ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯು ಮೊದಲ ಅವಧಿಯನ್ನು ಮುಗಿಸಿದೆ. ಇದೀಗ ಎರಡನೇ ಅವಧಿಯ ಪಂದ್ಯಗಳು ಸಾಗುತ್ತಿವೆ. ಇದರ ನಡುವೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರು ಈ ಸೀಸನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಬಲ್ಲ ತಂಡಗಳನ್ನು ಆರಿಸಿದ್ದಾರೆ. ಆದರೆ, ಅವರು ಯಾವ ತಂಡ ಟ್ರೋಫಿಯನ್ನು ಗೆಲ್ಲಲಿದೆ ಎಂದು ಹೇಳುವುದು ಈಗಲೇ ಕಷ್ಟ ಎಂದು ತಿಳಿಸಿದ್ದಾರೆ.
ಸೌರವ್ ಗಂಗೂಲಿ ಅವರು ತಮ್ಮ ಪತ್ನಿ ಡೋನಾ ಗಂಗೂಲಿ ಅವರೊಂದಿಗೆ ಬುಧವಾರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮತ ಚಲಾಯಿಸಿದರು. ಈ ದಂಪತಿ ದಕ್ಷಿಣ 24 ಪರಗಣಾಸ್‌ನ ಮತಗಟ್ಟೆಯಲ್ಲಿ ಕಠಿಣ ಭದ್ರತಾ ವ್ಯವಸ್ಥೆಗಳ ನಡುವೆ ತಮ್ಮ ಮತವನ್ನು ಚಲಾಯಿಸಿದರು.
ಪಶ್ಚಿಮ ಬಂಗಾಳ ಚುನಾವಣೆಯ ಎರಡನೇ ಹಂತದ ಮತದಾನ ಹಲವು ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಅನೇಕ ಮತಗಟ್ಟೆಗಳ ಮುಂದೆ ಮತದಾರರ ದೀರ್ಘ ಸಾಲುಗಳು ಕಂಡುಬಂದವು. ಶಾಂತಿಯುತ ಮತದಾನ ನಡೆಯುವಂತೆ ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಮತದಾನದ ಪ್ರಮಾಣ ಮತ್ತು ವ್ಯವಸ್ಥೆಗಳ ಮೇಲೆ ಚುನಾವಣಾಧಿಕಾರಿಗಳು ನಿಗಾ ವಹಿಸಿದ್ದಾರೆ. ಮತ ಎಣಿಕೆ ಮೇ 4ರಂದು ನಡೆಯಲಿದೆ.
PBKS vs RR: ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್‌ಗೆ ಶಾಕ್ ನೀಡಿದ ರಾಜಸ್ಥಾನ್ ರಾಯಲ್ಸ್!
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, 2026ರ ಐಪಿಎಲ್ ಟೂರ್ನಿಯ ಸ್ಪರ್ಧಾತ್ಮಕ ಸ್ವಭಾವದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
“ಐಪಿಎಲ್ ಟೂರ್ನಿ ನಡೆಯುತ್ತಿದೆ. ಇಲ್ಲಿ ಹಲವಾರು ತಂಡಗಳಿವೆ. ಯಾವ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನದು ಎಂದು ಆಯ್ಕೆ ಮಾಡುವುದು ಕಷ್ಟ. ಆದರೆ ಪಂಜಾಬ್ ಕಿಂಗ್ಸ್ ಚೆನ್ನಾಗಿ ಆಡುತ್ತಿದೆ, ರಾಜಸ್ಥಾನ್ ರಾಯಲ್ಸ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ, ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಉತ್ತಮವಾಗಿದೆ. ಇನ್ನೂ ಟೂರ್ನಿಯ ಅರ್ಧ ಭಾಗ ಬಾಕಿಯಿದೆ,” ಎಂದು ಗಂಗೂಲಿ ಹೇಳಿದ್ದಾರೆ. ಅಂದರೆ ಇವರ ಪ್ರಕಾರ ಆರ್‌ಸಿಬಿ ಹಾಗೂ ಪಿಬಿಕೆಎಸ್ ತಂಡಗಳು ಫೈನಲ್‌ಗೆ ಲಗ್ಗೆ ಇಡಲಿದೆ ಎಂದು ಅಂದಾಜಿಸಬಹುದು.
PSL 2026: ಶತಕ ಸಿಡಿಸಿ ವಿರಾಟ್ ಕೊಹ್ಲಿ, ಅಭಿಷೇಕ್ ಶರ್ಮಾರ ದಾಖಲೆ ಸರಿಗಟ್ಟಿದ ಬಾಬರ್ ಆಝಮ್!
2026ರ ಐಪಿಎಲ್ ಟೂರ್ನಿಯಲ್ಲಿ ಪಾಯಿಂಟ್ಸ್ ಟೇಬಲ್ ಬಹಳ ತೀವ್ರ ಪೈಪೋಟಿಯ ಹಂತಕ್ಕೆ ತಲುಪಿದೆ. ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದ್ದರೂ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮುನ್ನಡೆಯಲ್ಲಿದೆ.
ಪಂಜಾಬ್ ಆಡಿದ 8 ಪಂದ್ಯಗಳಲ್ಲಿ 13 ಅಂಕಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ಪಂದ್ಯಗಳಿಂದ 12 ಅಂಕಗಳೊಂದಿಗೆ ಅಗ್ರ ಸ್ಥಾನದ ಸನಿಹದಲ್ಲಿದೆ. ಆರ್‌ಸಿಬಿ ತಂಡವು 1.919ರ ಅತ್ಯುತ್ತಮ ನೆಟ್ ರನ್‌ರೇಟ್ ಹೊಂದಿದೆ. ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಿಂದ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಸನ್‌ರೈಸರ್ಸ್ ಹೈದರಾಬಾದ್ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.