ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೆಂಡು ವಿರೂಪಗೊಳಿಸುವ (Ball Tampering) ವಿಚಾರವಾಗಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಸ್ಫೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಅವಧಿಯಲ್ಲಿ ಪಾಕಿಸ್ತಾನದ ಆಟಗಾರರು ಕೂಡ ಬಾಟಲ್ ಕ್ಯಾಪ್ಗಳನ್ನು ಬಳಸಿ ಚೆಂಡಿನ ಸ್ವರೂಪ ಬದಲಿಸುತ್ತಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಗತ್ಯ ಬಿದ್ದಾಗ ಚೆಂಡುಗಳನ್ನೇ ಬದಲಾಯಿಸುತ್ತಿದ್ದೆವು ಎಂದು ಅಚ್ಚರಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ 2018ರ ಕುಖ್ಯಾತ ಸ್ಯಾಂಡ್ಪೇಪರ್ ವಿವಾದ ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಅಖ್ತರ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರರಿಂದ ಹೊಸ ಸಂಗತಿಗಳು ಬಹಿರಂಗವಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅಖ್ತರ್, ಈ ವಿವಾದವನ್ನು ಇನ್ನು ಮುಂದುವರಿಸದೆ ಮುಕ್ತಾಯಗೊಳಿಸುವಂತೆ ಕ್ರಿಕೆಟ್ ಜಗತ್ತಿಗೆ ಮನವಿ ಮಾಡಿದ್ದಾರೆ.
ವಿಸ್ಡನ್ ಸ್ಕೂಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, "ಸ್ಯಾಂಡ್ಪೇಪರ್ ವಿವಾದವನ್ನು ಬಿಟ್ಟುಬಿಡಿ. ಇದಕ್ಕಾಗಿ ಯಾಕೆ ಇಷ್ಟೊಂದು ದೊಡ್ಡ ವಿವಾದ ಸೃಷ್ಟಿಸುತ್ತಿದ್ದೀರಿ? ಇದರಿಂದ ಅವರ ಕ್ರಿಕೆಟ್ಗೆ ಹಾನಿಯಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ನಮ್ಮ ಕ್ರಿಕೆಟ್ಗೂ ಇಂತಹ ಘಟನೆಗಳಿಂದ ಹಾನಿಯಾಗಿದೆ. ನಾವು ಸ್ಯಾಂಡ್ಪೇಪರ್ ಬಳಸುತ್ತಿರಲಿಲ್ಲ, ಬದಲಿಗೆ ಬಾಟಲ್ ಕ್ಯಾಪ್ಗಳನ್ನು ಬಳಸುತ್ತಿದ್ದೆವು. ಚೆಂಡುಗಳನ್ನೂ ಬದಲಾಯಿಸುತ್ತಿದ್ದೆವು," ಎಂದು ಹೇಳಿದ್ದಾರೆ.
ಚೆಂಡು ವಿರೂಪ ಪ್ರಕರಣ; ಸ್ವತಂತ್ರ ವೇದಿಕೆ ಸ್ಥಾಪಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರ
ಮ್ಯಾಚ್ ಫಿಕ್ಸಿಂಗ್ ವಿವಾದವನ್ನೂ ನೆನಪಿಸಿಕೊಂಡ ಅಖ್ತರ್
ಉಸ್ಮಾನ್ ಖವಾಜಾ ಈ ವಿಚಾರವನ್ನು ಬಹಿರಂಗಪಡಿಸಿರುವ ಸಮಯದ ಬಗ್ಗೆಯೂ ಅಖ್ತರ್ ಪ್ರಶ್ನೆ ಎತ್ತಿದ್ದಾರೆ. ಆದರೆ ಸತ್ಯವನ್ನು ಜನರ ಮುಂದೆ ತರುವುದನ್ನು ಅವರು ಬೆಂಬಲಿಸಿದ್ದಾರೆ. ತಮ್ಮ ಕ್ರಿಕೆಟ್ ದಿನಗಳನ್ನು ನೆನಪಿಸಿಕೊಂಡ ಅಖ್ತರ್, ಹಿಂದಿನ ದಿನಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನುಮಾನದ ವಾತಾವರಣ ಸೃಷ್ಟಿಸಿದ್ದವು ಎಂದು ಹೇಳಿದ್ದಾರೆ.
"ನನ್ನ ಹಳೆಯ ಸಹ ಆಟಗಾರರ ಬಗ್ಗೆ ಹೇಳಲು ನನ್ನ ಬಳಿ ಸಾಕಷ್ಟು ವಿಚಾರಗಳಿವೆ. ಆದರೆ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ನಾನು ಬಯಸುವುದಿಲ್ಲ. ಒಂದು ಕಾಲದಲ್ಲಿ ನಾನು ಮೈದಾನದಲ್ಲಿ 22 ಆಟಗಾರರ ವಿರುದ್ಧ ಆಡುತ್ತಿದ್ದೇನೆ ಎಂದು ಭಾವಿಸುತ್ತಿದ್ದೆ. ಏಕೆಂದರೆ ನಾನು ಎದುರಿಸುತ್ತಿದ್ದ ಪ್ರತಿಯೊಬ್ಬ ಆಟಗಾರನೂ ಮ್ಯಾಚ್ ಫಿಕ್ಸಿಂಗ್ ಅನುಮಾನದ ಅಡಿಯಲ್ಲಿದ್ದರು. ಯಾರನ್ನು ನಂಬಬೇಕು ಎಂಬುದೇ ನನಗೆ ತಿಳಿಯುತ್ತಿರಲಿಲ್ಲ," ಎಂದು ಅಖ್ತರ್ ತಿಳಿಸಿದ್ದಾರೆ.
ಮೂವರು ಆಟಗಾರರಿಂದ ಮಾತ್ರ ಇದು ಸಾಧ್ಯವಿಲ್ಲ ಎಂದ ಅಖ್ತರ್
ಸ್ಯಾಂಡ್ಪೇಪರ್ ಬಳಸಿ ಚೆಂಡಿನ ಸ್ವರೂಪ ಬದಲಿಸುವಂತಹ ಕಾರ್ಯಾಚರಣೆ ಕೇವಲ ಬೆರಳೆಣಿಕೆಯ ಆಟಗಾರರಿಗೆ ಮಾತ್ರ ಸೀಮಿತವಾಗಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನೂ ಅಖ್ತರ್ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಕ್ಯಾಮರನ್ ಬ್ಯಾಂಕ್ರಾಫ್ಟ್ ಕೂಡ ಈ ವಿವಾದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನ್ಯೂಲ್ಯಾಂಡ್ಸ್ ಟೆಸ್ಟ್ನಲ್ಲಿ ಸ್ಯಾಂಡ್ಪೇಪರ್ ಬಳಸಿ ಸಿಕ್ಕಿಬಿದ್ದಿದ್ದ ಬ್ಯಾಂಕ್ರಾಫ್ಟ್, ಈ ಕಾರ್ಯಾಚರಣೆಯ ಬಗ್ಗೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ತಮ್ಮನ್ನು ಹೊರತುಪಡಿಸಿ ತಂಡದ ಇತರ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗೂ ಮಾಹಿತಿ ಇತ್ತು ಎಂದು ಆರೋಪಿಸಿದ್ದಾರೆ.
ಬ್ಯಾಂಕ್ರಾಫ್ಟ್ ಸತ್ಯವನ್ನು ಬಹಿರಂಗಪಡಿಸಿರುವುದಕ್ಕೆ ಉಸ್ಮಾನ್ ಖವಾಜಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸುಮಾರು ಎಂಟು ವರ್ಷಗಳ ಹಿಂದಿನ ಸ್ಯಾಂಡ್ಪೇಪರ್ ವಿವಾದ ಇದೀಗ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.