ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ವಿರುದ್ಧ ಹಾಂಗ್‌ಕಾಂಗ್ ಸಿಕ್ಸಸ್ ಗೆಲುವು ಸಂಭ್ರಮಿಸಿದ ಪಾಕ್ ಪ್ರಧಾನಿಯನ್ನು ಟ್ರೋಲ್‌ ಮಾಡಿದ ಫ್ಯಾನ್ಸ್‌!

ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವನ್ನು ಸಂಭ್ರಮಿಸಿ ಪ್ರಧಾನಿ ಶೆಹಬಾಝ್ ಷರೀಫ್ ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ಆರು ಓವರ್‌ಗಳ ಪಂದ್ಯದ ಗೆಲುವಿಗೆ ಇಷ್ಟೊಂದು ಸಂಭ್ರಮವೇ ಎಂದು ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

ಪಾಕಿಸ್ತಾನ ಪ್ರಧಾನಿಯನ್ನು ಟ್ರೋಲ್‌ ಮಾಡಿದ ಫ್ಯಾನ್ಸ್.

ನವದೆಹಲಿ: ಹಾಂಗ್‌ಕಾಂಗ್ ಸಿಕ್ಸಸ್ 2026ರ ಟೂರ್ನಿಯಲ್ಲಿ (Hong Kong Sixes) ಭಾರತ ವಿರುದ್ಧ ಪಾಕಿಸ್ತಾನ ತಂಡ (IND vs PAK) ನಾಲ್ಕು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವನ್ನು ಸಂಭ್ರಮಿಸಿ ಪಾಕಿಸ್ತಾನದ ಪ್ರಧಾನಿ ಶೆಹಬಾಝ್‌ ಷರೀಫ್ (Shehbaz Sharif) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ಅವರ ಈ ಸಂಭ್ರಮಕ್ಕೆ ನೆಟ್ಟಿಗರಿಂದ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಭಾರತ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ಶೆಹಬಾಝ್‌ ಷರೀಫ್ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

“ಹಾಂಗ್‌ಕಾಂಗ್ ಸಿಕ್ಸಸ್ 2026ರ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ನಾಲ್ಕು ವಿಕೆಟ್‌ಗಳ ಅದ್ಭುತ ಗೆಲುವು ಸಾಧಿಸಿದ ನಮ್ಮ ಆಟಗಾರರಿಗೆ ಅಭಿನಂದನೆಗಳು. ಇದು ಉತ್ತಮ ಕ್ರಿಕೆಟ್ ಪಂದ್ಯವಾಗಿತ್ತು. ಆಟಗಾರರನ್ನು ಸಿದ್ಧಪಡಿಸಲು ಮತ್ತು ಅವರಿಗೆ ಬೆಂಬಲ ನೀಡಲು ಶ್ರಮಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಹಾಗೂ ಅವರ ತಂಡದ ಪ್ರಯತ್ನಗಳನ್ನೂ ನಾನು ಪ್ರಶಂಸಿಸುತ್ತೇನೆ,” ಎಂದು ಅವರು ಬರೆದುಕೊಂಡಿದ್ದರು.

IND vs NZ ಟಿ20ಐ ಸರಣಿಯಲ್ಲಿ ಕುಲ್ದೀಪ್‌, ವರುಣ್‌ಗೆ ಚಾನ್ಸ್‌ ನೀಡದೇ ಇರಲು ಕಾರಣ ತಿಳಿಸಿದ ಸ್ಪಿನ್‌ ಕೋಚ್‌!

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಏನಾಯಿತು?

ಅಕ್ಟೋಬರ್ 30ರಂದು ಹಾಂಗ್‌ಕಾಂಗ್‌ನ ಮಿಷನ್ ರೋಡ್ ಮೈದಾನದಲ್ಲಿ ನಡೆದ ಗ್ರೂಪ್ 'ಸಿ' ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ ಆರು ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 88 ರನ್ ಗಳಿಸಿತು.



ಭಾರತದ ಪರ ಶಶಾಂಕ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಕೇವಲ 11 ಎಸೆತಗಳಲ್ಲಿ ಐದು ಸಿಕ್ಸರ್‌ಗಳ ನೆರವಿನಿಂದ 40 ರನ್ ಸಿಡಿಸಿದರು. ನಿತೀಶ್ ರಾಣಾ 19 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.



89 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 3.5 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 91 ರನ್ ಗಳಿಸಿ ಗೆಲುವು ದಾಖಲಿಸಿತು. ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಕೇವಲ ಎಂಟು ಎಸೆತಗಳಲ್ಲಿ 35 ರನ್ ಚಚ್ಚಿದರು. ಖ್ವಾಜಾ ನಫೇ 12 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದ ಮನೀಷಾ ಭಾನ್ವಾಲಾ!

ವಿಶೇಷವಾಗಿ, ಭಾರತದ ಕೃಣಾಲ್ ಪಾಂಡ್ಯ ಬೌಲ್‌ ಮಾಡಿದ ಮೊದಲ ಓವರ್‌ನಲ್ಲೇ ಅಬ್ಬಾಸ್ ಅಫ್ರಿದಿ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅಬ್ಬಾಸ್ ಮತ್ತು ನಫೇ ಕೇವಲ 13 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟವಾಡಿದರು. ಅಂತಿಮವಾಗಿ ಪಾಕಿಸ್ತಾನ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.



ಪಾಕ್‌ ಪ್ರಧಾನಿಯನ್ನು ಟ್ರೋಲ್‌ ಮಾಡಿದ ಫ್ಯಾನ್ಸ್‌

ಶೆಹಬಾಝ್‌ ಷರೀಫ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಯಿತು. ಆರು ಓವರ್‌ಗಳ ವಿಶೇಷ ಮಾದರಿಯ ಪಂದ್ಯದಲ್ಲಿ ಗೆದ್ದಿದ್ದಕ್ಕೆ ಪ್ರಧಾನಿ ಇಷ್ಟೊಂದು ಸಂಭ್ರಮಿಸುವ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದರು.

ಕೆಲವರು ವ್ಯಂಗ್ಯವಾಗಿ, “ಈಗ ವಿಜಯೋತ್ಸವದ ಮೆರವಣಿಗೆ ಯಾವಾಗ?” ಎಂದು ಪ್ರಶ್ನಿಸಿದರೆ, ಮತ್ತೊಬ್ಬರು “ವಿಶ್ವಕಪ್ ಗೆದ್ದಂತೆ ಸಂಭ್ರಮಿಸುತ್ತಿದ್ದಾರೆ” ಎಂದು ಟೀಕಿಸಿದರು.



ಇನ್ನೊಬ್ಬ ನೆಟ್ಟಿಗರು, “ವಿಶ್ವದ ಅತಿದೊಡ್ಡ ಕ್ರಿಕೆಟ್ ಟೂರ್ನಿಯಲ್ಲಿ ಭಾರತವನ್ನು ಸೋಲಿಸಿದ್ದಕ್ಕೆ ಅಭಿನಂದನೆಗಳು. ಇದು ಯಾವುದೇ ವಿಶ್ವಕಪ್ ಅಥವಾ ಏಷ್ಯಾಕಪ್‌ಗಿಂತ ದೊಡ್ಡ ಸಾಧನೆ” ಎಂದು ವ್ಯಂಗ್ಯವಾಡಿದರು. ಇನ್ನು ಕೆಲವರು ಆರು ಓವರ್‌ಗಳ ಪಂದ್ಯಕ್ಕೆ ದೇಶದ ಪ್ರಧಾನಿ ಇಷ್ಟೊಂದು ಮಹತ್ವ ನೀಡುತ್ತಿರುವುದನ್ನು ಪ್ರಶ್ನಿಸಿದರು.

ವೈಭವ್‌, ಅಭಿಷೇಕ್‌, ಕಿಶನ್‌ಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ನೀಡಿ ಎಂದ ಯುವರಾಜ್‌ ಸಿಂಗ್‌!

ಶೆಹಬಾಜ್ ಷರೀಫ್ ಪೋಸ್ಟ್‌ನಲ್ಲೊಂದು ತಪ್ಪು

ಪ್ರಧಾನಿ ತಮ್ಮ ಪೋಸ್ಟ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನದ 'ಆರಂಭಿಕ ಪಂದ್ಯ' ಎಂದು ಉಲ್ಲೇಖಿಸಿದ್ದರು. ಆದರೆ, ಅದಕ್ಕೂ ಮೊದಲು ಪಾಕಿಸ್ತಾನ ತಂಡ, ಯುಎಇ ವಿರುದ್ಧ ಪಂದ್ಯವಾಡಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ಒಂದು ವಿಕೆಟ್‌ನಿಂದ ಸೋಲು ಕಂಡಿತ್ತು.

ಯುಎಇ ವಿರುದ್ಧ ಸೋತಿದ್ದ ಪಾಕಿಸ್ತಾನ, ನಂತರ ಭಾರತವನ್ನು ಮಣಿಸುವ ಮೂಲಕ ಗ್ರೂಪ್ 'ಸಿ'ಯಲ್ಲಿ ಎರಡು ಪಂದ್ಯಗಳಿಂದ ಎರಡು ಅಂಕ ಗಳಿಸಿ ಅಗ್ರಸ್ಥಾನಕ್ಕೇರಿತು. ಭಾರತ ಯಾವುದೇ ಅಂಕ ಗಳಿಸದೆ ಗುಂಪಿನ ಕೊನೆಯ ಸ್ಥಾನದಲ್ಲಿತ್ತು. ಈ ಅಂಶವನ್ನೂ ನೆಟ್ಟಿಗರು ಪ್ರಧಾನಿ ಪೋಸ್ಟ್‌ಗೆ ಪ್ರತಿಕ್ರಿಯಿಸುವಾಗ ಪ್ರಸ್ತಾಪಿಸಿದರು.