ಕಟಕ್: ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿಇದೀಗ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡೆನ್ ಮಾರ್ಕ್ರಮ್ (Aiden Markram) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಆತಿಥೇಯ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಹಾಗಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದ ಭಾರತ ಮೊದಲು ಬ್ಯಾಟ್ ಮಾಡಲಿದೆ.
ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ ನಿಮಿತ್ತ ಈ ಸರಣಿಯು ಉಭಯ ತಂಡಗಳಿಗೆ ತುಂಬಾ ಮುಖ್ಯವಾಗಿದೆ. ಅದರಲ್ಲಿಯೂ ಭಾರತ ಹಾಗೂ ಶ್ರೀಲಕಾ ಜಂಟಿ ಆತಿಥ್ಯದಲ್ಲಿ ಚುಟುಕು ವಿಶ್ವಕಪ್ ನಡೆಯುವ ಕಾರಣ ಇಲ್ಲಿನ ಕಂಡೀಷನ್ಸ್‌ಗೆ ಹೊಂದಿಕೊಳ್ಳಲು ಹರಿಣ ಪಡೆಗೆ ಈ ಸರಣಿ ನೆರವು ನೀಡಲಿದೆ. ಅಂದ ಹಾಗೆ ಇದಕ್ಕೂ ಮುನ್ನ ಎರಡೂ ತಂಡಗಳು ಏಕದಿನ ಸರಣಿಯಲ್ಲಿ ಕಾದಾಟ ನಡೆಸಿದ್ದವು. ಆದರೆ, ಈ ಸರಣಿಯನ್ನು ಟೀಮ್ ಇಂಡಿಯಾ ಕೆಎಲ್ ರಾಹುಲ್ ನಾಯಕತ್ವದಲ್ಲಿ 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್ ಹೆಸರಿಸಿದ ಏಡೆನ್ ಮಾರ್ಕ್ರಮ್!
ಪಂದ್ಯದ ಟಾಸ್ ವೇಳೆ ಮಾತನಾಡಿದ ಪ್ರವಾಸಿ ನಾಯಕ ಏಡೆನ್ ಮಾರ್ಕ್ರಮ್, "ನಾವು ಮೊದಲು ಬೌಲ್ ಮಾಡುತ್ತೇವೆ ಹಾಗೂ ಭಾರತದಲ್ಲಿ ಈ ಕಂಡೀಷನ್ಸ್ ಚೆನ್ನಾಗಿದೆ. ಈಗ ಸ್ವಲ್ಪ ಇಬ್ಬನಿ ಕಾಣುತ್ತಿದೆ, ಆದರೆ ನಂತರ ಇದು ಜಾಸ್ತಿಯಾಗಬಹುದು. ಟಿ20 ವಿಶ್ವಕಪ್ ನಿಮಿತ್ತ ಇದು ನಮಗೆ ನೆರವು ನೀಡಲಿದೆ," ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಏನು ಹೇಳಿದ್ರು?
ಟಾಸ್ ಸೋತ ಬಳಿಕ ಮಾತನಾಡಿದ ಸೂರ್ಯಕುಮಾರ್, "ಪರವಾಗಿಲ್ಲ, ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಇಂದು ಪಿಚ್ ನೋಡಿದಾಗ ಸ್ವಲ್ಪ ಗೊಂದಲಕ್ಕೆ ಒಳಗಾದೆವು ಏಕೆಂದರೆ ಸೋಮವಾರ ಈ ಪಿಚ್ ತುಂಬಾ ಹಸಿರಿನಿಂದ ಕೂಡಿತ್ತು. ಆದರೂ ಪರವಾಗಿಲ್ಲ,ಸಂತೋಷದಿಂದ ಮೊದಲು ಬ್ಯಾಟ್ ಮಾಡುತ್ತೇವೆ. ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಹಾಗೂ ಹರ್ಷಿತ್ ರಾಣಾ ಅವರು ಹೊರಗುಳಿಯಲಿದ್ದಾರೆ," ಎಂದು ತಿಳಿಸಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಏಡೆನ್ ಮಾರ್ಕ್ರಮ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೆರಾ, ಮಾರ್ಕೊ ಯೆನ್ಸನ್, ಕೇಶವ್ ಮಹಾರಾಜ್, ಲಥೋ ಸಿಂಪಾಲ, ಲುಂಗಿ ಎನ್ಗಿಡಿ, ಎನ್ರಿಕ್ ನೊರ್ಕಿಯಾ