ನವದೆಹಲಿ: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn maxwell), ತಮ್ಮ ಮಾಜಿ ಸಹ ಆಟಗಾರ ಬ್ರಾಡ್ ಹಾಡ್ಜ್ ಅವರನ್ನು ‘ಅಂಡರ್‌ರೇಟೆಡ್’(ಅರ್ಹತೆಗೆ ತಕ್ಕಷ್ಟು ಮನ್ನಣೆ ಸಿಗದ) ಕ್ರಿಕೆಟಿಗ ಎಂದು ಬಣ್ಣಿಸಿದ್ದಾರೆ. ತಾವು ಬಾಲ್ಯದಲ್ಲಿ ಹಾಡ್ಜ್ (Brad Hodge) ಅವರ ಪೋಸ್ಟರ್‌ಗಳನ್ನು ಗೋಡೆಯ ಮೇಲೆ ಹಾಕಿಕೊಂಡಿದ್ದೆ ಎಂದು ಮ್ಯಾಕ್ಸ್‌ವೆಲ್ ರಿವೀಲ್ ಮಾಡಿದ್ದಾರೆ. ಕೀಪಿಂಗ್ ಇಟ್ ಕ್ರಿಕೆಟ್ʼ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮ್ಯಾಕ್ಸ್‌ವೆಲ್, ಹಾಡ್ಜ್ ಅವರು ಬೇರೆ ಕಾಲಘಟ್ಟದಲ್ಲಿ ಜನಿಸಿದ್ದರೆ ಆಸ್ಟ್ರೇಲಿಯಾ ಪರ ಇನ್ನಷ್ಟು ಟೆಸ್ಟ್ ಪಂದ್ಯಗಳನ್ನು ಆಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
“ಹಾಡ್ಜ್ ಒಬ್ಬ ಅದ್ಭುತ ಸೂಪರ್‌ಸ್ಟಾರ್. ನಾನು ಬಾಲ್ಯದಲ್ಲಿ ಅವರ ಪೋಸ್ಟರ್‌ಗಳನ್ನು ನನ್ನ ಕೋಣೆಯ ಗೋಡೆಯ ಮೇಲೆ ಹಾಕಿಕೊಂಡಿದ್ದೆ. ಅವರೊಂದಿಗೆ ರಾಜ್ಯ ಕ್ರಿಕೆಟ್ ಆಡುವ ಅವಕಾಶವೂ ನನಗೆ ಸಿಕ್ಕಿತ್ತು. ಅವರನ್ನು ನೇರವಾಗಿ ಮೈದಾನದಲ್ಲಿ ಆಡುವುದನ್ನು ನೋಡುವುದು ಅದ್ಭುತ ಅನುಭವವಾಗಿತ್ತು,” ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
“ಅವರು ಆಡಿದಕ್ಕಿಂತ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಬೇಕಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿಶ್ವದರ್ಜೆಯ ಆ ಸಾಲಿನಲ್ಲಿ ಅವರು ಎಲ್ಲಿ ಸ್ಥಾನ ಪಡೆಯುತ್ತಿದ್ದರು ಎಂಬುದನ್ನು ಚರ್ಚಿಸಬಹುದು. ಆದರೆ ಆ ಕಾಲದಲ್ಲಿ ತಂಡದಲ್ಲಿ ಉಳಿಯಬೇಕಾದರೆ ಸರಾಸರಿ 50ಕ್ಕಿಂತ ಹೆಚ್ಚು ಇರಬೇಕಾಗಿತ್ತು. ಅವರು ಒಂದು ಅಥವಾ ಎರಡು ತಲೆಮಾರುಗಳ ನಂತರ ಬಂದಿದ್ದರೆ, ಬಹುಶಃ 120 ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದರು. ಅವರು ನಿಜಕ್ಕೂ ಸೂಪರ್‌ಸ್ಟಾರ್ ಆಗಿದ್ದರು,” ಎಂದು ಸ್ಟಾರ್ ಆಲ್‌ರೌಂಡರ್ ಶ್ಲಾಘಿಸಿದ್ದಾರೆ.
ವಿಕ್ಟೋರಿಯಾ ಮೂಲದ ಹಾಡ್ಜ್ ತಮ್ಮ ಕಾಲದ ಅತ್ಯುತ್ತಮ ರೆಡ್-ಬಾಲ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರೂ, ಆಸ್ಟ್ರೇಲಿಯಾ ಪರ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ಆರು ಟೆಸ್ಟ್‌ಗಳ 11 ಇನಿಂಗ್ಸ್‌ಗಳಲ್ಲಿ ಅವರು 55.88ರ ಸರಾಸರಿಯಲ್ಲಿ 503 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದ್ದು, ಅವರ ಗರಿಷ್ಠ ಸ್ಕೋರ್ 203 ರನ್* ಆಗಿತ್ತು.
ನಕಲಿ ಜನನ ಪ್ರಮಾಣ ಪತ್ರ: ಭಾರತ ಅಂಡರ್-19 ತಂಡದ ರೋಹಿತ್ ಯಾದವ್‌ಗೆ 2 ವರ್ಷ ನಿಷೇಧ!
ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಆಡಂ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್, ಮೈಕಲ್ ಕ್ಲಾರ್ಕ್, ಮೈಕೆಲ್ ಹಸ್ಸಿ, ಜಸ್ಟಿನ್ ಲ್ಯಾಂಗರ್ ಮತ್ತು ಮ್ಯಾಥ್ಯೂ ಹೇಡನ್ ಅವರಂತಹ ದಿಗ್ಗಜರು ಇದ್ದ ಕಾರಣ ಹಾಡ್ಜ್‌ಗೆ ತಂಡದಲ್ಲಿ ನಿಯಮಿತ ಸ್ಥಾನ ಪಡೆಯುವುದು ಕಷ್ಟವಾಗಿತ್ತು.
ಏಕದಿನ ಕ್ರಿಕೆಟ್‌ನಲ್ಲಿ 25 ಪಂದ್ಯಗಳ 21 ಇನಿಂಗ್ಸ್‌ಗಳಲ್ಲಿ ಹಾಡ್ಜ್ 30.26ರ ಸರಾಸರಿಯಲ್ಲಿ 575 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳು ಸೇರಿವೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಪಂದ್ಯಗಳ 11 ಇನಿಂಗ್ಸ್‌ಗಳಲ್ಲಿ 26.14ರ ಸರಾಸರಿ ಮತ್ತು 127.08ರ ಸ್ಟ್ರೈಕ್‌ರೇಟ್‌ನಲ್ಲಿ 183 ರನ್ ಗಳಿಸಿದ್ದರು. ಅವರ ಗರಿಷ್ಠ ಸ್ಕೋರ್ 36 ರನ್.
ʻನಿಮ್ಮ ನೆಚ್ಚಿನ ಆಟಗಾರರಿಗೆ ಚಾನ್ಸ್ ಕೊಟ್ಟಿದ್ದೀರಿʼ: ಗೌತಮ್ ಗಂಭೀರ್ ವಿರುದ್ಧ ಎಸ್ ಬದ್ರಿನಾಥ್ ಕಿಡಿ!
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬ್ರಾಡ್ ಹಾಡ್ಜ್ 223 ಪಂದ್ಯಗಳ 388 ಇನಿಂಗ್ಸ್‌ಗಳಲ್ಲಿ 48.81ರ ಸರಾಸರಿಯಲ್ಲಿ 17,084 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 64 ಅರ್ಧಶತಕಗಳು ಸೇರಿದ್ದು, ಅವರ ಗರಿಷ್ಠ ಸ್ಕೋರ್ 302 ರನ್* ಆಗಿದೆ. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಹಾಡ್ಜ್ 251 ಪಂದ್ಯಗಳ 241 ಇನಿಂಗ್ಸ್‌ಗಳಲ್ಲಿ 43.25ರ ಸರಾಸರಿಯಲ್ಲಿ 9,127 ರನ್ ಗಳಿಸಿದ್ದಾರೆ. ಇದರಲ್ಲಿ 29 ಶತಕಗಳು ಮತ್ತು 38 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ಸ್ಕೋರ್ 164 ರನ್. ಇನ್ನು ಟಿ20 ಕ್ರಿಕೆಟ್‌ನಲ್ಲಿ 277 ಪಂದ್ಯಗಳ 261 ಇನಿಂಗ್ಸ್‌ಗಳಲ್ಲಿ 36.84ರ ಸರಾಸರಿಯಲ್ಲಿ 7,842 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 48 ಅರ್ಧಶತಕಗಳು ಸೇರಿದ್ದು, ಅವರ ಸ್ಟ್ರೈಕ್‌ರೇಟ್ 131.28 ಆಗಿದೆ.