗೋವಾ ವಿರುದ್ಧದ ಪಂದ್ಯದಲ್ಲಿ ಇವರು 56 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಇದರಲ್ಲಿ ಅವರು 9 ಬೌಂಡರಿಗಳೊಂದಿಗೆ 14 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಇನಿಂಗ್ಸ್‌ನಲ್ಲಿ ಅವರು ಒಟ್ಟು ಆಡಿದ 75 ಎಸೆತಗಳಲ್ಲಿ 157 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಮುಂಬೈ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 444 ರನ್‌ಗಳನ್ನು ಕಲೆ ಹಾಕಿದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅವರು ಏಳು ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ 329 ರನ್ ಗಳಿಸಿದ್ದರು, ಅವರ ಸ್ಟ್ರೈಕ್ ರೇಟ್ 203.08 ಆಗಿತ್ತು. ಇದಕ್ಕೂ ಮೊದಲು, ಮುಂಬೈ ತಂಡ ಪಂಜಾಬ್ ಅನ್ನು 45.1 ಓವರ್‌ಗಳಲ್ಲಿ 216 ರನ್‌ಗಳಿಗೆ ಆಲೌಟ್ ಮಾಡಿತ್ತು. ರಮಣದೀಪ್ ಸಿಂಗ್ (74 ಎಸೆತಗಳಲ್ಲಿ 72) ಮತ್ತು ಅನ್ಮೋಲ್‌ಪ್ರೀತ್ ಸಿಂಗ್ (75 ಎಸೆತಗಳಲ್ಲಿ 57) ಟಾಪ್ ಸ್ಕೋರರ್‌ಗಳಾಗಿ ಹೊರಹೊಮ್ಮಿದರು. ಮುಂಬೈ ಪರ ಬೌಲರ್‌ಗಳಲ್ಲಿ ಮುಶೀರ್ ಖಾನ್ ಆಯ್ಕೆಯಾಗಿದ್ದರು, 9.1 ಓವರ್‌ಗಳಲ್ಲಿ 37 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.