IND vs NZ ಟಿ20ಐ ಸರಣಿಯಲ್ಲಿ ಕುಲ್ದೀಪ್, ವರುಣ್ಗೆ ಚಾನ್ಸ್ ನೀಡದೇ ಇರಲು ಕಾರಣ ತಿಳಿಸಿದ ಸ್ಪಿನ್ ಕೋಚ್!
ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿಯ ಭಾರತ ತಂಡದಲ್ಲಿ ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ, ಈ ಇಬ್ಬರಿಗೂ ಇನ್ನೂ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶವನ್ನು ಕಲ್ಪಿಲಾಗಿಲ್ಲ. ಈ ಬಗ್ಗೆ ಸ್ಪಿನ್ ಕೋಚ್ ಸಾಯಿರಾಜ್ ಬಹುತುಲೆ ಅವರು ಸ್ಪಷ್ಟತೆ ನೀಡಿದ್ದಾರೆ.
ಕುಲ್ದೀಪ್, ವರುಣ್ ಬಗ್ಗೆ ಸ್ಪಿನ್ ಕೋಚ್ ಪ್ರತಿಕ್ರಿಯೆ. -
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs NZ) ಭಾರತ ತಂಡದಲ್ಲಿ ಕುಲ್ದೀಪ್ ಯಾದವ್ (Kuldeep yadav) ಹಾಗೂ ವರುಣ್ ಚಕವರ್ತಿ (Varun Chakravarthy) ಪೂರ್ಣ ಪ್ರಮಾಣದ ಸ್ಪಿನ್ನರ್ಗಳಾಗಿ ಸ್ಥಾನವನ್ನು ಪಡೆದಿದ್ದಾರೆ. ಆದರೂ ಅವರಿಗೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಿಯೂ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಟೀಮ್ ಇಂಡಿಯಾ ಸ್ಪಿನ್ ಕೋಚ್ ಸಾಯಿರಾಜ್ ಬಹುತುಲೆ ಅವರು ಸ್ಪಷ್ಟತೆಯನ್ನು ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಈಡನ್ ಪಾರ್ಕ್ನಲ್ಲಿ ನಡೆದಿದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ, ಎದುರಾಳಿ ಕಿವೀಸ್ಗೆ 259 ರನ್ಗಳನ್ನು ನೀಡಿತ್ತು. ಭಾರತದ ಅರ್ಷದೀಪ್ ಅವರು 9ರ ಸರಾಸರಿಯಲ್ಲಿ ರನ್ ನೀಡಿದ್ದು ಬಿಟ್ಟರೆ ಇನ್ನುಳಿದ ಎಲ್ಲಾ ಬೌಲರ್ಗಳು 12ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಈ ವೇಳೆ ಪೂರ್ಣ ಪ್ರಮಾಣದ ಸ್ಪಿನ್ನರ್ಗಳನ್ನು ಆಡಿಸಬೇಕಾಗಿತ್ತೆಂವ ಭಾವನೆ ಎಲ್ಲರಲ್ಲಿಯೂ ಹುಟ್ಟಿತ್ತು. ಅಂದ ಹಾಗೆ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ 172 ರನ್ಗಳಿಗೆ ಸೀಮಿತವಾಗಿತ್ತು ಹಾಗೂ 87 ರನ್ಗಳಿಂದ ಸೋಲು ಅನುಭವಿಸಿತ್ತು.
ಈ ಪಂದ್ಯದ ಸೋಲಿನ ಹೊರತಾಗಿಯೂ ಆರಂಭಿಕ ಮೂರೂ ಪಂದ್ಯಗಳಲ್ಲಿನ ಗೆಲುವಿನ ಆಧಾರದ ಮೇಲೆ ಟೀಮ್ ಇಂಡಿಯಾ ಈಗಾಗಲೇ ಟಿ20ಐ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ನಾಲ್ಕನೇ ಟಿ20ಐ ಪಂದ್ಯದ ಬಳಿಕ ಮಾತನಾಡಿದ ಸ್ಪಿನ್ ಕೋಚ್ ಸಾಯಿರಾಜ್ ಬಹುತುಲೆ ಅವರು, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಅವರ ಆಯ್ಕೆಯ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.
IND vs NZ: ವೈಫಲ್ಯದ ಹೊರತಾಗಿಯೂ ಭುವನೇಶ್ವರ್ ಕುಮಾರ್ಗೆ ಅಂಬಾಟಿ ರಾಯುಡು ಬೆಂಬಲ!
"ಅವರು (ವರುಣ್, ಕುಲ್ದೀಪ್) ಆಡುವುದಕ್ಕೆ ಸಂಪೂರ್ಣ ಸಿದ್ಧರಾಗಿದ್ದಾರೆ. ಆದರೆ, ತಂಡದ ಸಂಯೋಜನೆ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಕೆಲವೊಮ್ಮೆ ಅವರಿಗೆ ಆಡುವ ಅವಕಾಶ ಸಿಗದೇ ಇರಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ವಿಚಾರ ಅವರಿಗೆ ಚೆನ್ನಾಗಿ ತಿಳಿದಿದೆ," ಎಂದು ಬಹುತುಲೆ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
"ಅದೇ ಸಮಯದಲ್ಲಿ, ಅವರು ತೆರೆಮರೆಯಲ್ಲಿ ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ತಂಡಕ್ಕೆ ಅವರ ಅಗತ್ಯವಿದ್ದಾಗಲೆಲ್ಲಾ ಆಡಲು ಸಿದ್ಧರಾಗಿರುತ್ತಾರೆ. ನನ್ನ ಪ್ರಕಾರ, ಅವರಿಗೆ ಅವಕಾಶ ನೀಡುವ ವಿಚಾರವಷ್ಟೇ ಇಲ್ಲಿ ಮುಖ್ಯವಾಗಿದೆ." ಎಂದರು.
ಮುಂಬರುವ ಅಂತಿಮ ಟಿ20 ಪಂದ್ಯ ಅಥವಾ ಮುಂದಿನ ಸರಣಿಗಳಲ್ಲಿ ಈ ಇಬ್ಬರು ಆಟಗಾರರಿಗೆ ಆಡುವ ಅವಕಾಶ ಸಿಗಬಹುದು ಎಂಬ ಭರವಸೆಯನ್ನು ಬಹುತುಲೆ ವ್ಯಕ್ತಪಡಿಸಿದರು. ಕುಲ್ದೀಪ್ ಯಾದವ್ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರೆ, ವರುಣ್ ಚಕ್ರವರ್ತಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿಲ್ಲ.
"ಮುಂದಿನ ಪಂದ್ಯದಲ್ಲಿ ಅಥವಾ ಮುಂಬರುವ ಏಕದಿನ ಸರಣಿಗಳಲ್ಲಿ ಅವರಿಗೆ ಅವಕಾಶ ಸಿಗಬಹುದು ಎಂದು ಆಶಿಸುತ್ತೇನೆ," ಎಂದು ಅವರು ಹೇಳಿದರು.
IND vs NZ 4th T20I: ಭಾರತಕ್ಕೆ ನಿರಾಶೆ, ಗ್ಲೆನ್ ಫಿಲಿಪ್ಸ್ ಶತಕದ ಅಬ್ಬರದಿಂದ ನ್ಯೂಜಿಲೆಂಡ್ಗೆ ಭರ್ಜರಿ ಜಯ!
ಸ್ಪಿನ್ ಬೌಲರ್ಗಳ ಪಾತ್ರದ ಬಗ್ಗೆ ಬಹುತುಲೆ ವಿವರಣೆ
"ನಮ್ಮ ಬೌಲರ್ಗಳು ಆಕ್ರಮಣಕಾರಿಯಾಗಿ ಬೌಲ್ ಮಾಡುವಂತೆ ನಾವು ಪ್ರೋತ್ಸಾಹಿಸುತ್ತೇವೆ. ಕೆಲವೊಮ್ಮೆ ರಕ್ಷಣಾತ್ಮಕವಾಗಿ ಬೌಲ್ ಮಾಡುವುದು ಕೂಡ ಆಕ್ರಮಣಕಾರಿ ತಂತ್ರವಾಗಬಹುದು. ನನ್ನ ಮಾತಿನ ಅರ್ಥ ನಿಮಗೆ ತಿಳಿದಿರಬಹುದು. ಪಂದ್ಯದಲ್ಲಿ ಎದುರಾಗುವ ವಿಭಿನ್ನ ಪರಿಸ್ಥಿತಿಗಳನ್ನು ನಾವು ನಿಭಾಯಿಸಬೇಕಾಗುತ್ತದೆ. ಅಕ್ಷರ್ ಪಟೇಲ್ ಪವರ್ಪ್ಲೇನಲ್ಲೂ ಬೌಲ್ ಮಾಡಬಲ್ಲರು. ಅವರಿಗೆ ಯಾವುದೇ ಓವರ್ ನೀಡಿದರೂ ಅದನ್ನು ಅತ್ಯುತ್ತಮವಾಗಿ ಕಾರ್ಯಗತಗೊಳಿಸುತ್ತಾರೆ," ಎಂದು ಬಹುತುಲೆ ತಿಳಿಸಿದ್ದಾರೆ.
"ನಮ್ಮ ತಂಡದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಬ್ಬರೂ ಇನಿಂಗ್ಸ್ನ ಯಾವುದೇ ಹಂತದಲ್ಲಿ ಬೌಲ್ ಮಾಡಲು ಸಿದ್ಧರಾಗಿದ್ದಾರೆ. ಇಂತಹ ಪರಿಸ್ಥಿತಿಗಳಲ್ಲಿ ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಆದರೆ, ಅವರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬುದರ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ," ಎಂದು ಸಾಯಿರಾಜ್ ಬಹುತುಲೆ ಅವರು ಹೇಳಿದ್ದಾರೆ.