ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ. ಆದರೆ, ಜನವರಿ 11 ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs NZ) ಇನ್ನೂ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸುವುದು ಬಾಕಿ ಇದೆ. ವರದಿಗಳ ಪ್ರಕಾರ ಜನವರಿ ಮೂರರಂದು ಬಿಸಿಸಿಐ ಭಾರತ ಏಕದಿನ (India's ODI Squad) ತಂಡವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ. ಮೊದಲನೇ ಪಂದ್ಯ ವಡೋದರ, ಎರಡನೇ ಪಂದ್ಯ ರಾಜ್‌ಕೋಟ್ ಹಾಗೂ ಮೂರನೇ ಹಾಗೂ ಕೊನೆಯ ಪಂದ್ಯ 18 ರಂದು ಇಂದೋರ್‌ನಲ್ಲಿ ನಡೆಯಲಿದೆ.
ಶುಭಮನ್ ಗಿಲ್ ಅವರು ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಹಾಗೂ ಅವರು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನು ಉಪ ನಾಯಕ ಶ್ರೇಯಸ್ ಅಯ್ಯರ್ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ, ಹಾಗಾಗಿ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
VHT 2025-26: ನ್ಯೂಜಿಲೆಂಡ್ ಏಕದಿನ ಸರಣಿಗೂ ಮುನ್ನ ಭರ್ಜರಿ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್!
ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಇಲ್ಲ?
ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರೀತ್ ಬುಮ್ರಾ ಕೀ ಆಟಗಾರರಾಗಿದ್ದಾರೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಏಕದಿನ ಸರಣಿಯಲ್ಲಿ ಈ ಇಬ್ಬರಿಗೂ ವಿಶ್ರಾಂತಿ ನೀಡಲಾಗುತ್ತಿದೆ. ಇನ್ನು ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತ ಏಕದಿನ ತಂಡದಲ್ಲಿ ಮುಂದುವರಿಯಲಿದ್ದಾರೆ. ಈ ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು.
ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವುದು ಖಚಿತ ಆದರೆ, ಎರಡನೇ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಸ್ಥಾನಕ್ಕೆ ಯಾರನ್ನು ಬಿಸಿಸಿಐ ಪರಿಗಣಿಸಲಿದೆ ಎಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ. ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಧ್ರುವ್ ಜುರೆಲ್ ಅಥವಾ ಭಾರತ ಟಿ20ಐ ತಂಡಕ್ಕೆ ಮರಳಿರುವ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಪರಿಗಣಿಸಬಹುದು. ಇವರ ಜೊತೆಗೆ ವೇಗದ ಬೌಲರ್ ಮೊಹಮ್ಮದ್ ಶಮಿಗೂ ಅವಕಾಶವನ್ನು ನೀಡಬಹುದು.
VHT 2025-26: ಗೋವಾ ಎದುರು ಕೇವಲ 75 ಎಸೆತಗಳಲ್ಲಿ 157 ರನ್ ಸಿಡಿಸಿದ ಸರ್ಫರಾಝ್ ಖಾನ್!
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್) , ರಿಷಭ್ ಪಂತ್/ಧ್ರುವ್ ಜುರೆಲ್/ಇಶಾನ್ ಕಿಶನ್ (ವಿ.ಕೀ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಪ್ರಸಿಧ್ ಕೃಷ್ಣ/ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್