ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs PBKS: ಫೀಲ್ಡಿಂಗ್‌ ವೇಳೆ ಲುಂಗಿ ಎನ್‌ಗಿಡಿಗೆ ಗಂಭೀರ ಗಾಯ, ಮೈದಾನಕ್ಕೆ ಆಗಮಿಸಿದ ಆಂಬ್ಯುಲೆನ್ಸ್‌!

DC vs PBKS: ಪಂಜಾಬ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ಲುಂಗಿ ಎನ್‌ಗಿಡಿ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಇದರ ಪರಿಣಾಮ 15 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಲಾಗಿತ್ತು. ನಂತರ ಆಂಬ್ಯುಲೆನ್ಸ್‌ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

DC vs PBKS: ಫೀಲ್ಡಿಂಗ್‌ ವೇಳೆ ಲುಂಗಿ ಎನ್‌ಗಿಡಿಗೆ ಗಂಭೀರ ಗಾಯ!

ಫೀಲ್ಡಿಂಗ್‌ ವೇಳೆ ಗಂಭೀರ ಗಾಯಕ್ಕೆ ತುತ್ತಾದ ಲುಂಗಿ ಎನ್‌ಗಿಡಿ. -

Profile
Ramesh Kote Apr 25, 2026 7:04 PM

ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ (DC vs PBKS) ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸಿದವು. ಆದರೆ, ಈ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಡೆಲ್ಲಿ ವೇಗಿ ಲುಂಗಿ ಎನ್ಗಿಡಿ ಅವರು ಗಂಭೀರ ಗಾಯಕ್ಕೆ ತುತ್ತಾದರು. ಇದರಿಂದಾಗಿ ಅಂಗಣದಲ್ಲಿ ಪಂದ್ಯವನ್ನು 15 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು ಹಾಗೂ ಕೆಲ ಕಾಲ ಆಟಗಾರರಲ್ಲಿ ಆತಂಕ ಉಂಟಾಗಿತ್ತು. ಅಂತಿಮವಾಗಿ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಮೂರನೇ ಓವರ್ ಅನ್ನು ಬೌಲ್‌ ಮಾಡುತ್ತಿದ್ದರು. ಓವರ್‌ನ ಮೂರನೇ ಎಸೆತದಲ್ಲಿ ಪ್ರಿಯಾಂಶ್ ಆರ್ಯ ದೊಡ್ಡ ಶಾಟ್ ಆಡಿದರು; ಆದಾಗ್ಯೂ, ಅವರು ಚೆಂಡನ್ನು ಸರಿಯಾಗಿ ಟೈಮ್‌ ಮಾಡುವಲ್ಲಿ ವಿಫಲರಾದರು ಮತ್ತು ಚೆಂಡು ಗಾಳಿಯಲ್ಲಿ ಎತ್ತರಕ್ಕೆ ಹಾರಿತು. ಎನ್‌ಗಿಡಿ ಕ್ಯಾಚ್ ಪಡೆಯುವ ಪ್ರಯತ್ನದಲ್ಲಿ ಬ್ಯಾಲೆನ್ಸ್‌ ಕಳೆದುಕೊಂಡ ನೆಲಕ್ಕೆ ಉರುಳಿದರು. ಬೆನ್ನಿನ ಭಾಗ ನೆಲಕ್ಕೆ ತಾಗಿದ ಬಳಿಕ ಅವರು ಹಿಂದಕ್ಕೆ ತಿರುಗುತ್ತಿದ್ದ ವೇಳೆ ತಲೆಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿದರು. ಆಗ ಅವರು ಗಂಭೀರ ಗಾಯಕ್ಕೆ ತುತ್ತಾದರು.

DC vs PBKS: 152 ರನ್‌ ಸಿಡಿಸಿ ಅಭಿಷೇಕ್‌ ಶರ್ಮಾ ದಾಖಲೆ ಮುರಿದ ಕನ್ನಡಿಗ ಕೆಎಲ್‌ ರಾಹುಲ್‌!

ನೆಲಕ್ಕೆ ಉರುಳಿದ ಬಳಿಕ ಅವರು ಮೇಲಕ್ಕೆ ಎದ್ದು ನಿಲ್ಲಲೇ ಇಲ್ಲ. ತಕ್ಷಣ ತಂಡದ ಫಿಸಿಯೊಗಳ ಲುಂಗಿ ಎನ್‌ಗಿಡಿ ಅವರ ಸನಿಹಕ್ಕೆ ಬಂದು ಅವರನ್ನು ತಪಾಸಣೆ ನಡೆಸಿದರು. ನಂತರ ಸ್ಟ್ರೆಚರ್‌ ಮೇಲೆ ಅವರನ್ನು ಮಲಗಿಸಲು ವೈದ್ಯಕೀಯ ಸಿಬ್ಬಂದಿ ಹರ ಸಾಹಸ ಪಡಬೇಕಾಯಿತು. ಅವರ ಗಾಯ ಗಂಭೀರವಾಗಿದೆ ಎಂದು ಮನಗಂಡು ವೈದ್ಯಕೀಯ ತಂಡ, ಆಂಬ್ಯುಲೆನ್ಸ್‌ ಅನ್ನು ಅಂಗಣದ ಒಳಕ್ಕೆ ಕರೆಸಿಕೊಳ್ಳಲಾಯಿತು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.



ಲುಂಗಿ ಎಂಗಿಡಿ ಸ್ಥಾನಕ್ಕೆ ಬಂದ ದುಷ್ಮಾಂತ ಚಮೀರಾ

ಲುಂಗಿ ಎನ್‌ಗಿಡಿ ಆಸ್ಪತ್ರೆಗೆ ಸೇರಿದ್ದರಿಂದ ಕನ್ಕಷನ್ ಸಬ್‌ಸ್ಟಿಟ್ಯೂಟ್ ಬಳಸಲು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅನುಮತಿ ನೀಡಲಾಯಿತು. ಅವರ ಬದಲಿಗೆ ಶ್ರೀಲಂಕಾದ ವೇಗದ ಬೌಲರ್ ದುಷ್ಮಂತ ಚಮೀರ ಅವರನ್ನು ತಂಡಕ್ಕೆ ಸೇರಿಸಲಾಯಿತು. ಈ ಸೀಸನ್‌ನಲ್ಲಿ ಡೆಲ್ಲಿ ತಂಡದ ಭಾಗವಾಗಿರುವ ಚಮೀರ,ಎನ್‌ಗಿಡಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಬೌಂಡರಿ ಲೈನ್‌ ಸಮೀಪ ವಾರ್ಮ್‌ಅಪ್ ಮಾಡುತ್ತಿರುವುದು ಕಂಡುಬಂದಿತ್ತು.

ಐಪಿಎಲ್ ಆಟದ ನಿಯಮಗಳ ಪ್ರಕಾರ, ಪಂದ್ಯ ನಡೆಯುವ ವೇಳೆ ತಲೆಯ ಅಥವಾ ಕುತ್ತಿಗೆಯ ಗಾಯದಿಂದ ಆಟಗಾರನು ಕನ್ಕಷನ್ ಅಥವಾ ಸಂಶಯಾಸ್ಪದ ಕನ್ಕಷನ್‌ಗೆ ಒಳಗಾದರೆ, ಕನ್ಕಷನ್ ರಿಪ್ಲೇಸ್ಮೆಂಟ್‌ಗೆ ಅನುಮತಿ ನೀಡಲಾಗುತ್ತದೆ.



264 ರನ್‌ಗಳನ್ನು ಕಲೆ ಹಾಕಿದ್ದ ಡೆಲ್ಲಿ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಕೆಎಲ್‌ ರಾಹುಲ್‌ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 2 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳನ್ನು ಗಳಿಸಿತ್ತು. ಆ ಮೂಲಕ ಎದುರಾಳಿ ಪಂಜಾಬ್‌ ಕಿಂಗ್ಸ್‌ಗೆ 265 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌, 15 ಓವರ್‌ಗಳ ಹೊತ್ತಿಗೆ 4 ವಿಕೆಟ್‌ ನಷ್ಟಕ್ಕೆ 203 ರನ್‌ಗಳನ್ನು ಕಲೆ ಹಾಕಿತ್ತು. ಕ್ರೀಸ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಶಶಾಂಕ್‌ ಸಿಂಗ್‌ ಇದ್ದರು.