ನವದೆಹಲಿ: ಕೆಎಲ್ ರಾಹುಲ್ (KL Rahul) ಅವರ ದಾಖಲೆಯ ಶತಕದ ಹೊರತಾಗಿಯೂ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಪಂಜಾಬ್ ಕಿಂಗ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಆರನೇ ಗೆಲುವಿನ ಮೂಲಕ ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು. ಇನ್ನು ದೊಡ್ಡ ಮೊತ್ತದ ಗುರಿ ನೀಡಿದರೂ ನಿರ್ಣಾಯಕ ಕ್ಯಾಚ್‌ಗಳನ್ನು ಕೈಚೆಲ್ಲಿದರ ಪರಿಣಾಮವಾಗಿ ಡಿಸಿ ಸೋಲು ಅನುಭವಿಸಿತು.
ಶನಿವಾರ ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, ಪ್ರಭ್‌ಸಿಮ್ರಾನ್ ಸಿಂಗ್ (76 ರನ್) ಹಾಗೂ ಶ್ರೇಯಸ್ ಅಯ್ಯರ್ (71 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ 18.5 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತವನ್ನು ಚೇಸ್ ಮಾಡಿದ ಮೊದಲ ತಂಡ ಎಂಬ ದಾಖಲೆಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಬರೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಅನುಭವಿಸಿದರೂ ದಾಖಲೆಯ 152 ರನ್‌ಗಳ ಇನಿಂಗ್ಸ್ ಆಡಿದ ಕೆಎಲ್ ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
DC vs PBKS: ಫೀಲ್ಡಿಂಗ್ ವೇಳೆ ಲುಂಗಿ ಎನ್‌ಗಿಡಿಗೆ ಗಂಭೀರ ಗಾಯ, ಮೈದಾನಕ್ಕೆ ಆಗಮಿಸಿದ ಆಂಬ್ಯುಲೆನ್ಸ್!
ಪಂಜಾಬ್‌ಗೆ ಭರ್ಜರಿ ಆರಂಭ
ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಈ ಇಬ್ಬರೂ ಪವರ್‌ಪ್ಲೇನಲ್ಲಿ 116 ರನ್‌ಗಳನ್ನು ಸಿಡಿಸಿದ್ದರು. ಅಲ್ಲದೆ 7 ಓವರ್‌ಗಳ ಅಂತ್ಯಕೆ ಈ ಜೋಡಿ 127 ರನ್‌ಗಳ ಜೊತೆಯಾಟವನ್ನು ಆಡಿ ತಮ್ಮ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿತ್ತು. ಪ್ರಿಯಾಂಶ್ ಆರ್ಯ 17 ಎಸೆತಗಳಲ್ಲಿ ಸ್ಪೋಟಕ 43 ರನ್ ಸಿಡಿಸಿದ ಬಳಿಕ ವಿಕೆಟ್ ಒಪ್ಪಿಸಿದ್ದರು.
ಪ್ರಭ್‌ಸಿಮ್ರನ್ ಸಿಂಗ್ ಸ್ಪೋಟಕ ಅರ್ಧಶತಕ
ನಂತರ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಪ್ರಭ್‌ಸಿಮ್ರಾನ್, ಡೆಲ್ಲಿ ಬೌಲರ್‌ಗಳ ಎದೆ ನಡುಗಿಸಿದರು. ಆರನೇ ಓವರ್‌ನಲ್ಲಿ ಮುಖೇಶ್ ಕುಮಾರ್ ಎಲ್ಲಾ 6 ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸಿದ್ದು ಎಲ್ಲರ ಗಮನ ಸೆಳೆಯಿತು. ಇವರು ಆಡಿದ 26 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 76 ರನ್ ಚಚ್ಚಿ ಪಂಜಾಬ್‌ನ ಗೆಲುವಿನ ಹಾದಿಯನ್ನು ಸುಗಮಗೊಳಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಶ್ರೇಯಸ್ ಅಯ್ಯರ್
ಮಧ್ಯಮ ಕ್ರಮಾಂಕದಲ್ಲಿ ತಂಡದ ಜವಾಬ್ದಾರಿಯನ್ನು ಹೊತ್ತ ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 71 ರನ್ ಗಳಿಸಿ ತಂಡವನ್ನು ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲ್ಲಿಸಿದರು. ಅಂದ ಹಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಗೆಲ್ಲುವ ಅವಕಾಶವಿತ್ತು. ಆದರೆ, ಕೆಲ ನಿರ್ಣಾಯಕ ಸನ್ನಿವೇಶಗಳಲ್ಲಿ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದು ಭಾರಿ ಹಿನ್ನಡೆಯನ್ನು ತಂದಿತ್ತು. ಅದರಲ್ಲಿಯೂ ವಿಶೇಷವಾಗಿ ಶ್ರೇಯಸ್ ಅಯ್ಯರ್ ಅವರ ಎರಡು ಕ್ಯಾಚ್‌ಗಳನ್ನು ಶ್ರೇಯಸ್ ಅಯ್ಯರ್ ಬಿಟ್ಟಿಟ್ಟು ಡೆಲ್ಲಿ ಪಾಲಿಗೆ ಅತ್ಯಂತ ದುಬಾರಿಯಾಯಿತು.
ದಾಖಲೆಯ ಇನಿಂಗ್ಸ್ ಆಡಿದ ಕೆಎಲ್ ರಾಹುಲ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಕೆಎಲ್ ರಾಹುಲ್ ಹಾಗೂ ನಿತೀಶ್ ರಾಣಾ. ಈ ಇಬ್ಬರೂ ಎರಡನೇ ವಿಕೆಟ್‌ಗೆ 220 ರನ್‌ಗಳ ದಾಖಲೆಯ ಜೊತೆಯಾಟವನ್ನು ಆಡಿತ್ತು. ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 20 ಓವರ್‌ಗಳನ್ನು ಪೂರ್ಣಗೊಳಿಸಿದ ಕೆಎಲ್ ರಾಹುಲ್, 67 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 152 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಬರೆದಿದ್ದಾರೆ. ಅಂತಿಮವಾಗಿ ಡೆಲ್ಲಿ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 264 ರನ್‌ಗಳನ್ನು ದಾಖಲಿಸಿತು.