ತಿರುವನಂತಪುರಂ: ಸ್ಮೃತಿ ಮಂಧಾನಾ (Smriti mandhana) ಹಾಗೂ ಶಫಾಲಿ ವರ್ಮಾ (Shafali Verma) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಭಾರತ ಮಹಿಳಾ ತಂಡ, ನಾಲ್ಕನೇ ಟಿ20ಐ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 30 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಸತತ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ವನಿತೆಯರು ಸರಣಿಯಲ್ಲಿ 4-0 ಮುನ್ನಡೆ ಪಡೆದಿದ್ದಾರೆ. ಆದರೆ, ಸತತ ನಾಲ್ಕೂ ಪಂದ್ಯಗಳನ್ನು ಸೋತ ಪ್ರವಾಸಿ ಶ್ರೀಲಂಕಾ ತಂಡ ಮುಖಭಂಗ ಅನುಭವಿಸಿತು.
ಭಾರತ ನೀಡಿದ್ದ 222 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡಕ್ಕೆ ಆರಂಭಿಕರಾದ ಹಾಸೀನಿ ಪೆರೆರಾ ಹಾಗೂ ನಾಯಕಿ ಚಾಮತಿ ಅಟಪಟ್ಟು ಮೊದಲನೇ ವಿಕೆಟ್‌ಗೆ 59 ರನ್‌ಗಳನ್ನು ಕಲೆ ಹಾಕಿ ಶ್ರೀಲಂಕಾ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, ಹಾಸೀನಿ ಪೆರೆರಾ ಕೇವಲ 20 ಎಸೆತಗಳಲ್ಲಿ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕಿ ಚಾಮರಿ ಅಟಪಟ್ಟು ಸ್ಪೋಟಕ ಬ್ಯಾಟ್ ಮಾಡಿ 37 ಎಸೆತಗಳಲ್ಲಿ 52 ರನ್‌ಗಳನ್ನು ದಾಖಲಿಸಿದ್ದರು. ಆ ಮೂಲಕ ಲಂಕಾ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟು ಔಟ್ ಆದರು.
INDW vs SLW: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 10000 ರನ್ ಗಳಿಸಿದ ಸ್ಮೃತಿ ಮಂಧಾನಾ!
ಇಮೇಶಾ ದುಲಾನಿ (29), ಹರ್ಷಿತಾ ಸಮರವಿಕ್ರಮ (20) ಹಾಗೂ ನೀಲಾಕ್ಷಿ ಸಿಲ್ವಾ (22) ಅವರು ಕೂಡ ತಮ್ಮ ತಂಡವನ್ನು ಗೆಲ್ಲಿಸಲು ಪ್ರಯತ್ನ ನಡೆಸಿದ್ದರು. ಆದರೆ, ಇದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 6 ವಿಕೆಟ್‌ಗಳ ನಷ್ಟಕ್ಕೆ 191 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 30 ರನ್‌ಗಳಿಂದ ಶ್ರೀಲಂಕಾ ಸೋಲು ಒಪ್ಪಿಕೊಂಡಿತು. ಇದು ಶ್ರೀಲಂಕಾ ತಂಡದ ಟಿ20ಐ ಪಂದ್ಯದಲ್ಲಿನ ದೊಡ್ಡ ಮೊತ್ತವಾಗಿದೆ. ಭಾರತದ ಪರ ಅರುಂಧತಿ ರೆಡ್ಡಿ ಹಾಗೂ ವೈಷ್ಣವಿ ಶರ್ಮಾ ತಲಾ ಎರಡೆರಡು ವಿಕೆಟ್ ಪಡೆದರು.
221 ರನ್ ಕಲೆ ಹಾಕಿದ ಭಾರತ
ಇದಕ್ಕೂ ಮುನ್ನ ಇಲ್ಲಿನ ಗ್ರೀನ್ ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮೆನ್‌ಗಳು ಮಿಂಚಿದರು. ವಿಶೇಷವಾಗಿ ಸ್ಮೃತಿ ಮಧಾನಾ ಹಾಗೂ ಶಫಾಲಿ ವರ್ಮಾ ಅವರ ಅರ್ಧಶತಕಗಳ ಬಲದಿಂದ ಭಾರತ ಮಹಿಳಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 221 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 222 ರನ್‌ಗಳ ಗುರಿಯನ್ನು ನೀಡಿತು.
ಮಂಧಾನಾ-ಶಫಾಲಿ ಅಬ್ಬರದ ಬ್ಯಾಟಿಂಗ್
ಭಾರತದ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ಅವರು ಅಬ್ಬರಿಸಿದರು. ಈ ಜೋಡಿ ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಇವರು ಮುರಿಯದ ಮೊದಲನೇ ವಿಕೆಟ್‌ಗೆ 15.2 ಓವರ್‌ಗಳಿಗೆ 162 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಸ್ಪೋಟಕ ಬ್ಯಾಟ್ ಮಾಡಿದ ಶಫಾಲಿ ವರ್ಮಾ, 46 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 79 ರನ್‌ಗಳನ್ನು ಚಚ್ಚಿದರು. ನಂತರ ನಿಮಾಷ ಮಧಸನಿ ಅವರಿಗೆ ವಿಕೆಟ್ ಒಪ್ಪಿಸಿದರು.
1000 ರನ್ ಕಲೆ ಹಾಕಿದ ಸ್ಮೃತಿ
ಕಳೆದ ಮೂರು ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದ ಉಪ ನಾಯಕಿ ಸ್ಮೃತಿ ಮಂಧಾನಾ ಅವರು ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಫಾರ್ಮ್ ಕಂಡುಕೊಂಡರು. ಅವರು ಆಡಿದ 48 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 80 ರನ್‌ಗಳನ್ನು ಬಾರಿಸಿದರು. ಶತಕದಂಚಿನಲ್ಲಿ ಅವರು ಮಾಲ್ಷಾ ಶಹಾನಿಗೆ ಔಟ್ ಆದರು. ಅಂದ ಹಾಗೆ ಈ ಇನಿಂಗ್ಸ್ ಮೂಲಕ ಸ್ಮೃತಿ ತಮ್ಮ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಮಾಜಿ ನಾಯಕಿ ಮಿಥಾಲಿ ರಾಜ್ ಬಳಿಕ ಈ ಸಾಧನೆಗೆ ಭಾಜನರಾದ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು.
ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ ಕೇವಲ 16 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 40 ರನ್‌ಗಳನ್ನು ಬಾರಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 16 ರನ್ ಗಳಿಸಿದರು. ಆ ಮೂಲಕ ಭಾರತ ತಂಡದ ಮೊತ್ತ 220 ರನ್ ಗಡಿ ದಾಟಲು ಸಾಧ್ಯವಾಯಿತು.