ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ತಂಡದಿಂದ ನನ್ನನ್ನು ಕಿತ್ತರು, ನನ್ನ ಬ್ಯಾಟಿಂಗ್‌ನಲ್ಲಿ ತಪ್ಪೇನಿತ್ತೆಂದು ಗೊತ್ತಿಲ್ಲ: ಸೂರ್ಯಕುಮಾರ್‌ ಅಳಲು!

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರೂ ತಮ್ಮ ಬ್ಯಾಟಿಂಗ್‌ನಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ಅವರು, ಮತ್ತೆ ಲಯ ಕಂಡುಕೊಂಡಿದ್ದಾರೆ. ಐದು ಇನಿಂಗ್ಸ್‌ಗಳಲ್ಲಿ 204 ರನ್ ಗಳಿಸಿರುವ ಸೂರ್ಯ, ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ನನ್ನ ಬ್ಯಾಟಿಂಗ್‌ ಚೆನ್ನಾಗಿಯೇ ಇತ್ತಾದರೂ ಭಾರತ ತಂಡದಿಂದ ಕಿತ್ತರು: ಸೂರ್ಯ

ಭಾರತ ತಂಡದಿಂದ ತೆಗೆದ ಬಗ್ಗೆ ಅಳಲು ತೋಡಿಕೊಂಡ ಸೂರ್ಯಕುಮಾರ್‌ ಯಾದವ್‌. -

Profile
Ramesh Kote Nov 29, 2026 7:20 PM

ನವದೆಹಲಿ: ಭಾರತ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಸದ್ಯ ಕಳಪೆ ಫಾರ್ಮ್‌ನಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ. ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತ ತಂಡದಲ್ಲಿ (India) ಸ್ಥಾನ ಕಳೆದುಕೊಂಡಿರುವ ಅವರು, ಇದೀಗ ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ಅಬ್ಬರಿಸುತ್ತಿದ್ದಾರೆ. ತಮ್ಮ ಬ್ಯಾಟಿಂಗ್‌ನಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಹೇಳಿರುವ ಸೂರ್ಯ, ಕಳೆದ ಐದು ವರ್ಷಗಳಿಂದ ಆಡುತ್ತಿರುವ ರೀತಿಯಲ್ಲೇ ಈಗಲೂ ಬ್ಯಾಟ್ ಬೀಸುತ್ತಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕುಮಾರ್, "ನನ್ನ ಬ್ಯಾಟಿಂಗ್‌ನಲ್ಲಿ ಏನೂ ತಪ್ಪಾಗಿದೆ ಎಂದು ನನಗನಿಸುವುದಿಲ್ಲ. ಕಳೆದ ಐದು ವರ್ಷಗಳಿಂದ ನಾನು ಇದೇ ರೀತಿಯಲ್ಲಿ ಆಡುತ್ತಿದ್ದೇನೆ. ಭಾರತ ತಂಡದ ಪರವಾಗಿರಲಿ ಅಥವಾ ಮುಂಬೈ ಪರವಾಗಿರಲಿ, ಎಲ್ಲೆಡೆ ಬ್ಯಾಟಿಂಗ್ ಮಾಡುವುದನ್ನು ಆನಂದಿಸಿದ್ದೇನೆ," ಎಂದು ಹೇಳಿದ್ದಾರೆ.

ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯಕುಮಾರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆಡಿರುವ ಐದು ಇನಿಂಗ್ಸ್‌ಗಳಲ್ಲಿ 230ರ ಸ್ಟ್ರೈಕ್‌ರೇಟ್‌ನಲ್ಲಿ 204 ರನ್ ಗಳಿಸಿದ್ದಾರೆ. ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದು, ಇದೀಗ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.

Syed Mushtaq Ali Trophy: 29 ಎಸೆತಗಳಲ್ಲಿ 82 ರನ್‌ ಸಿಡಿಸಿದ ಸೂರ್ಯಕುಮಾರ್‌ ಯಾದವ್‌!

ಕಳೆದ 8-10 ವಾರಗಳಿಂದ ಕಠಿಣ ಅಭ್ಯಾಸ

ಸೂರ್ಯಕುಮಾರ್ ಅವರ ಆತ್ಮವಿಶ್ವಾಸಕ್ಕೆ ದೇಶಿ ಕ್ರಿಕೆಟ್‌ನಲ್ಲಿನ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. 2025ರ ಐಪಿಎಲ್‌ ಟೂರ್ನಿಯಲ್ಲಿ 16 ಪಂದ್ಯಗಳಿಂದ 717 ರನ್ ಗಳಿಸಿದ್ದ ಅವರು, 2026ರ ಆವೃತ್ತಿಯಲ್ಲಿ 13 ಪಂದ್ಯಗಳಿಂದ ಕೇವಲ 270 ರನ್ ಗಳಿಸಿದ್ದರು. ಇನ್ನು 2025ರಲ್ಲಿ ಭಾರತದ ಪರ 21 ಟಿ20 ಪಂದ್ಯಗಳನ್ನಾಡಿದ್ದ ಸೂರ್ಯ, 13.62ರ ಸರಾಸರಿಯಲ್ಲಿ ಕೇವಲ 218 ರನ್ ಗಳಿಸಿದ್ದರು.

ಆದರೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 242 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಸಂಜು ಸ್ಯಾಮ್ಸನ್ 321 ರನ್ ಗಳಿಸಿ ಭಾರತದ ಪರ ಅಗ್ರಸ್ಥಾನದಲ್ಲಿದ್ದರೆ, ಸೂರ್ಯ ಎರಡನೇ ಸ್ಥಾನದಲ್ಲಿದ್ದರು. ಅಮೆರಿಕ ವಿರುದ್ಧ 84 ರನ್ ಗಳಿಸಿದ ಬಳಿಕ ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಸ್ಥಿರತೆ ಕಾಣಿಸಿರಲಿಲ್ಲ.

"ಈಗಲೂ ನಾನು ಅದೇ ರೀತಿಯಲ್ಲಿ ಆಡುತ್ತಿದ್ದೇನೆ. ಸಾಕಷ್ಟು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ಕಳೆದ 8-10 ವಾರಗಳಿಂದ ಕಠಿಣ ಪರಿಶ್ರಮ ಹಾಕಿದ್ದೇನೆ. ಅದರ ಫಲಿತಾಂಶ ಮೈದಾನದಲ್ಲಿ ಕಾಣಿಸುತ್ತಿದೆ. ನೀವು ಎಷ್ಟು ಹೆಚ್ಚು ಪರಿಶ್ರಮ ಪಡುತ್ತೀರೋ, ಅಷ್ಟು ಅದೃಷ್ಟ ನಿಮ್ಮದಾಗುತ್ತದೆ," ಎಂದು ಸೂರ್ಯಕುಮಾರ್‌ ಯಾದವ್‌ ಹೇಳಿದ್ದಾರೆ.

ʻಆ ದಿನಗಳು ತುಂಬಾ ಕಠಿಣವಾಗಿದ್ದವುʼ: ತಮ್ಮ ಕಷ್ಟದ ಅವಧಿಯನ್ನು ನೆನೆದ ಸೂರ್ಯಕುಮಾರ್‌ ಯಾದವ್‌!

ಭಾರತ ತಂಡದಿಂದ ಹೊರಬಿದ್ದಿದ್ದು ನೋವು ತಂದಿದೆ

ಕಳೆದ ಐದು ವರ್ಷಗಳಿಂದ ನಿರಂತರವಾಗಿ ಭಾರತ ತಂಡದ ಪರ ಆಡುತ್ತಿದ್ದ ಸೂರ್ಯಕುಮಾರ್‌ಗೆ ಏಕಾಏಕಿ ತಂಡದಿಂದ ಹೊರಗುಳಿಯುವುದು ನೋವು ತಂದಿದೆಯಂತೆ. ಜೂನ್-ಜುಲೈನಲ್ಲಿ ನಡೆದ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ತಂಡದಲ್ಲಿ ಸ್ಥಾನ ಪಡೆಯದ ಬಳಿಕ ಅವರು ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾರೆ

"ಖಂಡಿತವಾಗಿಯೂ ಭಾರತ ತಂಡದಿಂದ ದೂರ ಉಳಿಯುವುದು ನೋವುಂಟು ಮಾಡುತ್ತದೆ. ಐದು ವರ್ಷಗಳ ಕಾಲ ನಿರಂತರವಾಗಿ ದೇಶಕ್ಕಾಗಿ ಆಡಿದ ಬಳಿಕ ಏಕಾಏಕಿ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗದಿರುವುದು ಬೇಸರ ಮೂಡಿಸುತ್ತದೆ. ಆದರೆ ಕ್ರಿಕೆಟ್ ಆಟವೇ ಹೀಗೆ. ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ. ಅಲ್ಲಿಯವರೆಗೆ ಆಟ ಮುಂದುವರಿಯಬೇಕು," ಎಂದು ಸೂರ್ಯಕುಮಾರ್ ಹೇಳಿದ್ದಾರೆ.