ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs SRH: ಮುಂಬೈ ಇಂಡಿಯನ್ಸ್‌ ಎದುರು ಸನ್‌ರೈಸರ್ಸ್‌ ಹೈದರಾಬಾದ್‌ಗೆ ಅಧಿಕಾರಯುತ ಜಯ!

MI vs SRH match Highlights: ಟ್ರಾವಿಸ್‌ ಹೆಡ್‌ ಹಾಗೂ ಹೆನ್ರಿಕ್‌ ಕ್ಲಾಸೆನ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಎದುರಾಳಿ ಮುಂಬೈ ಇಂಡಿಯನ್ಸ್‌ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಆರನೇ ಸೋಲು ಅನುಭವಿಸಿದ ಮುಂಬೈ ತಂಡದ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ.

ಮುಂಬೈ ಇಂಡಿಯನ್ಸ್‌ ಎದುರು ಗೆದ್ದು ಬೀಗಿದ ಸನ್‌ರೈಸರ್ಸ್‌ ಹೈದರಾಬಾದ್‌.

ಮುಂಬೈ: ಟ್ರಾವಿಸ್‌ ಹೆಡ್‌ ಹಾಗೂ ಹೆನ್ರಿಕ್‌ ಕ್ಲಾಸೆನ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡ, ಎದುರಾಳಿ ಮುಂಬೈ ಇಂಡಿಯನ್ಸ್‌ (MI) ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ 12 ಅಂಕಗಳ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಬೃಹತ್‌ ಮೊತ್ತದ ಗುರಿ ನೀಡಿದ್ದರೂ ಬೌಲಿಂಗ್‌ ವೈಫಲ್ಯದಿಂದಾಗಿ ಐದು ಬಾರಿ ಚಾಂಪಿಯನ್ಸ್‌ ಸೋಲು ಅನುಭವಿಸಬೇಕಾಯಿತು ಹಾಗೂ ಆರು ಸೋಲುಗಳೊಂದಿಗೆ ಪ್ಲೇಆಫ್ಸ್‌ ಹಾದಿಯನ್ನು ಕಠಿಣವಾಗಿಸಿಕೊಂಡಿದೆ.

ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ 244 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ 129 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟರು. ಅಬ್ಬರಿಸಿದ ಅಭಿಷೇಕ್‌ ಶರ್ಮಾ 24 ಎಸೆತಗಳಲ್ಲಿ 45 ರನ್‌ ಗಳಿಸಿ ಅರ್ಧಶತಕದಂಚಿನಲ್ಲಿ ಘಝಂಫರ್‌ಗೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಇಶಾನ್‌ ಕಿಶನ್‌ ಕೇವಲ ಒಂದು ರನ್‌ ಗಳಿಸಿ ಘಝಂಫರ್‌ಗೆ ಶರಣಾದರು.

MI vs SRH: 44 ಬಾಲ್‌ಗಳಲ್ಲಿ ಶತಕ ಬಾರಿಸಿ ಸನತ್‌ ಜಯಸೂರ್ಯ ದಾಖಲೆ ಮುರಿದ ರಯಾನ್‌ ರಿಕೆಲ್ಟನ್!

ಟ್ರಾವಿಸ್‌ ಹೆಡ್‌ ಸ್ಪೋಟಕ ಅರ್ಧಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ 253.33ರ ಸ್ಟ್ರೈಕ್‌ ರೇಟ್‌ನಲ್ಲಿ ಅಬ್ಬರಿಸಿದರು. ಅವರು ಆಡಿದ 30 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 76 ರನ್‌ ಸಿಡಿಸಿದರು. ಆ ಮೂಲಕ ಎಸ್‌ಆರ್‌ಎಚ್‌ ತಂಡವನ್ನು ಗೆಲುವಿನ ಹಾದಿಯನ್ನು ಸುಗಮಗೊಳಿಸಿ 10ನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದರು.



ಹೆನ್ರಿಕ್‌ ಕ್ಲಾಸೆನ್‌-ನಿತೀಶ್‌ ರೆಡ್ಡಿ

ನಾಲ್ಕನೇ ವಿಕೆಟ್‌ಗೆ ಜೊತೆಯಾದ ಹೆನ್ರಿಕ್‌ ಕ್ಲಾಸೆನ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಅವರು ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟ್‌ ಮಾಡಿದರು. ಈ ಇಬ್ಬರೂ 80 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಮ್ಮ ತಂಡವನ್ನು ಗೆಲುವಿನ ಸನಿಹ ತಂದಿದ್ದರು. 21 ರನ್‌ ಗಳಿಸಿದ ಬಳಿಕ ನಿತೀಶ್‌ ರೆಡ್ಡಿ ಔಟ್‌ ಆದರು. ಆದರೆ, ಭರ್ಜರಿ ಬ್ಯಾಟ್‌ ಬೀಸಿದ ಹೆನ್ರಿಕ್‌ ಕ್ಲಾಸೆನ್‌ 30 ಎಸೆತಗಳಲ್ಲಿ ಅಜೇಯ 65 ರನ್ (7 ಬೌಂಡರಿ, 4 ಸಿಕ್ಸರ್‌) ಗಳಿಸಿ ಅಂತಿಮವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ 18.4 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿ ಗೆಲುವಿ ದಡ ಸೇರಿತು. ಕೊನೆಯಲ್ಲಿ ಅರೋರಾ 10 ಎಸೆತಗಳಲ್ಲಿ ಅಜೇಯ 30 ರನ್‌ ಸಿಡಿಸಿದರು.



ಮುಂಬೈಗೆ ಭರ್ಜರಿ ಆರಂಭ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರ ನಿರ್ಧಾರವನ್ನು ಮೊದಲನೇ ವಿಕೆಟ್‌ಗೆ 93 ರನ್‌ ಜೊತೆಯಾಟವನ್ನು ಆಡುವ ಮೂಲಕ ಓಪನರ್ಸ್‌ ರಯಾನ್‌ ರಿಕಲ್ಟನ್‌ ಹಾಗೂ ವಿಲ್‌ ಜ್ಯಾಕ್ಸ್‌ ಸಮರ್ಥಿಸಿಕೊಂಡರು. ಈ ಜೋಡಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ವಿಲ್‌ ಜ್ಯಾಕ್ಸ್‌ ಆರಂಭದಲ್ಲಿ ಅಬ್ಬರಿಸಿ ಕೇವಲ 22 ಎಸೆತಗಳಲ್ಲಿ 46 ರನ್‌ ಗಳಿಸಿ ಅರ್ಧಶತದಂಚಿನಲ್ಲಿ ನಿತೀಶ್‌ ರೆಡ್ಡಿಗೆ ವಿಕೆಟ್‌ ಒಪ್ಪಿಸಿದರು.



ಸೂರ್ಯಕುಮಾರ್‌ ಯಾದವ್‌ (5) ಅವರು ಮತ್ತೊಮ್ಮೆ ವಿಫಲರಾದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ನಮನ್‌ ಧೀರ್‌ ಅವರು 22 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ನಮನ್‌ ಧೀರ್‌ ಹಾಗೂ ರಿಕೆಲ್ಟನ್‌ 55 ರನ್‌ಗಳ ಜೊತೆಯಾಟವನ್ನು ಆಡಿದರು. ಹಾರ್ದಿಕ್‌ ಪಾಂಡ್ಯ 31 ರನ್‌ ಗಳಿಸಿ ಕೆಲಕಾಲ ಬ್ಯಾಟ್‌ ಮಾಡಿ ರಿಕೆಲ್ಟನ್‌ ಜತೆ 56 ರನ್‌ ಜೊತೆಯಾಟವನ್ನು ಆಡಿ ವಿಕೆಟ್‌ ಒಪ್ಪಿಸಿದರು.



ಮುಂಬೈ ಪರ ವೇಗದ ಶತಕ ಬಾರಿಸಿದ ರಯಾನ್‌ ರಿಕೆಲ್ಟನ್‌

ಮುಂಬೈ ಇಂಡಿಯನ್ಸ್‌ ಪರ ಇನಿಂಗ್ಸ್‌ ಆರಂಭಿಸಿ 20 ಓವರ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ರಯಾನ್‌ ರಿಕೆಲ್ಟನ್‌ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು. 44 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್‌ ಪರ ವೇಗದ ಶತಕ ಸಿಡಿಸಿದರು ಹಾಗೂ 45 ಎಸೆತಗಳಲ್ಲಿ ಶತಕ ಬಾರಿಸಿದ್ದ ಸನತ್‌ ಜಯಸೂರ್ಯ ದಾಖಲೆಯನ್ನು ಮುರಿದಿದ್ದಾರೆ. ಇವರು ಅಂತಿಮವಾಗಿ 55 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 123 ರನ್‌ ಗಳಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು.