ನವದೆಹಲಿ: ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ತಾನು ಎದುರಿಸಿದ ಕಠಿಣ ಸಂಗತಿಗಳನ್ನು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಬಹಿರಂಗಪಡಿಸಿದ್ದಾರೆ. ಈ ಟೂರ್ನಿಯಲ್ಲಿನ ತಮ್ಮ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಮೆಂಟರ್ ಯುವರಾಜ್ ಸಿಂಗ್, ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಬೆಂಬಲವಾಗಿ ನಿಂತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ಅಂದ ಹಾಗೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಭಿ ಸ್ಪೋಟಕ ಅರ್ಧಶತಕ ಬಾರಿಸಿದ್ದರು ಹಾಗೂ ಭಾರತ ತಂಡ (India) ಗೆದ್ದು ಮೂರನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಇದೇ ಫಾರ್ಮ್ ಮೂಲಕ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಬಂದಿದ್ದರು. ಆದರೆ, ಅವರು ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರು. ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು ಹಾಗೂ ನಮೀಬಿಯಾ ಎದುರಿನ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಈ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳ ಡಕ್‌ಔಟ್ ಆಗಿದ್ದರು.
IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಕ್ಷರ್ ಪಟೇಲ್‌ಗೆ ಎಚ್ಚರಿಕೆ ನೀಡಿದ ಚೇತೇಶ್ವರ್ ಪೂಜಾರ!
ಯಶಸ್ಸು-ವೈಫಲ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು
ಹಿಂದೂಸ್ಥಾನ್ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಅಭಿಷೇಕ್ ಶರ್ಮಾ, ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಅವಧಿ ತಮ್ಮ ಮಾನಸಿಕ ಶಕ್ತಿಯನ್ನು ನಿಜವಾಗಿಯೂ ಪರೀಕ್ಷಿಸಿತು ಎಂದು ಒಪ್ಪಿಕೊಂಡರು. “ವಿಶ್ವಕಪ್ ಟೂರ್ನಿಯಲ್ಲಿ ಆಡುವಾಗ ಮಾನಸಿಕ ಶಕ್ತಿ ಮತ್ತು ಪ್ರಕ್ರಿಯೆಯ ಮಹತ್ವವನ್ನು ನೀವು ತ್ವರಿತವಾಗಿ ಕಲಿಯುತ್ತೀರಿ. ನನ್ನ ಪಾಲಿಗೆ ಪ್ರಮುಖ ಪಾಠ ಎಂದರೆ ಸಮತೋಲನವನ್ನು ಕಾಪಾಡಿಕೊಳ್ಳುವುದು, ಅಂದರೆ ಒಳ್ಳೆಯ ಇನಿಂಗ್ಸ್ ಬಳಿಕ ಅತಿಯಾದ ಉತ್ಸಾಹಕ್ಕೆ ಹೋಗದಿರುವುದು ಮತ್ತು ವೈಫಲ್ಯಗಳ ನಂತರ ಅತಿಯಾದ ನಿರಾಶೆಗೆ ಜಾರದಿರುವುದು," ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಸಂಪೂರ್ಣ ಬೆಂಬಲ
“ಸೂರ್ಯಕುಮಾರ್ ಭಾಯ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ನಾನು ಡಕ್ ಔಟ್ ಆದ ನಂತರವೂ ಅವರ ಸಂದೇಶ ಸ್ಪಷ್ಟವಾಗಿತ್ತು— ‘ನಿನ್ನ ಸಹಜ ಆಟ ಆಡೋದು ಮುಂದುವರಿಸು, ಫಲಿತಾಂಶದ ಬಗ್ಗೆ ಚಿಂತಿಸಬೇಡ.’ ನಾಯಕನಿಂದ ಈ ರೀತಿಯ ನಂಬಿಕೆ ಸಿಕ್ಕಾಗ ದೊಡ್ಡ ವ್ಯತ್ಯಾಸ ಉಂಟಾಗುತ್ತದೆ. ನಾಯಕ ಇಷ್ಟೊಂದು ವಿಶ್ವಾಸ ತೋರಿಸಿದಾಗ, ಭಯವಿಲ್ಲದೆ ಮೈದಾನದಲ್ಲಿ ಸ್ವತಂತ್ರವಾಗಿ ಆಟ ಆಡಲು ಸಾಧ್ಯವಾಗುತ್ತದೆ,” ಎಂದು ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.
ʻಫೈಯರ್ ಅಂಡ್ ಫೈಯರ್ʼ: ಅಭಿಷೇಕ್ ಶರ್ಮಾ ಜೊತೆಗಿನ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ!
“ನಾನು ನಿಯಮಿತವಾಗಿ ಯುವರಾಜ್ ಸಿಂಗ್ ಅವರೊಂದಿಗೆ ಮಾತನಾಡುತ್ತಿದ್ದೆ. ಅವರು ಯಾವಾಗಲೂ ನೇರವಾದ ಸಲಹೆ ನೀಡುವ ವ್ಯಕ್ತಿ. ಅವರ ಸಂದೇಶ ಸರಳವಾಗಿತ್ತು — ‘ನೀನು ಯಾವ ರೀತಿಯ ಆಟಗಾರನೋ ಅದನ್ನು ಬದಲಾಯಿಸಬೇಡ.’ ಆಕ್ರಮಣಕಾರಿ ಆಟಗಾರರಿಗೆ ಇಂತಹ ಹಂತಗಳು ಬರುತ್ತವೆ, ಆದರೆ ನಿಮ್ಮ ಶಕ್ತಿಗಳ ಮೇಲೆ ನಂಬಿಕೆ ಇಟ್ಟರೆ ರನ್‌ಗಳು ಖಂಡಿತ ಬರುತ್ತವೆ ಎಂದು ಅವರು ಹೇಳಿದ್ದರು,” ಎಂದು ಎಡಗೂ ಬ್ಯಾಟ್ಸ್‌ಮನ್ ಹೇಳಿದ್ದಾರೆ.