ನವದೆಹಲಿ: ದಿಗ್ಗಜ ಬ್ಯಾಟ್ಸ್‌ಮನ್ ಸುನೀಲ್ ಗವಾಸ್ಕರ್(Sunil Gavaskar), ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿನ ವಿದೇಶಿ ಆಟಗಾರರ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ಕೊನೆಯ ಕ್ಷಣದಲ್ಲಿ ಹಿಂದೆ ಸರಿಯುವ ಆಟಗಾರರ ವಿರುದ್ಧ ಫ್ರಾಂಚೈಸಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಗತ್ಯವಿದ್ದರೆ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಣ ಪಂದ್ಯದ ಮೂಲಕ 2026ರ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಸ್ಪೋರ್ಟ್‌ಸ್ಟಾರ್‌ನಲ್ಲಿ ಬರೆದ ತಮ್ಮ ಅಂಕಣದಲ್ಲಿ ಸುನೀಲ್ ಗವಾಸ್ಕರ್, ಐಪಿಎಲ್ ಹೊಸ ಸೀಸನ್ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದ್ದರೂ ಕೆಲ ವಿದೇಶಿ ಆಟಗಾರರು ಫ್ರಾಂಚೈಸಿಗಳನ್ನು ಲೆಕ್ಕಿಸದೇ ನಡೆದುಕೊಳ್ಳುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಐಪಿಎಲ್ ವರ್ಷಗಳಿಂದ ಅತ್ಯಂತ ಲಾಭದಾಯಕ ಲೀಗ್ ಆಗಿ ಬೆಳೆದಿರುವ ಹಿನ್ನೆಲೆಯಲ್ಲಿ, ಕೆಲ ವಿದೇಶಿ ಆಟಗಾರರು ಭಾರತದ ಆತಿಥ್ಯ ಪರಂಪರೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ರೀತಿಯ ಪ್ರವೃತ್ತಿ ತಡೆಯಬೇಕಾದ ಅಗತ್ಯವಿದೆ ಎಂದು ಗವಾಸ್ಕರ್ ಒತ್ತಿಹೇಳಿದ್ದಾರೆ.
IPL 2026: ಏಕೈಕ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್ ಗಳಿಸಿದ ನಾಲ್ವರು ಬ್ಯಾಟರ್ಸ್!
“ಫ್ರಾಂಚೈಸಿಗಳ ಮಾಲೀಕರು ತಮ್ಮ ಆಟಗಾರರಿಗೆ ಸೌಲಭ್ಯ ಒದಗಿಸಲು ವಿಶೇಷ ಪ್ರಯತ್ನ ಮಾಡುತ್ತಾರೆ. ಹಲವಾರು ಸಂದರ್ಭಗಳಲ್ಲಿ ಆಟಗಾರರ ಕುಟುಂಬ ಸದಸ್ಯರನ್ನು ಕೂಡ ಯಾವುದೇ ಖರ್ಚಿಲ್ಲದೆ ಕರೆಸಿ ಅವರ ಜೊತೆ ಸಮಯ ಕಳೆಯಲು ಅವಕಾಶ ಮಾಡಿಕೊಡುತ್ತಾರೆ. ಇದು ಭಾರತದ ಆತಿಥ್ಯ ಸಂಪ್ರದಾಯದ ಒಂದು ಭಾಗ. ಆದರೆ, ಕೆಲವರು ಇದನ್ನು ಹಕ್ಕು ಎಂದು ತಪ್ಪಾಗಿ ಅರ್ಥಮಾಡಿಕೊಂಡು, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ,” ಎಂದು ಅವರು ತಮ್ಮ ಲೇಖನದಲ್ಲಿ ಟೀಕಿಸಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಭಾರತದ ಭವಿಷ್ಯದ ಪ್ರಮುಖ ತಾರೆಯಾಗಿ ಹೊರಹೊಮ್ಮುತ್ತಿರುವ ಹರ್ಷಿತ್ ರಾಣಾ, ಈ ಸೀಸನ್‌ನ ಬಹುಪಾಲು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದೇ ವೇಳೆ, ರಾಜಸ್ಥಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ಸ್ಯಾಮ್ ಕರನ್ ಕೂಡ ಗ್ರೋಯಿನ್ ಇಂಜುರಿಯಿಂದಾಗಿ ಸೀಸನ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ.
IPL 2026: ಸನ್‌ರೈಸರ್ಸ್ ಹೈದರಾಬಾದ್‌ನ ಕೀ ಆಟಗಾರನನ್ನು ಆರಿಸಿದ ಇರ್ಫಾನ್ ಪಠಾಣ್!
ವಿದೇಶಿ ಆಟಗಾರರ ವಿರುದ್ಧ ಗವಾಸ್ಕರ್ ಕಿಡಿ
“ಇತ್ತೀಚೆಗೆ ಕೆಲ ಆಟಗಾರರು ವಿವಿಧ ಕಾರಣಗಳಿಂದ ಟೂರ್ನಿಯಿಂದ ಅಲಭ್ಯರಾಗುತ್ತಿದ್ದಾರೆಂಬ ಮಾಹಿತಿ ಬರುತ್ತಿದೆ. ಆದರೆ, ಅವರನ್ನು ಆಯ್ಕೆ ಮಾಡುವ ಮೊದಲು ಈ ಮಾಹಿತಿಯನ್ನು ಫ್ರಾಂಚೈಸಿಗಳಿಗೆ ತಿಳಿಸಲಾಗಿರಿವುದಿಲ್ಲ. ಫ್ರಾಂಚೈಸಿಗಳು ಕಠಿಣ ಕ್ರಮ ಕೈಗೊಂಡು ಇಂತಹ ಆಟಗಾರರನ್ನು ಕೈಬಿಡದಿದ್ದರೆ, ಪ್ರಶಸ್ತಿ ಗೆಲ್ಲುವ ಅವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ತಂಡ ರಚನೆಗೆ ಮಾಡಿದ ಎಲ್ಲಾ ಯೋಜನೆಗಳು, ಆಟಗಾರರು ತಮ್ಮ ಇಚ್ಛೆಯಂತೆ ಬರುವ ನಿರ್ಧಾರ ತೆಗೆದುಕೊಂಡಾಗ ವ್ಯರ್ಥವಾಗುತ್ತವೆ,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.