ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs MP: ಮಹಾರಾಷ್ಟ್ರ ವಿರುದ್ಧ ಸೋತರೂ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಕರ್ನಾಟಕ!

KAR vs MP Match Highlights: ಶಿವಾಂಗ್‌ ಕುಮಾರ್‌ ಸ್ಪಿನ್‌ ಮೋಡಿಗೆ ನಲುಗಿದ ಕರ್ನಾಟಕ ತಂಡದ ಮಧ್ಯ ಪ್ರದೇಶ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 2025-26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಮೊದಲನೇ ಸೋಲು ಇದಾಗಿದೆ. ಪಂದ್ಯವನ್ನು ಸೋತರೂ ಆರಂಭಿಕ ಆರು ಗೆಲುವುಗಳ ಮೂಲಕ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಮಾಡಿದೆ.

VHT 2025-26: ಮಧ್ಯ ಪ್ರದೇಶ ಎದುರು ಸೋತ ಕರ್ನಾಟಕ ತಂಡ!

ಮಧ್ಯ ಪ್ರದೇಶ ವಿರುದ್ಧ ಸೋಲು ಅನುಭವಿಸಿದ ಕರ್ನಾಟಕ. -

Profile
Ramesh Kote Jan 8, 2026 6:46 PM

ಅಹಮದಾಬಾದ್‌: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕರ್ನಾಟಕ (Karnataka) ತಂಡ, ಮಧ್ಯ ಪ್ರದೇಶ ವಿರುದ್ಧ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡಕ್ಕೆ ಮೊದಲನೇ ಸೋಲು ಇದಾಗಿದೆ. ಈ ಪಂದ್ಯವನ್ನು ಸೋತರೂ ಆರಂಭಿಕ ಆರು ಪಂದ್ಯಗಳ ಗೆಲುವಿನ ಆಧಾರದ ಮೇಲೆ ಕರ್ನಾಟಕ ತಂಡ ಎ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಮಾಡಿತು. ಈ ಪಂದ್ಯವನ್ನು ಗೆದ್ದ ಮಧ್ಯ ಪ್ರದೇಶ (Madhya Pradesh) ತಂಡ ಎರಡನೇ ಸ್ಥಾನ ಪಡೆಯುವ ಮೂಲಕ ಅಂತಿಮ ಎಂಟರ ಘಟ್ಟಕ್ಕೆ ಅರ್ಹತೆ ಪಡೆಯಿತು.

ಇಲ್ಲಿನ ನರೇಂದ್ರ ಮೋದಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಏಳನೇ ಸುತ್ತಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕರ್ನಾಟಕ ತಂಡಕ್ಕೆ ಮಯಾಂಕ್‌ ಅಗರ್ವಾಲ್‌ ಹಾಗೂ ದೇವದತ್‌ ಪಡಿಕ್ಕಲ್‌ 77 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಉತ್ತಮ ಆರಂಭವನ್ನುತಂದುಕೊಟ್ಟಿದ್ದರು. 39 ಎಸೆತಗಳಲ್ಲಿ 35 ರನ್‌ ಗಳಸಿದ್ದ ದೇವದತ್‌ ಪಡಿಕ್ಕಲ್‌ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಕರುಣ್‌ ನಾಯರ್‌ 10 ರನ್‌ಗೆ ಔಟ್‌ ಆದರು. ಬಳಿಕ 49 ರನ್‌ ಗಳಿಸಿ ಆಡುತ್ತಿದ್ದ ನಾಯಕ ಮಯಾಂಕ್‌ ಅಗರ್ವಾಲ್‌ ಕೂಡ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಟ್ರಾವಿಸ್‌ ಹೆಡ್‌!

ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ನರ್‌ ಶಿವಾಂಗ್‌ ಕುಮಾರ್‌ ಕಾಟ ನೀಡಿದರು. ಆರ್‌ ಸಮರ್ಥ್‌, ಕೆ ಶ್ರೀಜಿತ್‌, ಶ್ರೇಯಸ್‌ ಗೋಪಾಲ್‌, ಅಭಿನವ್‌ ಮನೋಹರ್‌ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದರು. ಆದರೆ, ವಿದ್ಯಾದರ್‌ ಪಾಟೀಲ್‌ 37 ಎಸೆತಗಳಲ್ಲಿ 34 ರನ್‌ ಗಳಿಸಿ ಕರ್ನಾಟಕ ತಂಡದ ಮೊತ್ತವನ್ನು 200ರ ಗಡಿಯನ್ನು ದಾಟಿಸಿದರು. ಅಂತಿಮವಾಗಿ ಕರ್ನಾಟಕ 47.4 ಓವರ್‌ಗಳಿಗೆ 207 ರನ್‌ಗಳಿಗೆ ಆಲ್‌ಔಟ್‌ ಆಯಿತು. ಮಧ್ಯ ಪ್ರದೇಶ ತಂಡದ ಪರ ಶಿವಾಂಗ್‌ ಕುಮಾರ್‌ 5 ವಿಕೆಟ್‌ ಸಾಧನೆ ಮಾಡಿದರು.

ವೆಂಕಟೇಶ್‌ ಅಯ್ಯರ್‌ ಅರ್ಧಶತಕ

208 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮಧ್ಯ ಪ್ರದೇಶ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ತೋರಿದರು. ಇನಿಂಗ್ಸ್‌ ಆರಂಭಿಸಿದ ಯಶ್‌ ದುಬೆ (40 ರನ್‌) ಹಾಗೂ ಹಿಮಾಂಶು ಮಾಂತ್ರಿ (34 ರನ್‌) ಅವರು ಮುರಿಯದ ಮೊದಲನೇ ವಿಕೆಟ್‌ಗೆ 78 ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ನಾಯಕ ವೆಂಕಟೇಶ್‌ ಅಯ್ಯರ್‌ ಅರ್ಧಶತಕವನ್ನು ಬಾರಿಸಿದರು. ಇವರು ಆಡಿದ 33 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 65 ರನ್‌ ಗಳಿಸಿ ಮಧ್ಯ ಪ್ರದೇಶ ತಂಡವನ್ನು ಬಹುಬೇಗ ಗೆಲ್ಲಿಸಿದರು.

ಗೋವಾ ವಿರುದ್ಧ ಶತಕ ಬಾರಿಸಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆದ ಋತುರಾಜ್‌ ಗಾಯಕ್ವಾಡ್‌!

ಅಕ್ಷತ್‌ ರಘುವಂಶಿ 26 ರನ್‌ ಗಳಿಸಿದರೆ, ತ್ರಿಪುರೇಶ ಸಿಂಗ್‌ ಕೇವಲ 12 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 36 ರನ್‌ ಸಿಡಿಸಿದರು. ಆ ಮೂಲಕ ಮಧ್ಯ ಪ್ರದೇಶ ತಂಡ, 23.2 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಲೀಗ್‌ ಹಂತದಲ್ಲಿ ಮಧ್ಯ ಪ್ರದೇಶ ತಂಡಕ್ಕೆ ಇದು ಐದನೇ ಗೆಲುವಾಗಿದೆ.

ಟೂರ್ನಿಯ ಗುಂಪಿನಿಂದ ಉತ್ತರ ಪ್ರದೇಶ ಮತ್ತು ವಿದರ್ಭ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಮಾಡಿದರೆ, ಸಿ ಗುಂಪಿನಿಂದ ಪಂಜಾಬ್‌ ಮತ್ತು ಮುಂಬೈ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಮಾಡಿವೆ ಹಾಗೂ ಡಿ ಗುಂಪಿನಿಂದ ದೆಹಲಿ ಮತ್ತು ಸೌರಾಷ್ಟ್ರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿವೆ.