ದೋಹಾ: ಕೊನೆಯ ಎಸೆತದವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ (PAK A vs SL A) ಪಾಕಿಸ್ತಾನ ಎ ಎದುರು ಶ್ರೀಲಂಕಾ ಎ ತಂಡ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸಿಂಹಳೀಯರು ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊನೆಯ ವಿಕೆಟ್‌ಗೆ ಶ್ರೀಲಂಕಾ ತಂಡಕ್ಕೆ 19 ರನ್ ಹಾಗೂ ಪಾಕ್‌ಗೆ ಒಂದೇ ಒಂದು ವಿಕೆಟ್ ಅಗತ್ಯವಿತ್ತು. ಈ ವೇಳೆ ಲಹಿರು ಸಮರಕೂನ್ ಹಾಗೂ ಗರುಕ ಸಂಕೇತ್ ಎಚ್ಚರಿಕೆಯಿಂದ ಆಡಿ 22 ರನ್‌ಗಳ ಜೊತೆಯಾಟದ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕಿಸ್ತಾನದ ಅಂಡರ್-19 ತಂಡ ಇತ್ತೀಚೆಗೆ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಒಂದು ವಿಕೆಟ್‌ನಿಂದ ಸೋಲು ಕಂಡಿತ್ತು. ಇದೀಗ ಪಾಕಿಸ್ತಾನ ಎ ತಂಡವೂ ಅದೇ ರೀತಿಯ ಸೋಲು ಅನುಭವಿಸಿದೆ. ಶ್ರೀಲಂಕಾ ಎ ತಂಡದ ವಿಕೆಟ್ ಕೀಪರ್ ನಿಶಾನ್ ಮಧುಷ್ಕ ಗೆಲುವಿನ ರೂವಾರಿಯಾದರು. ಆ ಮೂಲಕ ಶ್ರೀಲಂಕಾ ಎ ತಂಡ ಇತಿಹಾಸದಲ್ಲಿ ಮೂರನೇ ಬಾರಿ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪ್ರಶಸ್ತಿ ಗೆದ್ದಿದೆ. 2018ರ ಬಳಿಕ ಎಂಟು ವರ್ಷಗಳ ಅಂತರದಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದೆ.
ಭಾರತ ತಂಡದಿಂದ ನನ್ನನ್ನು ಕಿತ್ತರು, ನನ್ನ ಬ್ಯಾಟಿಂಗ್‌ನಲ್ಲಿ ತಪ್ಪೇನಿತ್ತೆಂದು ಗೊತ್ತಿಲ್ಲ: ಸೂರ್ಯಕುಮಾರ್ ಅಳಲು!
ಕೊನೆಯ ವಿಕೆಟ್‌ನಲ್ಲಿ ಲಂಕಾ ಪವಾಡ!
217 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದ ಶ್ರೀಲಂಕಾ ಎ ತಂಡ ಒಂದು ಹಂತದಲ್ಲಿ 198 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆದರೆ ಕೊನೆಯ ವಿಕೆಟ್‌ಗೆ ಜೊತೆಯಾದ ಲಹಿರು ಸಮರಕೋನ್ ಮತ್ತು ಗರುಕ ಸಂಕೇತ್ ಅದ್ಭುತ ಹೋರಾಟ ಪ್ರದರ್ಶಿಸಿದರು. ಈ ಜೋಡಿ 29 ಎಸೆತಗಳಲ್ಲಿ ಮುರಿಯದ 22 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು.
ಕೆಲವೇ ವಾರಗಳ ಹಿಂದೆ ಮಸ್ಕತ್‌ನಲ್ಲಿ ನಡೆದಿದ್ದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲೂ ಭಾರತದ ಕೊನೆಯ ವಿಕೆಟ್ ಜೋಡಿ ಮೋಹಿತ್ ಉಲ್ವಾ ಮತ್ತು ಸಿ. ವೆಂಕಟ 30 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಇದೀಗ ಶ್ರೀಲಂಕಾ ಎ ತಂಡವೂ ಕೊನೆಯ ವಿಕೆಟ್‌ನಲ್ಲಿ ಪಂದ್ಯ ಗೆದ್ದಿರುವುದು ವಿಶೇಷ.
87 ರನ್ ಸಿಡಿಸಿದ ನಿಶಾನ್ ಮಧುಷ್ಕ
ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 140 ರನ್‌ಗಳಿಗೆ ಎರಡು ವಿಕೆಟ್ ಮಾತ್ರ ಕಳೆದುಕೊಂಡಿದ್ದ ತಂಡ, ಬಳಿಕ 176 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಚೇತರಿಸಿಕೊಂಡು 198 ರನ್‌ಗಳಿಗೆ 6 ವಿಕೆಟ್ ತಲುಪಿತು. ಆದರೆ ಯಾವುದೇ ರನ್ ಸೇರಿಸುವ ಮುನ್ನವೇ ಸತತ ಮೂರು ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿತು. ತಂಡದ ನಿಶಾನ್ ಮಧುಷ್ಕ 95 ಎಸೆತಗಳಲ್ಲಿ 87 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯ ಹಂತದಲ್ಲಿ ಲಹಿರು ಸಮರಕೋನ್ ಮತ್ತು ಗರುಕ ಸಂಕೇತ್ ತಂಡವನ್ನು ಗೆಲುವಿನ ದಡ ಸೇರಿಸಿದರು.
216 ರನ್ ಗಳಿಸಿದ್ದ ಪಾಕಿಸ್ತಾನ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎ ತಂಡ 216 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ 167 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ, ಬಳಿಕ ಚೇತರಿಸಿಕೊಂಡು ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಶಹಜೈಬ್ ಖಾನ್ 60 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶ್ರೀಲಂಕಾ ಪರ ರವಿಂದು ಫರ್ನಾಂಡೊ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 26 ರನ್ ನೀಡಿ 3 ವಿಕೆಟ್ ಪಡೆದರು.
ಭಾರತ ಟೆಸ್ಟ್ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ವಿಫಲ: ದಿನೇಶ್ ಕಾರ್ತಿಕ್ ಕಳವಳ!
ಸೆಮಿಫೈನಲ್‌ನಲ್ಲೂ ಭಾರತದ ವಿರುದ್ಧ ಗೆದ್ದಿದ್ದ ಲಂಕಾ
ಶ್ರೀಲಂಕಾ ಎ ತಂಡ ಸೆಮಿಫೈನಲ್‌ನಲ್ಲಿ ಭಾರತ ಎ ತಂಡವನ್ನು 317 ರನ್‌ಗಳ ಗುರಿಯನ್ನು ಬೆನ್ನಟ್ಟಿ ಸೋಲಿಸಿತ್ತು. ಮತ್ತೊಂದೆಡೆ, ಪಾಕಿಸ್ತಾನ ಎ ತಂಡ ಬಾಂಗ್ಲಾದೇಶ ಎ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಎಲ್ಲ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದವು.