ನವದೆಹಲಿ: ಕಳೆದ 2026ರ ಐಸಿಸಿ ಟಿ20 ವಿಶ್ವಕಪ್(ICC T20 World Cup 2026) ಫೈನಲ್‌ನಲ್ಲಿ ಡ್ಯಾರಿಲ್ ಮಿಚೆಲ್ (Daryl Mitchell) ಜೊತೆ ನಡೆದಿದ್ದ ವಾಗ್ವಾದಕ್ಕಾಗಿ ಅರ್ಷದೀಪ್ ಸಿಂಗ್ (Arshdeep Singh) ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಆದರೆ ಐಸಿಸಿ ನಡವಳಿಕೆ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅರ್ಷದೀಪ್ ಅವರಿಗೆ ಪಂದ್ಯದ ಶುಲ್ಕದ 15 ಶೇಕಡಾ ದಂಡ ವಿಧಿಸಲಾಗಿದೆ. ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮತ್ತು ಡ್ಯಾರಿಲ್ ಮಿಚೆಲ್ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಅರ್ಷದೀಪ್ ಸಿಂಗ್ ಕ್ಷಮೆ ಕೇಳಬೇಕಾಗಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜಿಲೆಂಡ್ ತಂಡದ ರನ್ ಚೇಸ್ ವೇಳೆ ಈ ಘಟನೆ ನಡೆದಿದೆ. ಆ ಸಂದರ್ಭದಲ್ಲಿ ಡ್ಯಾರಿಲ್ ಮಿಚೆಲ್, ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ಗೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟರ್ ಕ್ರೀಸ್‌ನ ಹೊರಗೆ ಸ್ವಲ್ಪ ಮುಂದೆ ನಿಂತಿರುವುದನ್ನು ಗಮನಿಸಿದ ಅರ್ಷದೀಪ್ ರನ್‌ಔಟ್ ಮಾಡಲು ಪ್ರಯತ್ನಿಸಿದರು. ಆದರೆ ಅವರ ಎಸೆತ ಸ್ಟಂಪ್‌ಗಳನ್ನು ತಪ್ಪಿಸಿ ಮಿಚೆಲ್ ಅವರ ತೊಡೆಗೆ ತಗುಲಿತು. ಇದರಿಂದ ಮೈದಾನದಲ್ಲೇ ಇಬ್ಬರು ಆಟಗಾರರ ನಡುವೆ ಸ್ವಲ್ಪ ಕಾಲ ಮಾತಿನ ಚಕಮಕಿ ನಡೆಯಿತು.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್ಸ್!
ಆ ಥ್ರೋ ಅನಿರೀಕ್ಷಿತವಾಗಿತ್ತು ಎಂದು ಪಂದ್ಯ ಮುಗಿದ ಬಳಿಕ ಸ್ಪಷ್ಟಪಡಿಸಿದ ಅರ್ಷದೀಪ್ ಸಿಂಗ್, ಡ್ಯಾರಿಲ್ ಮಿಚೆಲ್ ಅವರ ಬಳಿ ಕ್ಷಮೆ ಕೂಡ ಕೇಳಿದ್ದರು. ಆದರೆ ಅರ್ಷದೀಪ್ ಅವರ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡರು. ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಇಂತಹ ಘಟನೆಗಳು ಸಾಮಾನ್ಯವೆಂದು ಹೇಳಿದ ಅವರು, ದೇಶವನ್ನು ಪ್ರತಿನಿಧಿಸುವ ಆಟಗಾರರು ಮೈದಾನದಲ್ಲಿ ಉತ್ಸಾಹ ಮತ್ತು ತೀವ್ರತೆ ತೋರಿಸುವುದು ಸಹಜ ಎಂದು ಹೇಳಿದ್ದಾರೆ.
ಡಗೌಟ್‌ನಲ್ಲಿ ನಗೋದಿಲ್ಲ ಏಕೆ? ಕೊನೆಗೂ ಕಾರಣ ತಿಳಿಸಿದ ಗೌತಮ್ ಗಂಭೀರ್!
ಅರ್ಷದೀಪ್ ಸಿಂಗ್ ಯಾವುದೇ ತಪ್ಪು ಮಾಡಿಲ್ಲ: ಗಂಭೀರ್
"ಅದು ಸರಿ. ನೀವು ನಿಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ. ಆಕ್ರಮಣಶೀಲತೆ ತೋರಿಸುವುದು ಸಹಜ. ನೀವು ಪ್ರತಿಕ್ರಿಯೆ ನೀಡಿದರೆ ಅದರಲ್ಲಿ ತಪ್ಪೇನು? ಯಾವುದೇ ಬೌಲರ್‌ಗೆ ಸತತ ಎರಡು ಸಿಕ್ಸರ್ ಹೊಡೆಸಿಕೊಳ್ಳುವುದು ಇಷ್ಟವಾಗುವುದಿಲ್ಲ. ನನ್ನ ಆಟಗಾರರಿಂದ ನಾನು ನೋಡಲು ಬಯಸುವ ಪ್ರತಿಕ್ರಿಯೆ ಅದೇ. ಇದರಲ್ಲಿ ಯಾವುದೇ ತಪ್ಪಿಲ್ಲ. ಅವನು ಕ್ಷಮೆ ಕೇಳದೇ ಇದ್ದರೂ ನನಗೆ ಯಾವುದೇ ಸಮಸ್ಯೆಯಿರಲಿಲ್ಲ. ಅವರು ಕ್ಷಮೆ ಕೇಳಬೇಕಾದ ಅಗತ್ಯವಿಲ್ಲ,” ಎಂದು ಗಂಭೀರ್ ಎಎನ್‌ಐ ಪಾಡ್‌ಕಾಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
“ಹೌದು, ಅವರು ಕ್ಷಮೆ ಕೇಳಿದ್ದು ಒಳ್ಳೆಯದೇ. ಆದರೆ ಕ್ರಿಕೆಟ್ ಮೈದಾನದಲ್ಲಿ ಸ್ನೇಹಿತರು ಅಥವಾ ಶತ್ರುಗಳು ಎಂಬುದಿಲ್ಲ. ನಿಮ್ಮ ಕೆಲಸ ನಿಮ್ಮ ದೇಶವನ್ನು ಪ್ರತಿನಿಧಿಸುವುದು ಮತ್ತು ದೇಶಕ್ಕಾಗಿ ಗೆಲ್ಲುವುದು. ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಆದರೆ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಇವು ಹೆಚ್ಚು ದೊಡ್ಡ ವಿಷಯವಾಗುತ್ತವೆ. ಆದರೆ ಅದರ ಅಗತ್ಯವಿಲ್ಲವೆಂದು ನಾನು ಭಾವಿಸುತ್ತೇನೆ,” ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
T20 World Cup: ಡ್ಯಾರಿಲ್ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಹೊಡೆದ ಅರ್ಷದೀಪ್ ಸಿಂಗ್‌ಗೆ ದಂಡ!
ಅರ್ಷದೀಪ್ ಸಿಂಗ್‌ಗೆ ದಂಡ
ಫೈನಲ್ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡವಳಿಕೆ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಪಂದ್ಯದ ಶುಲ್ಕದ 15 ಶೇಕಡಾ ದಂಡ ವಿಧಿಸಿತ್ತು. ಐಸಿಸಿ ತೀರ್ಪಿನ ಪ್ರಕಾರ, ಅರ್ಷದೀಪ್ ನಡವಳಿಕೆ ಸಂಹಿತೆಯ ವಿಧಿ 2.9 ಅಡಿಯಲ್ಲಿ ಲೆವೆಲ್ 1 ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವಿಧಿಯ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಕಡೆಗೆ ಅಥವಾ ಅವರ ಸಮೀಪಕ್ಕೆ ಚೆಂಡನ್ನು ಅಸಮರ್ಪಕ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವುದನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.